ನೀರಾವರಿ ಯೋಜನೆ ಅನುಷ್ಠಾನಕ್ಕೆ ಬದ್ಧತೆ ಅಗತ್ಯ

ಮಂಗಳವಾರ, ಜೂನ್ 18, 2019
31 °C

ನೀರಾವರಿ ಯೋಜನೆ ಅನುಷ್ಠಾನಕ್ಕೆ ಬದ್ಧತೆ ಅಗತ್ಯ

Published:
Updated:

ಚಿಂತಾಮಣಿ: ಸದಾ ಬರಗಾಲಕ್ಕೆ ತುತ್ತಾಗುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸಲು ಸರ್ಕಾರ ಇಚ್ಛಾಶಕ್ತಿ ಹಾಗೂ ಬದ್ಧತೆ ತೋರಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಯುವಶಕ್ತಿಯ ರಾಜ್ಯ ಘಟಕದ ಅಧ್ಯಕ್ಷ ಶಿವಪ್ರಕಾಶರೆಡ್ಡಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಯುವಶಕ್ತಿ ಘಟಕ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಎರಡು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೂ ಆಡಳಿತ ನಡೆಸುವ ಸರ್ಕಾರಗಳು ಭರವಸೆ ಕೊಡುವುದರಲ್ಲೇ ಕಾಲ ಕಳೆಯುತ್ತಿವೆ. ಭಾರಿ ಭರವಸೆಯೊಂದಿಗೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದ ಸರ್ಕಾರ ಎರಡು ವರ್ಷದ ಒಳಗೆ ನೀರು ಕೊಡುವುದಾಗಿ ಆಶ್ವಾಸನೆ ನೀಡಿತ್ತು. ನಾಲ್ಕೈದು ವರ್ಷ ಕಳೆದರೂ ಶೇ 20ರಷ್ಟು ಕೆಲಸವಾಗಿಲ್ಲ ಎಂದು ಟೀಕಿಸಿದರು.

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗ ಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಹರಿಸುವುದಾಗಿ ಹೇಳುತ್ತಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಎರಡು ಬಾರಿ ಸಂಸ್ಕರಿಸಿದ ನೀರಿನಿಂದ ಅಪಾಯವಿದೆ ಎಂದು ತಿಳಿಸಿದ್ದಾರೆ. ಕೊಳಚೆ ನೀರನ್ನು ಮೂರು ಬಾರಿ ಸಂಸ್ಕರಿಸುವಂತೆ ಹೋರಾಟಗಾರರು ಸತತವಾಗಿ ಒತ್ತಾಯಿಸಿದರೂ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ನಿಲುವನ್ನು ಪ್ರಶ್ನಿಸಿ, ನೀರಾವರಿ ಯೋಜನೆಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದರೆ, ಹೋರಾಟಗಾರರನ್ನು ಬಂಧಿಸಿ ಪ್ರಜಾಪ್ರಭುತ್ವದ ಕಗ್ಗೊಲೆ‌ ಮಾಡಲು ಹೊರಟಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ವಿಜಯಬಾವರೆಡ್ಡಿ ಮಾತನಾಡಿ, ಬಯಲುಸೀಮೆಯ ಜಿಲ್ಲೆಗಳಿಗೆ ಇದುವರೆಗೂ ಅನುಷ್ಠಾನ ಮಾಡಿರುವ ನೀರಾವರಿ ಯೋಜನೆಗಳು, ಅದರ ವೆಚ್ಚ, ಯೋಜನೆಯಿಂದ ದೊರೆತಿರುವ ಪ್ರತಿಫಲದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಯ ಸಂಸ್ಕರಿತ ನೀರಿನ ಶುದ್ಧತೆ ಪರಿಶೀಲಿಸಲು ಮತ್ತು ಎತ್ತಿನಹೊಳೆ ಯೋಜನೆಯಿಂದ ದೊರೆಯುವ ನೀರಿನ ಪ್ರಮಾಣದ ಕುರಿತು ತಾಂತ್ರಿಕ ಪರಿಶೀಲನಾ ಸಮಿತಿ ರಚಿಸಿ ಜನರ ಸಂಶಯವನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಎರಡು ಬೇಡಿಕೆಗಳಿಗೆ ಸ್ಪಂದಿಸದೆ ಸಾರ್ವಜನಿಕರನ್ನು ಕಡೆಗಣಿಸಿದರೆ ಹೋರಾಟಗಾರರು ಬಯಲುಸೀಮೆಯ ಮನೆ ಮನೆಗೂ ತೆರಳಿ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ತಿಳಿಸಿ ಜನಾಂದೋಲನ ರೂಪಿಸಲಾಗುವುದು ಎಂದು ತಿಳಿಸಿದರು.

ಯುಶಕ್ತಿ ಸಂಘಟನೆ ರಾಜ್ಯ ಘಟಕದ ಮುಖಂಡರಾದ ಮಂಜುನಾಥರೆಡ್ಡಿ, ಜಿಲ್ಲಾ ಘಟಕದ ಮುಖಂಡರಾದ ಎಸ್‌.ಲೋಕೇಶ್‌, ಎನ್‌.ಪಿ.ನಾಗಭೂಷಣ, ತಾಲ್ಲೂಕು ಘಟಕದ ಮುಖಂಡರಾದ ಆರ್‌. ನವೀನ್‌, ಜಿ. ಸುಧಾಕರ್‌, ಎನ್‌. ನವೀನ್‌ ಕುಮಾರ್‌, ಕೆ.ವಿ. ಮಣಿಕಂಠ, ವಿಶಾಲ್‌, ಹೆಬ್ಬರಿ ಶ್ರೀನಾಥ್‌ರೆಡ್ಡಿ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry