ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

Last Updated 2 ಅಕ್ಟೋಬರ್ 2017, 9:18 IST
ಅಕ್ಷರ ಗಾತ್ರ

ಮೈಸೂರು: ಮೋಡಗಳು ಚಾಮುಂಡಿಬೆಟ್ಟವನ್ನು ತೀಡಿ ಸಾಗುತ್ತಿದ್ದಾಗ ಲಲಿತಮಹಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ಜಮಾಯಿಸಿದ್ದ ಪ್ರವಾಸಿಗರಿಗೆ ಬಾನಂಗಳದ ಸೂರ್ಯ ಆಗಾಗ ದರ್ಶನ ನೀಡುತ್ತಿದ್ದ. ಕಿರು ವಿಮಾನಗಳು ಒಂದೊಂದಾಗಿ ರನ್‌ವೇ ಪ್ರವೇಶಿಸುತ್ತಿದ್ದಂತೆ ಜನರ ನಿರೀಕ್ಷೆಯೂ ಗರಿಗೆದರಿತು. ಬಾನಂಗಳದಲ್ಲಿ ಸುಮಾರು ಒಂದೂವರೆ ಗಂಟೆ ನಡೆದ ಕಿರುಲೋಹದ ಹಕ್ಕಿಗಳ ಕಲರವಕ್ಕೆ ಪ್ರವಾಸಿಗರು ತಲೆದೂಗಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮೈಸೂರು ಫ್ಲೈಯಿಂಗ್‌ ಅಸೋಸಿಯೇಷನ್‌ ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ರಿಮೋಟ್‌ ಕಂಟ್ರೋಲ್‌ ವಿಮಾನ ಮಾದರಿಗಳ ಪ್ರದರ್ಶನ’ವನ್ನು ಮಕ್ಕಳು ತುದಿಗಾಲ ಮೇಲೆ ನಿಂತು ಕಣ್ತುಂಬಿಕೊಂಡರು.

ಸಾಹಸ ಪ್ರದರ್ಶನ: ರಿಮೋಟ್‌ ಹಿಡಿದು ರನ್‌ವೇಗೆ ಧಾವಿಸಿದ ಪೈಲಟ್‌ಗಳು ನೆಚ್ಚಿನ ವಿಮಾನದ ಮಾದರಿಯನ್ನು ಪರಿಚಯಿಸಿದರು. ಇದರ ವಿಶೇಷ, ಸಾಮರ್ಥ್ಯದ ಕುರಿತು ನಿರೂಪಕರು ಕಿರು ಮಾಹಿತಿ ನೀಡುತ್ತಿದ್ದಂತೆ ಹಾರಾಟಕ್ಕೆ ಸಿದ್ಧತೆ ನಡೆಯುತ್ತಿತ್ತು. ಸೂಚನೆ ಸಿಕ್ಕ ಕ್ಷಣಾರ್ಧದಲ್ಲಿ ಬಾನಂಗಳಕ್ಕೆ ಚಿಮ್ಮುತ್ತಿದ್ದ ಪರಿ ಮನಗೆದ್ದಿತು. ವಿಮಾನಗಳಂತೆ ಒಂದಷ್ಟು ಮುಂದಕ್ಕೆ ವೇಗವಾಗಿ ಸಾಗಿ ನಿಧಾನವಾಗಿ ಮೇಲೆ ಹಾರುತ್ತಿದ್ದ ರೀತಿಯೂ ವಿಶಿಷ್ಟವಾಗಿತ್ತು. ಯುದ್ಧ ವಿಮಾನಗಳ ರೀತಿಯಲ್ಲಿ ಆಗಸದಲ್ಲಿ ಪಲ್ಟಿ ಹೊಡೆಯುತ್ತಿದ್ದಾಗ ಎಲ್ಲೆಡೆ ಹರ್ಷೋದ್ಗಾರ. ಸುಮಾರು 10ರಿಂದ 20 ನಿಮಿಷ ಹಾರಾಟ ನಡೆಸಿ ರನ್‌ವೇಗೆ ಮರಳುತ್ತಿದ್ದವು.

ಏಳು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ‘ಮೈಸೂರು ಫ್ಲೈಯಿಂಗ್‌ ಅಸೋಸಿಯೇಷನ್‌’ ನಾಡಹಬ್ಬದ ಅಂಗವಾಗಿ ಐದನೇ ಬಾರಿಗೆ ‘ವಿಮಾನ ಮಾದರಿಗಳ ಪ್ರದರ್ಶನ’ ನಡೆಸಿತು. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧೆಡೆಯಿಂದ ಬಂದಿದ್ದ ಆಸಕ್ತರು ಸುಮಾರು 20 ವಿಮಾನದ ಮಾದರಿಗಳು ಬಾನಂಗಳದಲ್ಲಿ ಹಾರಿಸಿದರು.

‘ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಸ್ಪಂದನೆ ಸಿಕ್ಕಿದೆ. ಕುತೂಹಲದಿಂದ ಪ್ರೇಕ್ಷಕರೂ ಧಾವಿಸಿದ್ದಾರೆ. ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತರಬೇತಿ ಪಡೆಯುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ಅಸೋಸಿಯೇಷನ್‌ ಉಪಾಧ್ಯಕ್ಷ ಅಲೆಕ್ಸ್‌ ಪ್ರವೀಣ್‌ ತಿಳಿಸಿದರು.

300 ಕಿ.ಮೀ ವೇಗ: ಗಂಟೆಗೆ 300 ಕಿ.ಮೀ ವೇಗದಲ್ಲಿ ಸಾಗುವ ‘ಪವರ್‌ ಜೆಟ್‌’ ಈ ಬಾರಿಯ ವಿಶೇಷ. ಉಳಿದವು ಗಂಟೆಗೆ ಸರಾಸರಿ 150–200 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದ್ದವು. ಬೂಮರಿಂಗ್‌ ಜೆಟ್‌, ಟರ್ಬೈನ್‌ ಜೆಟ್‌, ಎಕ್ಸಟ್ರಾ 300, 3ಡಿ ಏರೊಬಿಕ್‌, ಎಲೆಕ್ಟ್ರಿಕ್‌ ಮಾದರಿಯ ವಿಮಾನಗಳು ಹಾರಾಟ ನಡೆಸಿದವು. ಕಡುನೀಲಿ, ಕೇಸರಿ, ಕಪ್ಪು ಸೇರಿ ತರಹೇವಾರಿ ಬಣ್ಣದ ವಿಮಾನದ ಮಾದರಿಗಳು ಆಗಸದಲ್ಲಿ ವರ್ಣರಂಜಿತವಾಗಿ ಕಂಗೊಳಿಸಿದವು.

‘ಬಹುತೇಕ ಮಾದರಿಗಳ ಸಾಮಗ್ರಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಸಿಂಗಪುರ ಹಾಗೂ ಇತರ ದೇಶಗಳಿಂದ ತರಲಾಗಿದೆ. ಮೈಸೂರಿನಲ್ಲಿ ಇವುಗಳನ್ನು ಸಿದ್ಧಪಡಿಸಿ ಹಾರಾಟ ನಡೆಸಲಾಗುತ್ತಿದೆ. ವಿಮಾನಗಳಂತೆ ಇವುಗಳಿಗೂ ಪೆಟ್ರೋಲ್‌ ಇಂಧನ ಬಳಸಲಾಗುತ್ತಿದೆ’ ಎಂದು ಪ್ರವೀಣ್‌ ಮಾಹಿತಿ ನೀಡಿದರು.

9ರ ಪೋರನ ಸಾಹಸ: 9 ವರ್ಷದ ಶಿವ ಮಿತ್ರನ್‌ ಅತಿ ಕಿರಿಯ ವಯಸಿನ ಪೈಲಟ್‌ ಇದೇ ಮೊದಲ ಬಾರಿಗೆ ಪ್ರದರ್ಶನ ನೀಡಿದ. ತಮಿಳುನಾಡಿನ ಉದ್ಯಮಿ ಅರುಣ್‌ಕುಮಾರ್‌ ಎಂಬುವರ ಪುತ್ರ ಶಿವ 3ನೇ ವಯಸ್ಸಿನಿಂದ ಆಸಕ್ತಿ ಬೆಳೆಸಿಕೊಂಡಿದ್ದಾನೆ. ತಂದೆಯ ಹವ್ಯಾಸ ಮಗನಿಗೆ ಬಳುವಳಿಯಾಗಿ ಬಂದಿದೆ. 6 ವರ್ಷ ತರಬೇತಿ ಪಡೆದಿದ್ದಾನೆ. ಎರಡು ವಿಮಾನ ಮಾದರಿಗಳನ್ನು ಹಾರಿಸಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡ.

23 ವರ್ಷ ವಯಸ್ಸಿನ ಅಲೆಕ್ಸ್‌ ಪ್ರವೀಣ್‌ ಅವರ ‘ಬೂಮರಿಂಗ್‌ ಜೆಟ್‌’ ಕೂಡ ಗಮನ ಸೆಳೆಯಿತು. 11 ವರ್ಷಗಳಿಂದ ಆಸಕ್ತಿ ಬೆಳೆಸಿಕೊಂಡಿರುವ ಪ್ರವೀಣ್‌, ಅಭಿರುಚಿಗೆ ತಕ್ಕಂತೆ ವಿಮಾನದ ಪೈಲಟ್‌ ತರಬೇತಿಗೆ ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.

ದಕ್ಷಿಣ ವಲಯದ ಐಜಿಪಿ ವಿಪುಲ್‌ ಕುಮಾರ್‌, ಜಿಲ್ಲಾಧಿಕಾರಿ ಡಿ.ರಂದೀಪ್‌, ಅಸೋಸಿಯೇಷನ್‌ ಸ್ಥಾಪಕ ಅಧ್ಯಕ್ಷ ಅರುಣ್‌ಕುಮಾರ್‌, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಚ್‌.ಪಿ.ಜನಾರ್ದನ್‌, ಸೆಸ್ಕ್ ವ್ಯವಸ್ಥಾಪಕ ಸತೀಶ್‌, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್‌ ವಿಮಾನ ಮಾದರಿಗಳ ಹಾರಾಟವನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT