ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಲದ್ದಿ/ಸೈನಿಕ ಹುಳು ಕಾಟ: ಸಾವಿರಾರು ಎಕರೆ ಬೆಳೆ ಹಾನಿ

Last Updated 2 ಅಕ್ಟೋಬರ್ 2017, 14:54 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಅಪರೂಪದ ಮಳೆಗೆ ಸಮೃದ್ಧವಾಗಿ ಬೆಳೆದು ನಿಂತಿದ್ದ ಬೆಳೆಗಳಿಗೆ ‘ಲದ್ದಿ ಅಥವಾ ಸೈನಿಕ’ ಹುಳು ಹಾವಳಿ ಮಿತಿ ಮೀರಿದೆ. ಅದರಲ್ಲೂ ಸಾವಿರಾರು ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗುತ್ತಿದೆ.

ಜಿಲ್ಲೆಯ ದಾವಣಗೆರೆ ತಾಲ್ಲೂಕು, ಹರಿಹರ, ಜಗಳೂರು, ಹರಪನಹಳ್ಳಿ ತಾಲ್ಲೂಕುಗಳಲ್ಲಿ ಹುಳುವಿನ ದಾಳಿ ಎಗ್ಗಿಲ್ಲದೆ ನಡೆದಿದೆ. ರಾತ್ರಿ ಬೆಳಗಾಗುವುದರೊಳಗೆ ಬೆಳೆಗಳ ಎಲೆಗಳನ್ನು ತಿಂದು ಬರಿದು ಮಾಡುತ್ತಿವೆ.

ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ನಾಶ: ಅನ್ನದಾತ ಅಳಲು
‘ಭೂಮಿ ಉಳುಮೆ, ಬಿತ್ತನೆಬೀಜ, ಬೇಸಾಯ, ಬಾಡಿಗೆ, ರಸಗೊಬ್ಬರ, ಕಳೆ ಕೀಳಲು ಕೂಲಿ... –ಹೀಗೆ ಎಲ್ಲಾ ಕೃಷಿ ಕಾರ್ಯಗಳಿಗೆ ಸಾವಿರಾರು ರೂಪಾಯಿ ಬಂಡವಾಳ ಹಾಕಿದ್ದೇವೆ. ಅಪರೂಪದ ಮಳೆಗೆ ಬೆಳೆ ಜೀವ ಹಿಡಿದು ಬೆಳೆದಿದ್ದವು. ಈಚೆಗೆ ಬಿದ್ದ ಮಳೆಗೆ ಹಸಿರಿನಿಂದ ನಳ ನಳಿಸುತ್ತಿದ್ದವು. ಆಳೆತ್ತರ ಬೆಳೆದ ಮೆಕ್ಕೆಜೋಳ ತೆನೆಕಟ್ಟುತ್ತಿತ್ತು. ಲದ್ದಿ ಹುಳು ಬೆಳೆಗೆ ದಾಳಿ ಮಾಡಿವೆ. ರಾತ್ರಿ ಬೆಳಗಾಗುವುದರೊಳಗೆ ಜೋಳದ ಗರಿಗಳನ್ನೆಲ್ಲಾ ತಿಂದು ಮುಗಿಸಿವೆ. ಜಮೀನಿನಲ್ಲಿನ ಜೋಳ ಕಸ ಗುಡಿಸುವ ‘ಬರಲು ಕಡ್ಡಿ’ಯಂತೆ ಕಾಣುತ್ತಿವೆ. ದಂಟಿನಲ್ಲಿ ಗರಿಗಳೇ ಇಲ್ಲವಾಗಿವೆ. ಇನ್ನು ಗರಿ/ಎಲೆಗಳಿಲ್ಲದೆ ತೆನೆಕಟ್ಟುವುದಾದರು ಹೇಗೆ? ಬರಲು ಕಡ್ಡಿಯಂತಾಗಿರುವ ಬೆಳೆಯಿಂದ ಯಾವ ತೆನೆಯನ್ನೂ ನಿರೀಕ್ಷೆ ಮಾಡುವಂತಿಲ್ಲದ ಸ್ಥಿತಿ ಎದುರಾಗಿದೆ. ಇನ್ನೇನು ತೆನೆ ಕಾಳುಕಟ್ಟಿ ಒಂದು ತಿಂಗಳು ಮುಗಿಯುವಷ್ಟರಲ್ಲಿ ಬೆಳೆ ಕೈಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಈಗಿನ ಪರಿಸ್ಥಿತಿಯಲ್ಲಿ ‘ಕೈಗೆ ಬಂತ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ. ಇದು ನನ್ನೊಬ್ಬ ರೈತನ ಗೋಳಲ್ಲ. ಸಾವಿರಾರು ಎಕರೆಯಲ್ಲಿ ಬೆಳೆ ಹಾನಿಯಾಗಿದೆ. ಸಾವಿರಾರು ರೈತರು ಕಂಗಾಲಾಗಿದ್ದಾರೆ’ ಎಂದು ಹುಳುವಿನ ದಾಳಿಯನ್ನು ವಿವರಿಸಿ ನೋವು ತೋಡಿಕೊಂಡರು ಹರಿಹರ ತಾಲ್ಲೂಕು ಬುಳ್ಳಾಪುರ ಗ್ರಾಮದ ರೈತರಾದ ಎಚ್‌.ಆರ್‌. ನಾಗರಾಜ್‌, ಜಿ.ಆರ್‌. ವೀರೇಶ್‌, ಜಿ.ಆರ್‌. ಗಂಗಾಧರ ಮತ್ತಿತರರು.

ಔಷಧಿ ಸಿಂಪಡಣೆಯೂ ಕಷ್ಟ
‘ಭಾರೀ ಪ್ರಮಾಣದಲ್ಲಿ ಹುಳು ಹರಡಿದೆ. ಔಷಧಿ ಸಿಂಪಡಣೆ ಮಾಡಲೂ ಸಾಧ್ಯವಾಗುತ್ತಿಲ್ಲ. ಜಮೀನಿಂದ ಜಮೀನಿಗೆ ಹಬ್ಬುತ್ತಿವೆ. ಎತ್ತರದ ಮೆಕ್ಕೆಜೋಳಕ್ಕೆ ಔಷಧಿಯನ್ನು ಕೈ ಎತ್ತಿ ಹಿಡಿದು ಸಿಂಪಡಣೆ ಮಾಡಬೇಕು. ಆ ವೇಳೆ ಮುಖಕ್ಕೆ ಔಷಧಿ ಸಿಡಿಯುತ್ತದೆ. ಅದು ಉಸಿರಿನ ಮೂಲದ ದೇಹಕ್ಕೂ ಹೋಗುತ್ತಿದೆ. ಹಲವು ಕೂಲಿಕಾರರು ಅಸ್ವಸ್ಥರಾಗಿ ಮಲಗಿದ್ದಾರೆ. ರೈತರಿಗೆ ದಿಕ್ಕು ತೋಚದಾಗಿ’ ಎನ್ನುತ್ತಾರೆ ಹರಿಹರ ತಾಲ್ಲೂಕು ಬುಳ್ಳಾಪುರ ಗ್ರಾಮದ ಜಿ.ಆರ್‌. ವಿಶ್ವನಾಥ್.

ಹುಳುವಿನ ಹುಟ್ಟು ನಿಗೂಢ

ಅತ್ಯಂತ ವೇಗವಾಗಿ ಹರಡುತ್ತಿರುವ ಲದ್ದಿ/ಸೈನಿಕ ಹುಳು ಭಾರೀ ಪ್ರಮಾಣದಲ್ಲಿ ಹೇಗೆ ಸೃಷ್ಟಿಯಾದವು? ಇದಕ್ಕೆ ಕಾರಣ ಏನು? ಯಾಗೆ ಹೀಗೆಲ್ಲಾ? ಬರದ ನಂತರ ಬಂದ ಮಳೆಯೇ ಹುಳು ಹುಟ್ಟಿಗೆ ಕಾರಣನಾ? ಇಷ್ಟು ದಿನ ಭೂಮಿ ಬಿಸಿಲಿಗೆ ಕಾಯ್ದು ಈಗ ಭಾರೀ ಮಳೆ ಬಿದ್ದಿರುವುದು ಇದಕ್ಕೆ ಕಾರಣವಾ? ಎಂಬೆಲ್ಲಾ ಹತ್ತಾರು ಪ್ರಶ್ನೆಗಳನ್ನು ರೈತರನ್ನು ಕಾಡುತ್ತಿದೆ.

ಕೊಂಡಜ್ಜಿ ಗ್ರಾಮದ ಜಮೀನೊಂದರಲ್ಲಿ ಮೆಕ್ಕೆಜೋಳ ಬೆಳೆಯನ್ನು ಹುಳುಗಳು ತಿಂದಿರುವುದು. ಚಿತ್ರ: ಕೆ.ಎಂ. ಮುನಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT