ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಹೇಳಿದರೆ ರಾಜೀನಾಮೆ

Last Updated 2 ಅಕ್ಟೋಬರ್ 2017, 8:45 IST
ಅಕ್ಷರ ಗಾತ್ರ

ಕೋಲಾರ:‘ಎತ್ತಿನಹೊಳೆ ಯೋಜನೆಯ ಹಣ ದುರುಪಯೋಗ ಪಡಿಸಿಕೊಂಡಿಲ್ಲ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚಿಲ್ಲಪನಹಳ್ಳಿ, ಶ್ಯಾನುಭೋಗನಹಳ್ಳಿ, ಮಣಿಘಟ್ಟ ಗ್ರಾಮಗಳ ಬಳಿ ಚೆಕ್‌ಡ್ಯಾಂಗಳ ನಿರ್ಮಾಣದಲ್ಲಿ ಯಾವುದೇ ಅನುದಾನ ದುರುಪಯೋಗವಾಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಣ ದುರುಪಯೋಪಡಿಸಿಕೊಂಡಿದ್ದೇನೆ ಎಂದು ಈ ಭಾಗದ ರೈತರು ಹೇಳಿದರೆ ನನ್ನ ರಾಜೀನಾಮೆಯನ್ನು ಮಾಧ್ಯಮ ಪ್ರತಿನಿಧಿಗಳ ಕೈಗೆ ನೀಡುತ್ತೇನೆ.

ಎತ್ತಿನಹೊಳೆ, ಎಮ್ಮಹೊಳೆ, ಮೇಕೆಹೊಳೆ ಯಾವುದಾದರೂ ರೂಪದಲ್ಲಿ ನೀರು ಬಂದು, ರೈತರು ಸಮೃದ್ಧಿಯಾಗಬೇಕು ಎನ್ನುವುದು ನನ್ನ ಇಚ್ಛೆ. ದುರುಪಯೋಗದಲ್ಲಿ ಹಣ ಉಳಿಕೆಯಾದರೆ ಮುಖಂಡ ವೆಂಕಟಶಿವಾರೆಡ್ಡಿ ಅವರಿಗೆ ಒಪ್ಪಿಸುತ್ತೇನೆ’ ಎಂದು ತಿರುಗೇಟು ನೀಡಿದರು.

‘ಅವರಿಗೆ ಇನ್ನೂ ವಯಸ್ಸು, ಆರೋಗ್ಯ, ಗಾಡಿ ಇದೆ ಕ್ಷೇತ್ರದಲ್ಲಿ ಓಡಾಡಿಕೊಂಡು,ಅವರು- ಇವರು ಹೇಳಿದ ಮಾತುಗಳಿಗೆ ಕಿವಿ ಕೊಡುವುದನ್ನು ಬಿಡಲಿ. ಒಂದು ಜವಾಬ್ದಾರಿ ಸ್ಥಾನದಲ್ಲಿದ್ದವರು ಈ ರೀತಿ ಆರೋಪಗಳನ್ನು ಮಾಡುವುದು ಸರಿಯಲ್ಲ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದ ಸಂಸದರ ಬಳಿ ರಾಜ್ಯಕ್ಕೆ ಈ ಹಿಂದೆ ಮಂಜೂರಾಗಿರುವ ಯೋಜನೆಗಳ ಪಟ್ಟಿ ಇರುತ್ತದೆ. ಜಾತಿ, ಕೋಮು ವಿಚಾರದಲ್ಲಿ ಪ್ರಚೋದನೆ ನೀಡುವ ನಾಯಕರಿಗೆ ಮಂಜೂರಾದ ಕೈಗಾರಿಕೆ ಆರಂಭಕ್ಕೆ ಆಗುತ್ತಿರುವ ವಿಳಂಬ ಅರಿವಿಲ್ಲವೇ. ಇವರಿಗೆ ಗ್ರಾಮೀಣ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ’ ಎಂದು ಹೇಳಿದರು.

‘ಜನರಿಗೆ ರೋಷ ಬರಲಿ. ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆದರೂ ಮಾಡಲಿ. ಕೆರೆಗಳನ್ನು ಗಂಗಾಭವಾನಿ ಎಂದು ಕರೆಯುತ್ತೇವೆ. ತುಂಬಿದರೆ ದೀಪೋತ್ಸವ ಮಾಡುತ್ತೇವೆ. ಅಂತಹ ಪವಿತ್ರವಾದ ಸ್ಥಾನವಿರುವ ಕೆರೆಗೆ ಕಸ ಹಾಕುವುದಾದರೇ ಹೆತ್ತ ತಾಯಿ ಬಾಯಿಗೆ ಕಸ ಸುರಿದಂತೆಯೇ’ ಎಂದು ವಿಷಾದಿಸಿದರು.

ನಗರದ ಸಮೀಪದ ಕೋಡಿಕಣ್ಣೂರು ಕೆರೆ ದುಸ್ಥಿತಿ ನೋಡಿದರೆ ಕಣ್ಣು ಮುಚ್ಚಿಕೊಳ್ಳುವಷ್ಟು ದುಃಖ ಆಗುತ್ತದೆ. ಯಾಕೆ ಈ ಭಾಗದ ಜನರಿಗೆ ಸಿಟ್ಟೇ ಬರುವುದಿಲ್ಲವೇ. ಜನರಿಗೆ ಸಾಮೂಹಿಕ ಪ್ರಜ್ಞೆ, ತಿಳಿವಳಿಕೆ ಬೇಡವೇ. ಇದು ಸಾರ್ವಜನಿಕ ಆಸ್ತಿಯಲ್ಲವೇ’ ಎಂದು ಪ್ರಶ್ನಿಸಿದರು.

ದೇಶದಲ್ಲೇ ಪ್ರಥಮ ಸ್ಥಾನ: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ದೇಶದಲ್ಲೇ ಕೋಲಾರ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಈ ಸಾಧನೆಗಾಗಿ ಶ್ರಮಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು ಶೌಚಾಲಯಕ್ಕಾಗಿ ಸಮರವನ್ನು ಮಾಡಿ ಸಾಧನೆ ಮಾಡಿದ್ದಾರೆ. ನಾಳೆ ಸಂಜೆ ವೇಳೆಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದರು.

ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಶೌಚಾಲಯ ನಿರ್ಮಾಣ ಶೇ 97 ದಾಟಿದೆ. ಏಳೆಂಟು ಗ್ರಾಮಗಳಲ್ಲಿ ಶೇ 85 ರಷ್ಟು ಸಾಧನೆಯಾಗಿದ್ದು, ಅಲ್ಲಿಯೂ ರಾತ್ರಿಹಗಲು ಕೆಲಸ ಮಾಡುವ ಮೂಲಕ ಶೇ 100 ಮುಟ್ಟಿಸುವ ಕೆಲಸ ಸಾಗಿದೆ ಎಂದರು. ಈ ಸಾಧನೆಗೆ ಶ್ರಮಿಸಿದ ಕಾವೇರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT