ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮರ ನೆನಪುಗಳಿಗೆ ಮರು ಜೀವ

Last Updated 2 ಅಕ್ಟೋಬರ್ 2017, 7:08 IST
ಅಕ್ಷರ ಗಾತ್ರ

ಹಾವೇರಿ: ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಹಿಡಿದು ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ವಿಶ್ವ ಕಂಡ ಶ್ರೇಷ್ಠ ಸಂತ, ಮಹಾತ್ಮ ಮೋಹನದಾಸ ಕರಮಚಂದ ಗಾಂಧೀಜಿ. ಅವರು 1 ಮಾರ್ಚ್‌ 1934 ರಲ್ಲಿ ಹಾವೇರಿಗೂ ಭೇಟಿ ನೀಡಿದ್ದರು. ಆಗ ಸ್ವತಃ ಶಿಲಾನ್ಯಾಸ ನೆರವೇರಿಸಿದ್ದ ನಗರದ ರೈಲ್ವೆ ನಿಲ್ದಾಣ ಬಳಿಯ ‘ಧರ್ಮಶಾಲಾ’ದ ಸ್ಥಳದಲ್ಲಿ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ‘ಗಾಂಧಿ ಭವನ’ ನಿರ್ಮಿಸಲು ಇದೀಗ ಮುಂದಾಗಿದೆ.

‘ಮಹಾತ್ಮ’ರ ನೆನಪುಗಳಿಗೆ ಮರುಜೀವ ನೀಡುವ ಈ ಕಟ್ಟಡವು ಜಿಲ್ಲಾಡಳಿತದ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಸೋಮವಾರ (ಅ2ರಂದು) ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಶಿಲಾನ್ಯಾಸ ನೆರವೇರಿಸುವರು.

ಗಾಂಧೀಜಿ ಜಿಲ್ಲೆಗೆ ಭೇಟಿ ನೀಡಿದ ದಾಖಲೆಗಳು, ಕುರುಹುಗಳು ಇದ್ದರೂ, ಅಂತಹ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಗಳು ನಡೆದಿರಲಿಲ್ಲ. ಗಾಂಧೀಜಿ ಅಂದು ಭಾಷಣ ಮಾಡಿದ್ದ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಗಾಂಧಿ ಕಟ್ಟೆ, ಅನಾವರಣಗೊಳಿಸಿದ ರವೀಂದ್ರ ಠಾಗೂರ್ ಭಾವಚಿತ್ರ, ಶಂಕುಸ್ಥಾಪನೆ ನೆರವೇರಿಸಿದ ಧರ್ಮಶಾಲಾ ಕಟ್ಟಡ, ಭೇಟಿ ನೀಡಿದ್ದ ಹೊಂಡದ ಮಠ, ರಾಜೇಂದ್ರ ನಗರದ ಮನೆ ಸೇರಿದಂತೆ ಹಲವು ಸ್ಮರಣೀಯ ಸ್ಥಳಗಳು ಇನ್ನೂ ಅಭಿವೃದ್ಧಿಗೊಂಡಿಲ್ಲ.

ಗಾಂಧೀಜಿ ಭೇಟಿ: 1 ಮಾರ್ಚ್‌ 1934ರಲ್ಲಿ ‘ಧರ್ಮಶಾಲಾ’ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅಂದು ಸಂಜೆ ಚಿತ್ರದುರ್ಗ ಮುರುಘರಾಜೇಂದ್ರ ಮಠದ 17ನೇ ಪೀಠಾಧಿಪತಿ ಜಯದೇವ ಮುರುಘರಾಜೇಂದ್ರ ಶರಣರ ಜೊತೆ ಇಲ್ಲಿನ ಹೊಂಡದ ಮಠದಲ್ಲಿ ಮಾತುಕತೆ ನಡೆಸಿದ್ದರು. ಮುನ್ಸಿಫಲ್‌ ಹೈಸ್ಕೂಲ್ ಬಳಿಯ ಕಟ್ಟೆಯಲ್ಲಿ ಕುಳಿತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

‘ಗಾಂಧೀಜಿ ಭಾಷಣ ಮಾಡಿದ ಕಟ್ಟೆಯೇ ‘ಗಾಂಧಿ ಕಟ್ಟೆ’ ಎಂದು ಜನಪ್ರಿಯತೆ ಪಡೆಯಿತು. ಅಂದು 30 ಸಾವಿರಕ್ಕೂ ಅಧಿಕ ಜನ ಗಾಂಧೀಜಿ ಭಾಷಣ ಆಲಿಸಿದ್ದರು ಎನ್ನಲಾಗಿದೆ. ಹಾವೇರಿಯ ವೆಂಕಟೇಶ್ ಚವಟಿ ನೀಡಿದ ರವೀಂದ್ರನಾಥ ಠ್ಯಾಗೋರರ ಭಾವಚಿತ್ರವನ್ನು ಹೈಸ್ಕೂಲ್ ಆವರಣದಲ್ಲಿ ಅನಾವರಣಗೊಳಿಸಿದ್ದರು’ ಎನ್ನುತ್ತಾರೆ ಉಪನ್ಯಾಸಕ ಪ್ರಮೋದ ನಲವಾಗಿಲು.

ಧರ್ಮ ಶಾಲಾ: ಹರಿಜನೋದ್ಧಾರ, ಸಮಾನತೆ ಮತ್ತಿತರ ಧ್ಯೇಯಗಳೊಂದಿಗೆ ಪ್ರವಾಸ ಮಾಡುತ್ತಿದ್ದ ಗಾಂಧೀಜಿ, ‘ಧರ್ಮ ಶಾಲಾ’ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದರು. ಆದರೆ, ಸ್ವಾತಂತ್ರ್ಯ ಬಳಿಕ ಆ ಕಟ್ಟಡದ ಮೂಲ ಉದ್ದೇಶ ನನೆಗುದಿಗೆ ಬಿತ್ತು. ಸರ್ಕಾರಿ ಕಚೇರಿಗೆ, ಗೋದಾಮಿಗೆ ಬಳಕೆಯಾಯಿತು. ಕೆಲವು ಪ್ರಭಾವಿಗಳು ಪರಭಾರೆ ಮಾಡಲು ಪ್ರಯತ್ನಿಸಿದ್ದರು. ಪಾಳುಕೊಂಪೆಯಾಗಿ ಕುಡುಕರು, ಗುಟ್ಕಾವಾಲಾಗಳು, ಜೂಜುಕೋರರ ಅಡ್ಡೆಯಾಯಿತು.

ಈ ಕಟ್ಟಡದ ಪುನಶ್ಚೇತನಕ್ಕೆ ಕಳೆದೆರಡು ವರ್ಷಗಳಿಂದ ಜಿಲ್ಲಾಡಳಿತ ನೇತೃತ್ವದಲ್ಲಿ ಸಚಿವರು, ಜಿಲ್ಲಾಧಿಕಾರಿಗಳು, ನಗರಾಭಿವೃದ್ಧಿ ಪ್ರಾಧಿಕಾರವು ಸತತ ಪ್ರಯತ್ನ ನಡೆಸಿತ್ತು. ಈ ನಡುವೆಯೇ ‘ಗಾಂಧಿ ಭವನ’ದ ಪರಿಕಲ್ಪನೆಗೆ ಸೂಕ್ತ ಸ್ಥಳವಾಗಿ ಆಯ್ಕೆಯಾಯಿತು. ರಾಜ್ಯದಲ್ಲೇ ಅನನ್ಯ ‘ಗಾಂಧಿ ಭವನ’ ಎಂಬ ಹೆಮ್ಮೆಗೂ ಪಾತ್ರವಾಗಲಿದೆ.

‘ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ನಿಸರ್ಗ ರಮಣೀಯ ಸ್ಥಳಗಳ ಜೊತೆ ಸಂತರ, ಸಾಧಕರ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಹೇಳಿದ್ದಾರೆ. ‘ಗಾಂಧಿ ಭವನಕ್ಕೆ ಮಂಜೂರಾದ ₹3 ಕೋಟಿ ಪೈಕಿ, ₹2.2 ಕೋಟಿ ಬಿಡುಗಡೆಯಾಗಿದೆ. ರಾಜ್ಯದಿಂದ ವಿನ್ಯಾಸ, ಯೋಜನೆಗಳ ಮಾಹಿತಿ ಬಂದ ತಕ್ಷಣೇ ಕಾಮಗಾರಿ ಆರಂಭಗೊಳ್ಳಲಿದೆ’ ಎನ್ನುತ್ತಾರೆ ವಾರ್ತಾಧಿಕಾರಿ ರಂಗನಾಥ ಕುಳಗಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT