ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳ ದರ್ಶನಕ್ಕೆ ಹೆಲಿಕಾಪ್ಟರ್‌

Last Updated 2 ಅಕ್ಟೋಬರ್ 2017, 6:59 IST
ಅಕ್ಷರ ಗಾತ್ರ

ಹಾಸನ: ಫೆಬ್ರುವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ‘ಹೆಲಿ ಟೂರಿಸಂ’ ಪರಿಚಯಿಸಲಾಗುತ್ತಿದೆ.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು, ಪ್ರವಾಸಿಗರು ಬರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಕಡಿಮೆ ದರದಲ್ಲಿ ಹೆಲಿಕಾಪ್ಟರ್‌ ಸೇವೆ ಒದಗಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಹೆಲಿಕಾಪ್ಟರ್ ಸೇವೆ ಒದಗಿಸಲು ಮುಂದೆ ಬಂದಿರುವ ಕೇಂದ್ರದ ಪವನ್‌ ಹನ್ಸ್‌ ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಜ್ಞಾನಪ್ರಕಾಶ್‌ ಜತೆ ಸಚಿವ ಎ.ಮಂಜು ಮತ್ತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಗೆ ಕಡಿಮೆ ದರದಲ್ಲಿ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು. ಅದಕ್ಕಾಗಿ ಮೈಸೂರು ಮಾದರಿಯಲ್ಲಿ ಹೆಲಿ ರೈಡ್‌ (ಒಬ್ಬರಿಗೆ ₹ 2,300; 8 ನಿಮಿಷ ಸುತ್ತಾಟ) ಜಾರಿಗೆ ತರುವ ಚಿಂತನೆ ನಡೆದಿದೆ.

‘ಶ್ರವಣಬೆಳಗೊಳದಲ್ಲಿ ಶಾಶ್ವತ ಹೆಲಿಪ್ಯಾಡ್‌ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಜೈನ ಮಠದಿಂದ ಜಾಗ ಪಡೆಯಬಹುದು ಅಥವಾ ತಾತ್ಕಾಲಿಕವಾಗಿ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.

‘ಸಾಮಾನ್ಯ ಪ್ರಜೆಗೂ ಹೆಲಿ ರೈಡ್‌ ಮಾಡುವ ಅವಕಾಶ ಸಿಗಬೇಕು. 4, 8, 14 ಆಸನಗಳ ಕಾಪ್ಟರ್‌ ಸೇವೆ ಒದಗಿಸಲು ಪವನ್‌ ಹನ್ಸ್‌ ಮುಂದೆ ಬಂದಿದೆ. 3, 5, 8 ನಿಮಿಷ ಪ್ಯಾಕೇಜ್‌ ಪ್ರಸ್ತಾವ ಮುಂದಿಟ್ಟಿದೆ. ದರ, ಸಮಯ ಹಾಗೂ ಎಷ್ಟು ಆಸನಗಳ ಕಾಪ್ಟರ್‌ ಬಳಸಬೇಕು ಎಂಬುದನ್ನು ಜಿಲ್ಲಾಡಳಿತ ತೀರ್ಮಾನಿಸಲಿದೆ.

ಹೆಚ್ಚು ಆಸನಗಳು ಇರುವುದನ್ನು ಬಳಸಿದರೆ ಅನುಕೂಲವಾಗುತ್ತದೆ. ಬಾಹುಬಲಿ ಪ್ರತಿಮೆ, ಬೇಲೂರು, ಹಳೇಬೀಡು, ಸಕಲೇಶಪುರದ ಪಶ್ಚಿಮಘಟ್ಟ ಸೌಂದರ್ಯವನ್ನು ಫೆಬ್ರುವರಿ ತಿಂಗಳು ಪೂರ್ತಿ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ವಿಶೇಷ ಅಧಿಕಾರಿ ವರಪ್ರಸಾದ ರೆಡ್ಡಿ ‘ಪ್ರಜಾವಾಣಿ’ಗೆ ಹೇಳಿದರು.

‘ಪವನ್‌ ಹನ್ಸ್‌ ಸಂಸ್ಥೆ ವಿಜಯವಾಡದಲ್ಲಿ ನಡೆದ ಮಹೋತ್ಸವದಲ್ಲಿ ಹೆಲಿ ಟೂರಿಸಂ ಪರಿಚಯಿಸಿ ಯಶಸ್ವಿಯಾಗಿದೆ. ಪ್ರಮುಖವಾಗಿ ಮಹೋತ್ಸವಕ್ಕೆ ಬರುವ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ಹಾಗಾಗಿ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಸಂಸ್ಥೆ ಅಧಿಕಾರಿಗಳ ಜತೆ ಅ. 7ರಂದು ಜಿಲ್ಲಾಡಳಿತ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಂತರ ಆನ್‌ ಲೈನ್‌ನಲ್ಲಿ ಬುಕಿಂಗ್‌ ಮಾಡಲು ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

‘ಚನ್ನರಾಯಪಟ್ಟಣ ಮಾರ್ಗದಲ್ಲಿ 4–5 ಎಕರೆ ಜಾಗ ನೀಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಜೈನ ಮಠಕ್ಕೂ ಮನವಿ ಮಾಡಲಾಗಿದೆ. ಜಾಗ ದೊರೆತ ತಕ್ಷಣ ಪೊಲೀಸ್‌ ಇಲಾಖೆಯ ಸಹಕಾರ ಪಡೆದು ನಿಬಂಧನೆಗಳಿಗೆ ಒಳಪಟ್ಟು ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುರೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT