ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿಗಳ ಗಸ್ತು; ಜನ ಸುಸ್ತು

Last Updated 2 ಅಕ್ಟೋಬರ್ 2017, 9:27 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಜನ ಸಂಚಾರ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬೀದಿನಾಯಿಗಳು, ಹಂದಿಗಳು ಹಾಗೂ ಬಿಡಾಡಿ ದನಗಳು ಅಡ್ಡಬಂದು ಬೈಕ್ ಸವಾರರು ಜಾರಿ ಬೀಳುವ ಘಟನೆಗಳು ನಗರದಲ್ಲಿ ನಿತ್ಯ ನಡೆಯುತ್ತವೆ.

ಇದ್ದಕ್ಕಿದ್ದಂತೆ ನಾಯಿಗಳು ರಸ್ತೆಗಳಲ್ಲಿ ಓಡಿ ಬರುತ್ತವೆ. ಬಿಡಾಡಿ ದನಗಳಂತೂ ಅರ್ಧರಸ್ತೆ ಅತಿಕ್ರಮಿಸಿಕೊಳ್ಳುತ್ತವೆ. ದನಗಳಿಂದ ಇಕ್ಕಟ್ಟಾಗುವ ರಸ್ತೆಗಳಲ್ಲಿ ಬೈಕ್ ಸವಾರರು ಹೇಗೋ ಪಾರಾಗುತ್ತಾರೆ. ಆದರೆ, ಕಾರು ಹಾಗೂ ಇತರೆ ವಾಹನ ಸವಾರರು ಕೆಳಗೆ ಬಂದು ದನಗಳನ್ನು ಪಕ್ಕಕ್ಕೆ ಬೆದರಿಸಿ ಆನಂತರ ಮುಂದೆ ಸಾಗುವ ಪ್ರಸಂಗಗಳು ರಾಷ್ಟ್ರೀಯ ಹೆದ್ದಾರಿಯಲ್ಲೆ ಕಂಡುಬರುತ್ತದೆ. ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ನಾಯಿ, ಹಂದಿಗಳಿಂದ ಜನರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಕೊನೆಯೇ ಇಲ್ಲ.

ನಗರದಲ್ಲಿ ಬೀದಿನಾಯಿಗಳಿಲ್ಲದ ಜಾಗವೇ ಇಲ್ಲ. ಹಗಲು ಹೊತ್ತು ಸುಮ್ಮನೆ ಓಡಾಡಿಕೊಂಡಿರುವ ನಾಯಿಗಳು ರಾತ್ರಿವೇಳೆ ಬೈಕ್, ಕಾರುಗಳನ್ನು ಅಟ್ಟಸಿಕೊಂಡು ಬರುತ್ತವೆ. ವ್ಯವಸ್ಥಿತವಾಗಿ ಮನೆಗಳನ್ನು ಕಟ್ಟಿಕೊಂಡಿರುವ ಜವಾಹರ ನಗರ, ನಿಜಲಿಂಗಪ್ಪ ಕಾಲೊನಿ, ಎಲ್‌ ಬಿ ಎಸ್ ನಗರ, ಐಬಿ ಕಾಲೊನಿಯಂತಹ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ಒಬ್ಬೊಬ್ಬರಾಗಿ ಹೊರಗೆ ಬರುವುದೇ ದುಸ್ತರ.  ಬಾಗಿಲಿನಲ್ಲಿ ಬೀದಿನಾಯಿಗಳು, ಹಂದಿಗಳು ದಿಗ್ಬಂಧನ ಹಾಕಿರುತ್ತವೆ.

ಸಂಜೆಯಾದ ಬಳಿಕ ಮನೆಗಳಿಗೆ ನಡೆದುಕೊಂಡು ಹೋಗುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಕೆಲವು ಕಾಲೊನಿಗಳಲ್ಲಿದೆ. ಬೈಕ್ ಸವಾರರು ಕೂಡಾ ಹೆದರಿಕೊಳ್ಳುವ ಸ್ಥಿತಿ ಇದೆ.

‘ರಾತ್ರಿಹೊತ್ತು ಬೈಕ್‌ನಲ್ಲಿ ಮನೆಗೆ ಹೋಗುವಾಗ ಬೀದಿನಾಯಿಗಳು ಕಚ್ಚುವುದಕ್ಕೆ ಓಡಿ ಬರುತ್ತವೆ. ಅವುಗಳಿಂದ ಪಾರಾಗುವುದಕ್ಕೆ ಪ್ರತಿನಿತ್ಯ ಹರಸಾಹಸ ಮಾಡಬೇಕು. ಬೇರೆ ಯಾರಾದರೂ ಸಹಾಯಕ್ಕೆ ಬರದಿದ್ದರೆ ನಾಯಿಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ’ ಎಂದು ಮಡ್ಡಿಪೇಟೆ ನಿವಾಸಿ ಮಹೇಶ ಆತಂಕ ವ್ಯಕ್ತಪಡಿಸುತ್ತಾರೆ.

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಆವರಣ, ನ್ಯಾಯಾಲಯ ಸಂಕೀರ್ಣ ಇರುವ ಜನದಟ್ಟಣೆ ಪ್ರದೇಶದಲ್ಲೂ  ಬೀದಿನಾಯಿಗಳ ಹಾವಳಿ ಇದೆ. ಕಚೇರಿಗಳ ಹೊರಾಂಗಣದಲ್ಲಿ ಜನರು ಅಥವಾ ಜವಾನರು ಕುಳಿತುಕೊಳ್ಳಲು ಹಾಕಿದ ಕುರ್ಚಿಗಳ ಸುತ್ತಲೂ ಬೀದಿನಾಯಿಗಳು ಕುಚೇಷ್ಠೆ ಆಡಿಕೊಂಡಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಕಚೇರಿ ಬಾಗಿಲಲ್ಲಿ ನಾಯಿಗಳ ಗುಂಪು, ಒಳಗಡೆ ಅಧಿಕಾರಿಗಳು.

ವಿವಿಧ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಬರುವ ಜನರು ಅಧಿಕಾರಿಗಳ ಇರುವಿಕೆ ಬಗ್ಗೆ ಕೆಲವು ಸಲ ಗೊಂದಲಕ್ಕೀಡಾಗುತ್ತಾರೆ. ಅಧಿಕಾರಿಗಳು, ಸಿಬ್ಬಂದಿ ಕಚೇರಿಯಲ್ಲಿದ್ದರೆ ನಾಯಿಗಳೇಕೆ ಗುಂಪಾಗುತ್ತಿದ್ದವು ಎನ್ನುವ ಪ್ರಶ್ನೆ ಮೂಡುತ್ತದೆ.

‘ಬೆದರಿಸಿ ಓಡಿಸಿದರೂ ಬೀದಿನಾಯಿಗಳು ಮತ್ತೆ ಬರುತ್ತವೆ. ನಾಯಿ ಹಾವಳಿಗೆ ಏನು ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಕಚೇರಿಯ ಜವಾನರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.ಪ್ರಾಣಿ ಪ್ರೀತಿಯ ಸಂಘ-ಸಂಸ್ಥೆಗಳನ್ನು ಎದುರಿಸುವುದು ಕಷ್ಟ ಎನ್ನುತ್ತಿರುವ ನಗರಸಭೆ ಅಧಿಕಾರಿಗಳು, ಸಮಸ್ಯೆ ಪರಿಹಾರಕ್ಕೆ ಪರ್ಯಾಯಗಳನ್ನು ಯೋಜಿಸುತ್ತಿಲ್ಲ.

ಬೀದಿನಾಯಿಗಳು, ಹಂದಿಗಳು ಹಾಗೂ ಬಿಡಾಡಿ ದನಗಳ ಹಾವಳಿ ತಪ್ಪಿಸಲು ರಾಜ್ಯದ ಇತರೆ ಮಹಾನಗರಗಳ ಸ್ಥಳೀಯ ಸಂಸ್ಥೆಗಳು ಏನು ಕ್ರಮ ಕೈಗೊಂಡಿವೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಇಲ್ಲದಿದ್ದರೆ ಜನರು ಅನುಭವಿಸುತ್ತಿರುವ ತಾಪತ್ರಯ ತಪ್ಪುವುದಿಲ್ಲ ಎನ್ನುವುದು ಸಾಮಾಜಿಕ ಕಾರ್ಯಕರ್ತ ಉರುಕುಂದಪ್ಪ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT