ಕ್ಯಾಮೆರಾದಲ್ಲಿ ಕಂಡ ನೀರಸಿರಿ

ಸೋಮವಾರ, ಮೇ 20, 2019
30 °C

ಕ್ಯಾಮೆರಾದಲ್ಲಿ ಕಂಡ ನೀರಸಿರಿ

Published:
Updated:
ಕ್ಯಾಮೆರಾದಲ್ಲಿ ಕಂಡ ನೀರಸಿರಿ

ಚಲನಚಿತ್ರಗಳಲ್ಲಿ ಛಾಯಾಚಿತ್ರಗಳನ್ನು ಹಿನ್ನೆಲೆಯಾಗಿಸಿಕೊಂಡು ದೃಶ್ಯಾತ್ಮಕ ಪರಿಣಾಮವನ್ನು (ವಿಷುವಲ್ ಎಫೆಕ್ಟ್) ಹೇಗೆ ತೋರಿಸಬಹುದಾಗಿದೆ ಎಂಬುದನ್ನು ಅನಿಮೇಶನ್ ಕ್ಲಾಸ್‍ನಲ್ಲಿ ವಿವರಿಸುತ್ತಿದ್ದೆ. ಒಂದಿಷ್ಟು ಛಾಯಾಚಿತ್ರಗಳನ್ನು ತೋರಿಸುವ ಸಂದರ್ಭ, ಚಿತ್ರವೊಂದಕ್ಕೆ ವಿದ್ಯಾರ್ಥಿಯೊಬ್ಬಳು, ‘ಸರ್ ಈ ಫೋಟೊ ತೆಗೆದದ್ದು ಎಲ್ಲಿ?’ ಎಂದು ಪ್ರಶ್ನಿಸಿದಳು. ಭಟ್ಕಳ ದಾರಿಯಲ್ಲಿರುವ ಭೀಮೇಶ್ವರ ಜಲಪಾತ ಎಂದುತ್ತರಿಸಿದೆ. ‘ನಿಜಾನಾ, ನಮ್ ದೇಶದಲ್ಲಿನೂ ಇಷ್ಟು ಚೆಂದದ ಜಲಪಾತ ಇವೆಯಾ’ ಎಂದು ಉದ್ಘರಿಸಿದ್ದಳು.

ಛಾಯಾಗ್ರಹಣದಲ್ಲಿ ಟ್ರಾವೆಲ್ ಫೋಟೊಗ್ರಫಿ, ನೇಚರ್ ಫೋಟೋಗ್ರಫಿ ಎಂಬ ವರ್ಗಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಜೊತೆಗೆ ಪ್ರವಾಸ ಕಥನವೊಂದನ್ನು ಹೇಗೆ ಕಟ್ಟಿಕೊಡಬಹುದು ಎಂಬುದೂ ಅಂದಿನ ಪಠ್ಯದಲ್ಲಿ ನುಸುಳಿಕೊಂಡಿತು!

ಕಾರ್ಗಲ್‍ನಿಂದ ಭಟ್ಕಳಕ್ಕೆ ಹೋಗುವ ಮಾರ್ಗ ಮಧ್ಯೆ ಅನೇಕ ಹಿರಿಕಿರಿಯ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಮಳೆಗಾಲ ಬಹು ಸೂಕ್ತ ಎಂದು ಕೋಗಾರ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್.ಜ್ಞಾನಾನಂದ ಅವರು ಹೇಳಿದ್ದನ್ನು ನೆನಪಿಸಿದ ನನ್ನ ವಿದ್ಯಾರ್ಥಿಗಳು, ಕೋಗಾರಕ್ಕೆ ಹೊರಡಲು ಅಣಿಯಾದರು. ತುಮಕೂರಿನಿಂದ ರಾತ್ರಿ ಹೊರಟೆವು.

ಮಳೆಗಾಲ ಬಂದರೆ ಹಸಿರು ಸೀರೆಯನ್ನುಟ್ಟುಕೊಂಡು ಬೀಗುವ, ಚಳಿಗಾಲ ಬಂದರೆ ನಗ್ನವಾಗಿ ಸಂಕೋಚದ ನಗು ಬೀರುವ ಧಾರಿಣಿ. ಸಹ್ಯಾದ್ರಿಯ ಪ್ರಕೃತಿ ನಿರ್ಮಿತ ಗುಡಿಗೋಪುರಗಳಂತೆ ಕಂಗೊಳಿಸುವ ಬೆಟ್ಟಗಳು. ಅವುಗಳ ಮಧ್ಯೆ ತೂರಿಬಂದು ತನ್ನ ವೈಯಾರವನ್ನು ತೋರಿಸಲು ಹಂಬಲಿಸುವ ಹಾಲ್ನೊರೆಯ ಜಲಪಾತಗಳು ಬಳಕುವ ರಸ್ತೆಯುದ್ದಕ್ಕೂ ಪ್ರವಾಸಿಗರಿಗೆ ತಡೆಯೊಡ್ಡುತ್ತವೆ.

ಕಾರ್ಗಲ್‍ನಿಂದ ಭಟ್ಕಳ ಕಡೆಗೆ, ಕೋಗಾರ ಗ್ರಾಮವನ್ನು ದಾಟಿದ ನಂತರ ಬಲಕ್ಕೆ ಕಡಿದಾದ ದಾರಿ. ಮಳೆಗಾಲದಲ್ಲಿ ಚತುರ ಚಾಲಕರಿದ್ದರೆ ಕಾರಿನಲ್ಲಿ ಭೀಮೇಶ್ವರ ಜಲಪಾತವನ್ನು ತಲುಪಬಹುದು.

ಆದರೆ ನಡಿಗೆ ಮುಖಾಂತರ ಗುಡ್ಡ ಹತ್ತಿಳಿದು ನಾಲ್ಕೈದು ಕಿ.ಮೀ. ದೂರದಲ್ಲಿರುವ ಜಲಪಾತ ತಲುಪುವುದು ವಿಶಿಷ್ಟ ಅನುಭವ! ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಮೇಲ್ಭಾಗಕ್ಕೆ ಹೋದರೆ ಬೆಟ್ಟಗಳೆರಡನ್ನು ಸೀಳಿಕೊಂಡು ಹಂತ ಹಂತವಾಗಿ ಧಾರಿಣಿಗೆ ಅಪ್ಪಳಿಸುವ ಜಲಪಾತ; ತನ್ನ ಬಲಪಾರ್ಶ್ವದಲ್ಲಿ ಪುರಾತನ ಭೀಮೇಶ್ವರ ದೇವಾಲಯಕ್ಕೆ ನಿರಂತರ ಗಂಗಾಭಿಷೇಕ ಮಾಡುತ್ತಲೇ ಇರುವುದರಿಂದ ದೇವಾಲಯ ಹಾಗೂ ಜಲಧಾರೆ ಆವರಣವೆಲ್ಲವೂ ಜಾರುಬಂಡಿ!

ಎಡಬಲಗಳೆಡೆ ಬಳಕುತ್ತ ಪುಳಕಗೊಳಿಸುವ ಈ ಜಲಧಾರೆಗೆ ಹಾಗೂ ಇಲ್ಲಿರುವ ಭೀಮೇಶ್ವರ ದೇಗುಲಕ್ಕೂ ಪೌರಾಣಿಕ ಐತಿಹ್ಯವಿದೆ ಎನ್ನುತ್ತಾರೆ ಇಲ್ಲಿನ ಅರಣ್ಯ ಪಾಲಕರಾದ ಶ್ರೀಧರ್ ಅವರು. ವನವಾಸಕ್ಕೆ ಬಂದ ಪಾಂಡವರು ಭೀಮೇಶ್ವರದಲ್ಲಿ ಬಹುದಿನಗಳ ಕಾಲ ತಂಗುತ್ತಾರೆ. ಶಿವರಾತ್ರಿ ಹಬ್ಬದಲ್ಲಿ ಶಿವನನ್ನು ಪೂಜಿಸಲು ಶಿವಲಿಂಗ ಇಲ್ಲವಾದಾಗ, ಪಾಂಡವರು ಭೀಮನನ್ನು ಕಾಶಿಗೆ ಕಳುಹಿಸಿ ಶಿವಲಿಂಗ ತರಿಸಿ, ಈ ಬೆಟ್ಟದ ತಡಿಯಲ್ಲಿ ಶಿವ ರಾತ್ರಿಯಂದು ಪ್ರತಿಷ್ಠಾಪಿಸುತ್ತಾರಂತೆ.

ಶಿವಲಿಂಗ ಪೂಜೆಗೆ ಅಗತ್ಯವಾದ ಗಂಗೆ ಇಲ್ಲದ್ದನ್ನು ಕಂಡ ಭೀಮ ಬೆಟ್ಟಗಳ ಮಧ್ಯೆ ಬಾಣ ಹೂಡಿ ಜಲಧಾರೆ ಸೃಷ್ಟಿಸು ತ್ತಾನಂತೆ. ಹೀಗಾಗಿ ಇಲ್ಲಿನ ದೇಗುಲದ ಶಿವ ಲಿಂಗಕ್ಕೂ ಹಾಗೂ ಜಲಪಾತಕ್ಕೂ ‘ಭೀಮೇಶ್ವರ’ ಎಂಬ ಹೆಸರಿದೆ.

ನಿರಂತರ ಪೂಜಾದಿ ಕೈಂಕರ್ಯಗಳು ನಡೆಯುವ ಈ ದೇಗುಲ ಸಂಪೂರ್ಣ ಕಲ್ಲಿನಿಂದ ನಿರ್ಮಿತವಾಗಿದ್ದು, ಹೊಯ್ಸಳ ಶಿಲ್ಪ ಶೈಲಿಯನ್ನು ಕಂಬಗಳಲ್ಲಿ ಕಾಣಬಹುದಾಗಿದೆ. ಬೆಳಿಗ್ಗೆ ಹತ್ತೂವರೆ ಗಂಟೆಗೆ ಭೀಮೇಶ್ವರ ಜಲಪಾತ ತಲುಪಿದಾಗ ವಿದ್ಯಾರ್ಥಿಗಳಿಗೆ ಜಲಪಾತದ ತಡಿಯಲ್ಲಿ ಮಿಂದೇಳಲು ತವಕಿಸುತ್ತಿದ್ದರು.

‘ಯಾತಕ್ಕೆ ಬಂದಿರಲಾ, ಫೋಟೋ ತೆಗಿ ಬರ್ರೊ’ ಎಂದು ಕೂಗಿದ್ದು ಅವರಿಗೆ ಕೇಳಿಸಲೇ ಇಲ್ಲ ! ಕೊನೆಗೆ ಕ್ಯಾಮೆರಾವನ್ನು ಟ್ರೈಪಾಡ್‍ಗೆ ಟಂಕಿಸಿ ಬೇರೆ ಬೇರೆ ಸ್ಥಳಗಳಿಂದ, ಕೋನಗಳಿಂದ ಜಲಪಾತವನ್ನು ಹಾಲ್ನೊರೆಯಂತೆ ಅಥವಾ ಸಿಲ್ಕಿ ಎಫೆಕ್ಟ್‌ನಲ್ಲಿ ಸೆರೆಹಿಡಿಯಬೇಕು ಎಂದು ಒದ್ದಾಡುತ್ತಿದ್ದೆ. ನ್ಯಾಚುರಲ್ ಡೆನ್ಸಿಟಿ ಫಿಲ್ಟರ್ ಅಳವಡಿಸಿಕೊಂಡರೂ ಸೂರ್ಯನ ಪ್ರಖರತೆಯನ್ನು ಹತೋಟಿಗೆ ತರಲಾಗುತ್ತಿಲ್ಲ ಎಂದು ಕೊರಗುತ್ತ, ಸೂರ್ಯನಿಗೆ ಒಂದಿಷ್ಟು ಹಿಡಿಶಾಪ ಹಾಕುತ್ತಲೇ ಸುಮಾರು ಎರಡೂವರೆ ಗಂಟೆ ಕ್ಯಾಮೆರಾ ಹಿಡಿದುಕೊಂಡು ನಿಂತೇ ಇದ್ದೆ.

ಕೊನೆಗೆ ಸೂರ್ಯನ ಪ್ರಖರತೆ ಸ್ವಲ್ಪವೇ ಕಡಿಮೆಯಾದಾಗ ಕ್ಯಾಮೆರಾ ಐಎಸ್‍ಓ, ಶಟರ್ ಸ್ಪೀಡ್ ಮತ್ತು ಅಪರ್ಚರ್‌ಗಳು ನಾನು ಹೇಳಿದ ಹಾಗೆ ಕೇಳತೊಡಗಿದವು. ಟ್ರೈಪಾಡ್‍ ಬಳಸಿಕೊಂಡು ಸಿಲ್ಕ್ ಎಫೆಕ್ಟ್‌ನಲ್ಲಿ ಜಲಪಾತದ ಫೋಟೊ ತೆಗೆಯಲು ಶುರುಮಾಡಿದೆ.

ಮೊದಲು ಮ್ಯಾನುವಲ್ ಮೋಡ್‌ಗೆ ಕ್ಯಾಮೆರಾ ಸಿದ್ಧಪಡಿಸಿಕೊಂಡು ಲೆನ್ಸ್‌ಗೆ ನ್ಯಾಚುರಲ್ ಡೆನ್ಸಿಟಿ (ND8/CIR PL) ಫಿಲ್ಟರ್ ಅಳವಡಿಸಿದೆ. ಲೆನ್ಸ್ ಆಟೊ ಫೋಕಸ್ ಮೋಡ್‍ನಲ್ಲಿ ಇದ್ದರೂ ಸಮಸ್ಯೆ ಏನಿಲ್ಲ. ಅಪರ್ಚರ್‌ ಕಿಟಕಿಯನ್ನು ಬೆಳಕಿನ ಪ್ರತಿಕ್ರಿಯೆಗೆ ತಕ್ಕಂತೆ ಹೊಂದಿಸಿದೆ.

ಇದಕ್ಕೆ ತಕ್ಕಂತೆ ಶಟರ್ ಸ್ಪೀಡ್ ಸೆಕೆಂಡಿಗೆ 1ರಿಂದ 10ರೊಳಗೆ ಇಟ್ಟು, ವಿವ್‍ಫೈಂಡರ್ ಕೆಳಭಾಗದ ಮೀಟರ್‌ನಲ್ಲಿ– (Under Expose)) ಮತ್ತು + (Over Expose) ಚಿಹ್ನೆಗಳ ಮೇಲೆ ಗಮನವಿಟ್ಟು ಶಟರ್‌ಸ್ಪೀಡ್‌ ಮತ್ತು ಅಪರ್ಚರ್‌ಗಳ ಸಾಮ್ಯತೆಯನ್ನು ಸಾಧಿಸಿದೆ. ಫೋಟೊದಲ್ಲಿ ಸ್ವಲ್ಪ ಡೆಪ್ತ್ ಬರಲು - (Under Expose) ಮೀಟರ್ ಕಡೆಗೆ ಒಂದು ಪಾಯಿಂಟ್ ಹೆಚ್ಚಿಗೆ ಹೊಂದಿಸಿ ಛಾಯಾಚಿತ್ರವನ್ನು ತೆಗೆದೆ.

ಹೀಗೆ ಸಿಲ್ಕಿ ಎಫೆಕ್ಟ್‌ನಲ್ಲಿ ಭೀಮೇಶ್ವರ ಜಲಪಾತದೊಂದಿಗೆ ಕೋಗಾರ ಘಾಟ್, ಚಾರ್ಮಾಡಿ ಘಾಟ್‍ನಲ್ಲಿರುವ ಸಣ್ಣ-ಪುಟ್ಟ ತೊರೆಗಳನ್ನು ಕ್ಲಿಕ್ಕಿಸಿದ ಖುಷಿ ವಾಪಸ್ ಬರುವಾಗ ಮನ ತುಂಬಿಕೊಂಡಿತ್ತು.

ಸಿದ್ಧಲಿಂಗಸ್ವಾಮಿ ಹಿರೇಮಠ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry