ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಕೋರೈಸಿದ ದಶಮಂಟಪ ಶೋಭಾಯಾತ್ರೆ

Last Updated 2 ಅಕ್ಟೋಬರ್ 2017, 8:37 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ, ಕಿವಿಗಡಚಿಕ್ಕುವ ಧ್ವನಿವರ್ಧಕದ ಸದ್ದು, ಕುಣಿದು ಕುಪ್ಪಳಿಸುವ ಕಲಾಪ್ರೇಮಿಗಳು, ನಾಲ್ಕೈದು ವಾಹನಗಳನ್ನು ಜೋಡಿಸಿ ಕಣ್ಮನ ಸೆಳೆಯುವಂತೆ ನಿರ್ಮಿಸಿದ್ದ ವಿವಿಧ ಕಲಾಕೃತಿ... ಇವು ಗೋಣಿಕೊಪ್ಪಲು ದಸರಾ ಉತ್ಸವದ ದಶಮಂಟಪ ಶೋಭಾಯಾತ್ರೆಯಲ್ಲಿ ಶನಿವಾರ ರಾತ್ರಿ ಕಂಡು ಬಂದ ದೃಶ್ಯವೈಭವ ಇದು.

ವಿಜಯದಶಮಿಯಂದು ಸೂರ್ಯ ಮುಳುಗಿದಾಗ ಇತ್ತ ಗೋಣಿಕೊಪ್ಪಲು ಪಟ್ಟಣದಲ್ಲಿ ದೀಪಗಳು ಬೆಳಗಿದವು. ಅಂಗಡಿ ಮುಂಗಟ್ಟುಗಳ ಮುಂದೆ ಇದೇ ಮೊದಲ ಬಾರಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಪೋಲಿಸ್ ಕಚೇರಿಗಳ ಕಟ್ಟಡವೂ ಝಗಮಗಿಸಿತು. ಅಲಂಕಾರಗಳ ಬೆಳಕು ಒಂದೆಡೆಯಾದರೆ, ದಶಮಂಟಗಳ ಬೆಳಕು ಮತ್ತೊಂದೆಡೆ. ಎಲ್ಲ ಸೇರಿಕೊಂಡು ವರ್ಣರಂಜಿತ ರಾತ್ರಿ ಕಳೆಗಟ್ಟಿತು.

ಕಾವೇರಿ ದಸರಾ ಸಮಿತಿ ಸಭಾಂಗಣದಲ್ಲಿದ್ದ ಚಾಮುಂಡೇಶ್ವರಿ ವಿಗ್ರಹಕ್ಕೆ ರಾತ್ರಿ 9.30ರ ವೇಳೆಯಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಿ ವಿಗ್ರಹವನ್ನು ಹೊತ್ತ ಕಾವೇರಿ ದಸರಾ ಸಮಿತಿ ಮಂಟಪ ಶೋಭಾಯಾತ್ರೆಯಲ್ಲಿ ಮುನ್ನಡೆಯಿತು. ಉಳಿದ ಮಂಟಪಗಳು ಅದನ್ನು ಹಿಂಬಾಲಿಸಿದವು. ಒಂದೊಂದು ಮಂಟಗಳ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರಿದ್ದರು.

ಸಂಭ್ರಮಕ್ಕೆ ತಣ್ಣೀರೆರಚಿದ ಮಳೆ: ದಸರಾ ವೀಕ್ಷಿಸಲು ಜನರು ಲಗುಬಗೆಯಿಂದ ಹೊರಡುವ ವೇಳೆಗೆ ಆರಂಭಗೊಂಡ ಧಾರಾಕಾರ ಮಳೆ ಸಂತಸಕ್ಕೆ ತಣ್ಣೀರೆರೆಚಿತು. ರಾತ್ರಿ 8 ಗಂಟೆಯಿಂದ 11ರವರೆಗೆ ಸುರಿದ ಮಳೆಯಲ್ಲಿಯೇ ಪ್ರೇಕ್ಷಕರು ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಪರಿ ಆನಂದದಾಯಕವಾಗಿತ್ತು. ಆಮೇಲೆ, ಮಳೆ ಬಿಡುವುಕೊಟ್ಟಿದ್ದರಿಂದ ಮನೆಯಲ್ಲಿದ್ದ ಜನತೆ ತಂಡೋಪ ತಂಡವಾಗಿ ಬರಲು ಪ್ರಾರಂಭಿಸಿದರು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನರ ಪಾಲ್ಗೊಳ್ಳುವಿಕೆ ಕಡಿಮೆಯಿತ್ತು.

ಧರಣಿಯ ಬಿಸಿ: ಮಳೆಯಿಂದ ದಶಮಂಟಪಗಳು ಹೊರಡುವುದು ತಡವಾಯಿತು. ಇದರಿಂದ ಕೆಲವು ಮಂಟಪಗಳು ಬಸ್ ನಿಲ್ದಾಣದ ಬಳಿಗೆ ಬರುವ ವೇಳೆಗೆ ಬೆಳಿಗ್ಗೆ 7 ಗಂಟೆಯಾಗಿತ್ತು. ಇದರಿಂದ ಅವರಿಗೆ ಪ್ರದರ್ಶನಕ್ಕೆ ಅವಕಾಶವಾಗಲಿಲ್ಲ. ಈ ನಡುವೆಯೆ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್.ಪ್ರಕಾಶ್ ಮಂಟಪಗಳ ಬಹುಮಾನ ಘೋಷಿಸಿದರು.

ಇದರಿಂದ ಬೇಸರಗೊಂಡ ಹರೀಶ್ಚಂದ್ರಪುರದ ನಮ್ಮ ದಸರಾ ಸಮಿತಿ ಮಂಟಪ ಆಯೋಜಕರು ಸ್ಥಳದಲಿಯೇ ಧರಣಿಗೆ ಮುಂದಾದರು. ಪ್ರದರ್ಶನಗೊಳ್ಳುವ ಮೊದಲೇ ಬಹುಮಾನ ಘೋಷಿಸಿರುವುದು ಅನ್ಯಾಯ. ತೀರ್ಪುಗಳನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಆಯೋಜಕರು, ಧರಣಿ ನಿರತರನ್ನು ಸಮಾಧಾನಗೊಳಿಸಿ ಮಂಟಪಗಳ ಪ್ರದರ್ಶನಕ್ಕೆ ಆವಕಾಶ ನೀಡಿದರು. ಬೆಳಿಗ್ಗೆ 7 ಗಂಟೆ ವೇಳೆಗೆ ಸೂರ್ಯನ ಬೆಳಕಿನಲ್ಲಿ ನಮ್ಮ ದಸರಾ ಸಮಿತಿಯವರು ಪ್ರದರ್ಶನ ಮಾಡಿದರು. ಇದರಿಂದ ಬಹುಮಾನಿತ ತಂಡಗಳನ್ನು ಎರಡನೇ ಬಾರಿಗೆ ಘೋಷಣೆ ಮಾಡಬೇಕಾಯಿತು.

ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾಡ್ಲಯ್ಯಪ್ಪ ದಸರಾ ಮಂಟಪದವರು ಹಾಗೂ ಅರುವತ್ತೊಕ್ಕಲಿನ ಶಾರದಾಂಬ ದಸರಾ ಸಮಿತಿಯವರು ಬಹುಮಾನ ಸ್ವೀಕರಿಸದೆ ಹಿಂದಿರುಗಿದರು.

ಗ್ರಾಮ ಪಂಚಾಯಿತಿಯಲ್ಲಿ ಸಭೆ: ನಂತರ, ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದು ಚರ್ಚಿಸಿ ಬೆಳಿಗ್ಗೆ 10 ಗಂಟೆಗೆ ಬಹುಮಾನ ವಿತರಿಸಲಾಯಿತು. ಅಲ್ಲಿಯವರೆಗೆ ಕೆಲವು ಮಂಟಪಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ನಿಂತಿದ್ದವು.

ಮೂರೂ ಬಹುಮಾನಗಳ ಹಂಚಿಕೆ: ಪ್ರಥಮ ಬಹುಮಾನವನ್ನು ಯುವ ದಸರಾ ಸಮಿತಿ ಹಾಗೂ ನಮ್ಮ ದಸರಾ ಸಮಿತಿ ಮಂಟಪಗಳು ಪಡೆದವು. ದ್ವಿತೀಯ ಬಹುಮಾನವನ್ನು ಶಾರದಾಂಬ ದಸರಾ ಸಮಿತಿ ಮತ್ತು ಕಾಡ್ಲಯ್ಯಪ್ಪ ದಸರಾ ಸಮಿತಿ, ತೃತೀಯ ಬಹುಮಾನವನ್ನು ಕೊಪ್ಪ ಸ್ನೇಹಿತರ ಬಳಗ ಹಾಗೂ ಕೈಕೇರಿಯ ಭಗವತಿ ದಸರಾ ಸಮಿತಿ ಮಂಟಪಗಳು ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT