ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರಿಗೆ ಆಸರೆಯಾದ ‘ಖಾದಿ’

Last Updated 2 ಅಕ್ಟೋಬರ್ 2017, 5:58 IST
ಅಕ್ಷರ ಗಾತ್ರ

ಯಳಂದೂರು: ‘ಆಜಾದಿ ಕೆ ಪೆಹಲೆ ಖಾದಿ ಫಾರ್ ನೇಷನ್ ಅಂಡ್ ಆಜಾದಿ ಕೆ ಬಾದ್ ಖಾದಿ ಫಾರ್ ಫ್ಯಾಷನ್’ ಎಂಬುದು ಹೊಸ ಘೋಷ ವಾಕ್ಯ. ಇದನ್ನು ಸಾಕ್ಷೀಕರಿಸುವಂತೆ ಇಲ್ಲಿ ಚರಕ ಈಗಲೂ ಉಸಿರಾಡುತ್ತಿದೆ. ಅರಳೆ ಹಿಂಜುತ್ತಾ ದಾರ ಹೆಣೆಯುವ ಮಂದಿಗೆ ಬದುಕು ಕಟ್ಟುವ ಕಲೆ ಕಲಿಸಿದೆ ಕೈಮಗ್ಗ. ನೂಲು ಪೋಣಿಸುತ್ತಲೇ ಚಂದದ ಸೀರೆ, ಹೆಗಲೇರುವ ದುಪ್ಪಟ, ಮೈಮುಚ್ಚುವ ವಸ್ತ್ರ ಹಸನಾಗಿ ಸಿದ್ಧಗೊಳುತ್ತದೆ.

ಹೌದು, ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ)ದಲ್ಲಿ ಗ್ರಾಮಾಭಿವೃದ್ಧಿಯ ಚಿಂತನೆಗಳೂ ಸಕ್ರಿಯವಾಗಿವೆ. ಗಿರಿಜನರು ಹಲವು ನಮೂನೆಯ ಖಾದಿ ಉತ್ಪನ್ನ ಮಾರಾಟ ಮಾಡುವ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ.

ವಿಜಿಕೆಕೆ 1983 ರಲ್ಲಿ ಗಿರಿವಾಸಿಗಳನ್ನು ಸಂಘಟಿಸುವ ದೃಷ್ಟಿಯಿಂದ ಜವಳಿ ವೃತ್ತಿ ಕೌಶಲವನ್ನು ರೂಪಿಸಿತು. ಇವರಿಗೆ ಸರಳ ಜೀವನ, ಬಟ್ಟೆ ಹಾಗೂ ಭೇದಭಾವ ರಹಿತ ವ್ಯವಸ್ಥೆ ಕಲ್ಪಿಸುವ ಆಶಯ ಹೊಂದಲಾಗಿತ್ತು. ಇದನ್ನು ಮನಗಂಡ ತಮಿಳುನಾಡಿನ ಗಾಂಧಿವಾದಿ ಆರ್ಮುಗಂ ಖಾದಿ ಪ್ರಚಾರಕ್ಕೆ ಒತ್ತುಕೊಟ್ಟರು. ಸೋಲಿಗರಿಗೆ ತರಬೇತಿ ನೀಡುತ್ತಲೇ ಗೃಹ ಕೈಗಾರಿಕೆಯ ಭಾಗವಾಗಿ ಪ್ರೇರೇಪಿಸಿದರು. ಹತ್ತಾರು ಕುಟುಂಬಗಳು ನೂಲು ತೆಗೆಯುವ ಕಸುಬಿನಲ್ಲಿ ಪರಿಣಿತರಾದರು. ಕೆಲವರು ಮನೆಯಲ್ಲಿಯೇ ಖಾದಿ ಬಟ್ಟೆ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಾರ್ಷಿಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಕೇಂದ್ರವು ಉತ್ಪನ್ನಗಳನ್ನು ನೆರೆ ರಾಜ್ಯದಿಂದ ಪಡೆಯುತ್ತಿದೆ. ಬಟ್ಟೆ ಸಿದ್ಧಗೊಂಡ ನಂತರ ತಮಿಳುನಾಡಿಗೆ ಪೂರೈಸಿ ಪಾಲಿಶಿಂಗ್ ಮಾಡಿಸಲಾಗುತ್ತದೆ. ಆ ನಂತರವೇ ಗ್ರಾಹಕರ ಬಳಕೆಗೆ ಸಿದ್ಧವಾಗುತ್ತದೆ.

‘ಬೆಲೆ ಮೀಟರ್‌ಗೆ ₹50ರಿಂದ ಆರಂಭವಾಗುತ್ತದೆ. 2 ದಿನದಲ್ಲಿ 1ಸೀರೆ ಸಿದ್ಧವಾಗುತ್ತದೆ. ಹೆಣ್ಣುಮಕ್ಕಳ ಅಭಿರುಚಿಗೆ ತಕ್ಕಂತೆ ಖಾದಿ ಮತ್ತು ರೇಷ್ಮೆ ಮಿಶ್ರಿತ ಬುಟ್ಟಾ ಪಲ್ಲು, ಬಾರ್ಡರ್, ಟಿಶ್ಯು, ಸನ್‌ರೈಸ್, ಎಲ್ಪಿ ಮತ್ತು ಚೆಕ್ಸ್‌ ಸೀರೆ ನಮೂನೆಗಳಿಗೆ ಬೇಡಿಕೆ ಹೆಚ್ಚು. ಧಾರಣೆ ₹3 ಸಾವಿರ ತನಕ ಇದೆ. ಇವುಗಳು ಹೆಚ್ಚು ಸಮಯ ಬೇಡುವ ಉಡುಪು’ ಎನ್ನುತ್ತಾರೆ ಮಗ್ಗದ ಮೇಲ್ವಿಚಾರಕ ಕೊಳ್ಳೇಗಾಲ ವೆಂಕಟೇಶ.

ಆರಂಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದ ವತಿಯಿಂದ ಅರಳೆಯಿಂದ ದಾರ ತೆಗೆದು ದಾವಣಗೆರೆಗೆ ನೀಡಲಾಗುತ್ತಿತ್ತು. ನಂತರ ಅಲ್ಲಿಂದ ಬಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ಇದನ್ನು ಮನಗಂಡ ಖಾದಿ ತಜ್ಞರಾದ ಕೃಷ್ಣಮೂರ್ತಿ ಮತ್ತು ಸೋಮಸುಂದರ್‌ ನೆರವಾದರು. ಇಷ್ಟರಲ್ಲಿಯೇ ಖಾದಿ ಉದ್ಯಮ ನವೀಕರಣ ಆಗಲಿದೆ.

ಇಲ್ಲಿನ ಉತ್ಪನ್ನಗಳು ಮೈಸೂರು, ಬೆಂಗಳೂರು ಮತ್ತು ಕೊಳ್ಳೇಗಾಲ ಮಳಿಗೆಗಳಲ್ಲಿ ದೊರೆಯುತ್ತದೆ. ಕೇಂದ್ರದ ಮಕ್ಕಳಿಗೆ ಬೇಕಾದ ರಗ್ಗು, ಸಮವಸ್ತ್ರ ಇಲ್ಲಿಯೇ ಬಳಕೆ ಆಗುತ್ತದೆ. ‘ಇಲ್ಲಿಗೆ ಭೇಟಿ ನೀಡುವ ನ್ಯಾಯಾಧೀಶರು ನಿಗದಿತ ಬೆಲೆಗಿಂತ ಹೆಚ್ಚು ನೀಡಿ ಖಾದಿ ಕೊಂಡಿದ್ದಾರೆ. ಡಾ. ಎಚ್‌. ಸುದರ್ಶನ್‌ ಅವರು ಇಲ್ಲಿ ತಯಾರಾದ ಬಟ್ಟೆಯಿಂದ ಜುಬ್ಬ ಮತ್ತು ಪೈಜಾಮ ಧರಿಸುತ್ತಾರೆ’ ಎನ್ನುವ ಕಳಕಳಿ ವ್ಯಕ್ತಪಡಿಸುತ್ತಾರೆ ಪರಿಸರ ತಜ್ಞ ರಾಮಾಚಾರಿ.

ಸರ್ಕಾರದ ನೆರವು ಮತ್ತು ವಿದ್ಯುತ್‌ ಬಳಸಿ ಆಧುನಿಕ ಯಂತ್ರದಿಂದ ವಸ್ತ್ರ ಉತ್ಪಾದಿಸಲು ಸಿದ್ಧತೆ ನಡೆಸಿದ್ದೇವೆ. ಮಕ್ಕಳಿಗೂ ಉದ್ಯೋಗ ಲಭಿಸುತ್ತದೆ. ತಾಂತ್ರಿಕ ನೆರವನ್ನು ವಿಜಿಕೆಕೆ ನೀಡಿದೆ. ಮಾರಾಟಕ್ಕೂ ಕೇಂದ್ರವನ್ನು ನಂಬಿದ್ದೇನೆ ಎನ್ನುತ್ತಾರೆ ಸೋಲಿಗರ ವೀರಮ್ಮ ಮತ್ತು ಗಣಪತಿ ರಂಗೇಗೌಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT