ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ 48 ಪುಟದ ಶ್ರೀ ರಾಮಾಯಣ ದರ್ಶನಂ

Last Updated 2 ಅಕ್ಟೋಬರ್ 2017, 9:02 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷಗಳಾಗಿವೆ. ಸುವರ್ಣ ಮಹೋತ್ಸವದ ಈ ಹೊತ್ತಿನಲ್ಲಿ ಅವರ 600 ಪುಟದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಕೇವಲ 48 ಪುಟಗಳಲ್ಲಿ ರಸಗ್ರಹಿಸಿ, ಪ್ರಕಟಿಸಿ ಮನೆ–ಮನಗಳಿಗೆ ತಲುಪಿಸುವ, ಶಿಕ್ಷಕರು–ಶಾಲಾ ಮಕ್ಕಳಿಗೆ ಹಂಚುವ ಯೋಜನೆಯೊಂದು ನಗರದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

20 ಸಾವಿರ ಸಾಲು, ನಾಲ್ಕು ಸಂಪುಟ, 50 ಸಂಚಿಕೆಯ ಮಹಾಕಾವ್ಯವನ್ನು ನಗರದ ಹಿರಿಯ ಸಾಹಿತಿ, ವೈದ್ಯ ಡಾ.ಪ್ರದೀಪ್‌ಕುಮಾರ ಹೆಬ್ರಿ ಅವರು 48 ಪುಟಕ್ಕಿಳಿಸಿದ್ದು, ಪುಸ್ತಕ ಮುದ್ರಣಕ್ಕೆ ಹೋಗಲು ಸಿದ್ಧವಾಗಿದೆ. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಡ್ಯಾಫೊಡಿಲ್ಸ್‌ ಶಾಲೆ ಆವರಣದಲ್ಲಿ ನಡೆಯುವ ‘ಮಕ್ಕಳ ಸಾಹಿತ್ಯ ಪುಸ್ತಕ ಮೇಳ’ದಲ್ಲಿ ಪುಸ್ತಕ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಹೆಬ್ರಿ ಅವರು ನಗರದ ಹಾಲಹಳ್ಳಿ ಮುಖ್ಯರಸ್ತೆಯ ತಮ್ಮ ‘ದೃಶ್ಯ’ ನಿವಾಸದಲ್ಲಿ ‘ದರ್ಶನ’ದ ರಸಪಾಕದ ಸಿಹಿಯನ್ನು ಸಾಹಿತಿಗಳು, ವಿದ್ವಾಂಸರಿಗೆ ಹಂಚುತ್ತಿದ್ದಾರೆ. ಸಂಕ್ಷಿಪ್ತ ರೂಪದ ಕೃತಿಯ ಬಗ್ಗೆ ಚರ್ಚೆ, ಸಂವಾದ ನಡೆಸುತ್ತಿದ್ದಾರೆ.

ಡ್ಯಾಫೊಡಿಲ್ಸ್‌ ಹಾಗೂ ಶಾರದಾ ಪಬ್ಲಿಕ್‌ ಶಾಲೆಯ ಮುಖ್ಯಸ್ಥೆ ಸುಜಾತಾ ಕೃಷ್ಣ ಅವರು 48 ಪುಟದ ಶ್ರೀರಾಮಯಣ ದರ್ಶನಂ ಕೃತಿಯ 3 ಸಾವಿರ ಪ್ರತಿ ಮುದ್ರಿಸಲು ಒಪ್ಪಿಗೆ ನೀಡಿದ್ದಾರೆ. ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್‌.ಹೊನ್ನಪ್ಪ ಸೇರಿ ನಗರದ ಶಿಕ್ಷಣ ಪ್ರೇಮಿಗಳು ಹೆಬ್ರಿ ಅವರ ಹೊಸ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಉಚಿತವಾಗಿ ಹಂಚಬಾರದು ಎಂಬ ಕಾರಣಕ್ಕೆ ₹ 10 ಬೆಲೆ ನಿಗದಿ ಮಾಡಲು ನಿರ್ಧರಿಸಿದ್ದಾರೆ.

‘ಕುವೆಂಪು ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ ಆತ್ಮಶಕ್ತಿ ಉದ್ದೀಪನಗೊಳಿಸುವ ಶಕ್ತಿ ಇದೆ. ನನ್ನನ್ನು ನಾನು ಅರಿಯುವ ದರ್ಶನವೇ ಶ್ರೀರಾಮಾಯಣ ದರ್ಶನಂ. ಆಧುನಿಕ ಸಾಹಿತ್ಯದಲ್ಲಿ ಕುವೆಂಪು ಅವರು ರಾಮಾಯಣಕ್ಕೊಂದು ಭಿನ್ನರೂಪ ಕೊಟ್ಟಿದ್ದಾರೆ. ಅಹಿಂಸೆಗೆ ಪ್ರಾಧಾನ್ಯತೆ ಅವರ ಕಾವ್ಯದಲ್ಲಿದೆ. ಬೇಡನಿಂದ ಗಾಯಗೊಂಡು ಜೀವ ಬಿಡುವ ಕ್ರೌಂಚ ಪಕ್ಷಿಗೆ ಕುವೆಂಪು ಜೀವಕೊಟ್ಟಿದ್ದಾರೆ. ಮತ್ಸರದ ಮೊಟ್ಟೆಯಾಗಿದ್ದ ಮಂಥರೆಯಲ್ಲಿ ಮಮತೆ ತುಂಬಿದ್ದಾರೆ.

ಸೀತೆಯನ್ನು ಅಶೋಕವನದಲ್ಲಿ ಬಂಧಿಸಿಟ್ಟಿದ್ದ ರಾವಣನಿಗೆ ಆಕೆಯ ಪತಿವ್ರತಾ ಗುಣದ ದರ್ಶನ ಮಾಡಿಸಿದ್ದಾರೆ. ಇಂತಿಪ್ಪ ಶ್ರೀರಾಮಯಣ ದರ್ಶನಂ ಕಾವ್ಯದ ಅರಿವು ನಮ್ಮ ಮಕ್ಕಳಲ್ಲಿ ಇರಬೇಕು. ಕುವೆಂಪು ಸಾಹಿತ್ಯ ಋಣದಲ್ಲಿರುವ ನಾವು ಅವರ ಮಹಾಕಾವ್ಯವನ್ನು ಆರಾಧಿಸಬೇಕು’ ಎಂದು ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಹೇಳಿದರು.

ಶಿಕ್ಷಕರಿಗೆ ತಲುಪಿಸುವ ಉದ್ದೇಶ: ಪ್ರದೀಪ್‌ ಕುಮಾರ್‌ ಹೆಬ್ರಿ ಅವರು ಪ್ರೌಢಶಾಲೆ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ರಾಮಾಯಣ ದರ್ಶನಂ ಕೃತಿ ಹಂಚಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಮಾಹಿತಿ ಪಡೆದಿದ್ದಾರೆ. ‘ಈಚೆಗೆ ಮಂಡ್ಯದಲ್ಲಿ ನಡೆದ ಜ್ಞಾನಪೀಠ ಪ್ರಶಸ್ತಿ ಸುವರ್ಣ ಮಹೋತ್ಸವದಲ್ಲಿ, ಎಷ್ಟು ಜನ ಶಿಕ್ಷಕರು ರಾಮಯಣ ದರ್ಶನಂ ಓದಿದ್ದೀರಿ ಎಂದು ಕೇಳಿದೆ, ಯಾರೂ ಕೈ ಎತ್ತಲಿಲ್ಲ. ಎಷ್ಟು ಜನ ಕೃತಿಯನ್ನು ನೋಡಿದ್ದೀರಿ ಎಂದು ಪ್ರಶ್ನಿಸಿದಾಗಲೂ ಉತ್ತರ ಬರಲಿಲ್ಲ. ಹೀಗಾಗಿ, ಕೃತಿಯನ್ನು ಶಿಕ್ಷಕರಿಗೆ ತಲುಪಿಸಬೇಕು ಎಂದು ತೀರ್ಮಾನಿಸಿದೆ. ಸಸಿಗೆ ನೀರು ಹಾಕುವ ಜೊತೆಗೆ ಬೇರಿಗೂ ನೀರೆರೆದರೆ ಸಸಿ ಹೆಮ್ಮರವಾಗುತ್ತದೆ’ ಎಂದು ಹೆಬ್ರಿ ಹೇಳಿದರು.

‘ಮಕ್ಕಳು ಶ್ರೀರಾಮಯಣ ದರ್ಶನಂನಂತಹ ಕಾವ್ಯ ಓದುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕು. ಆಗ ಮಾತ್ರ ನಾವು ನೀಡುತ್ತಿರುವ ಶಿಕ್ಷಣ ಮೌಲ್ಯಶಿಕ್ಷಣವಾಗುತ್ತದೆ. ಆ ಉದ್ದೇಶದಿಂದ ಡಾ.ಹೆಬ್ರಿ ಅವರ ಕಾರ್ಯಕ್ಕೆ ಕೈಜೋಡಿಸಿದ್ದೇವೆ. ಈ ಕಾರ್ಯ ಮಂಡ್ಯ ಮಣ್ಣಿನಿಂದ ಆರಂಭವಾಗಿ ಇಡೀ ರಾಜ್ಯಕ್ಕೆ ವಿಸ್ತರಣೆಯಾಗಬೇಕು’ ಎಂದು ಡ್ಯಾಫೊಡಿಲ್ಸ್‌ ಶಾಲೆ ಮುಖ್ಯಸ್ಥೆ ಸುಜಾತಾ ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT