ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರಿ ಹಂತಕರ ಸುಳಿವು ಸಿಕ್ಕಿದೆ’

ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
Last Updated 2 ಅಕ್ಟೋಬರ್ 2017, 8:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತು. ಹಂತಕರ ಸುಳಿವು ಸಿಕ್ಕಿದೆ. ಸದ್ಯ ವಿಶೇಷ ತನಿಖಾ ದಳ (ಎಸ್ಐಟಿ) ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಹಂತಕರ ಸುಳಿವಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಆಗುವುದಿಲ್ಲ. ಒಂದೊಮ್ಮೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸದೆ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದರೆ ಪ್ರಕರಣ ಬಿದ್ದು ಹೋಗುತ್ತದೆ. ಆದ್ದರಿಂದ ಸಾಕ್ಷ್ಯಾಧಾರ ಸಂಗ್ರಹಿಸಿ ಬಳಿಕವಷ್ಟೇ ಆ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿಯಿಂದ ವಾರಕ್ಕೊಂದು ಹೇಳಿಕೆ’
‘ಬಿಜೆಪಿ ಮುಖಂಡರಿಗೆ ವಾರಕ್ಕೊಂದು ಹೇಳಿಕೆ ನೀಡಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ. ಹೀಗಾಗಿ ಏನೂ ವಿಷಯಗಳು ಇಲ್ಲದಿದ್ದಾಗ ವಾರಕ್ಕೊಂದು ಪತ್ರಿಕಾಗೋಷ್ಠಿ ಕರೆದು ಸುಮ್ಮನೆ ಕಾಂಗ್ರೆಸ್‌ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹೇಳಿಕೆ ಕೊಡುವುದೇ ಕೆಲವರಿಗೆ ಒಂದು ಚಟವಾಗಿದೆ. ಅಮಿತ್‌ ಷಾ, ಪ್ರಧಾನಿ ಮೋದಿ ಅವರು ಒಂದಲ್ಲ ಹತ್ತು ಬಾರಿ ರಾಜ್ಯಕ್ಕೆ ಒಂದು ಹೋಗಲಿ. ಇಲ್ಲಿ ಗೆಲ್ಲುವುದೇ ಕಾಂಗ್ರೆಸ್. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ’ ಎಂದರು.

‘ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಕುಸಿಯುತ್ತಿದೆ. ಇನ್ನೊಂದು ಐದಾರು ವರ್ಷ ಇವರೇ ಆಡಳಿತ ಮಾಡಿದರೆ ಅತ್ಯಂತ ಬಡ ದೇಶಗಳಲ್ಲಿ ಭಾರತ ಕೂಡ ಒಂದಾಗುತ್ತದೆ. ಬಿಜೆಪಿಯವರ ಕೈಯಲ್ಲಿ ಸಿಲುಕಿ ದೇಶ ನಲುಗಿ ಹೋಗುತ್ತಿದೆ. ಯುಪಿಎ ಅವಧಿಯಲ್ಲಿ ದೇಶ ಅಭಿವೃದ್ಧಿ ಹೊಂದಿತ್ತು. ಇವತ್ತು ಹಿಂದಕ್ಕೆ ಹೋಗುತ್ತಿದ್ದೇವೆ’ ಎಂದು ಹೇಳಿದರು.

‘ರಾಹುಲ್‌ ಗಾಂಧಿ ಅವರು ಯಾವ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಬೇಕು, ಅವರನ್ನು ಯಾವಾಗ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವುದು ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ. ನೂರಕ್ಕೆ ನೂರು ಮುಂದಕ್ಕೆ ಯುಪಿಎ ಸರ್ಕಾರವೇ ಬರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT