ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಆನೆ ಮರಿಯ ಕಣ್ಣೀರ ಕಥೆ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ನಲೆಡಿ– ಆನೆಯ ಶಿಶುವಿನ ಕಥೆ’ಯ ಪ್ರದರ್ಶನದ ಮೂಲಕ ‘ರೌಂಡ್‌ಗ್ಲಾಸ್‌ ಸಂಸಾರ ಫೆಸ್ಟಿವಲ್‌ 2017’ಕ್ಕೆ ಸೋಮವಾರ ಅರ್ಥಪೂರ್ಣವಾಗಿ ಚಾಲನೆ ನೀಡಲಾಯಿತು. ಬೆನ್‌ಬೋವಿ ಮತ್ತು ಜಿಯೋಫ್ರೆ ಲಕ್‌ ಈ ಸಾಕ್ಷ್ಯಚಿತ್ರದ ನಿರ್ದೇಶಕರು. ಬೋಟ್ಸ್‌ವಾನ ಅರಣ್ಯದ ಆನೆ ಸಂರಕ್ಷಣಾ ಶಿಬಿರದಲ್ಲಿ ಜನಿಸಿದ ಹೆಣ್ಣಾನೆ ಮರಿಯೊಂದರ ನೈಜ ಕಥೆ ಆಧರಿಸಿದ ಸಾಕ್ಷ್ಯಚಿತ್ರ ಇದಾಗಿದೆ.

ಹುಟ್ಟಿದ ಒಂದು ತಿಂಗಳಿಗೆ ಹೆಣ್ಣಾನೆ ಮರಿಯ ಅಮ್ಮ(ತಾಯಿ ಆನೆ) ಬೇಟೆಗಾರರ ತಂತ್ರಕ್ಕೆ ಬಲಿಯಾಗುತ್ತಾಳೆ. ಆನೆ ಶಿಬಿರಕ್ಕೆ ರವಾನೆಯಾದ ಹೆಣ್ಣಾನೆ ಮರಿ ಅನುಭವಿಸುವ ತೊಳಲಾಟ ಮರುಕು ಹುಟ್ಟಿಸುತ್ತದೆ. ಅಭಿವೃದ್ಧಿ ಹೆಸರಿನಡಿ ಮಾನವನ ಕೃತ್ಯಕ್ಕೆ ಆನೆಯಂತಹ ದೈತ್ಯ ಪ್ರಾಣಿ ಅನುಭವಿಸುತ್ತಿರುವ ಸಂಕಷ್ಟಗಳು ಸಾಕ್ಷ್ಯಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತವೆ. ಅವ್ಯಾಹತ ಬೇಟೆಯ ಪರಿಣಾಮ ಆಫ್ರಿಕನ್‌ ಆನೆಗಳು ವಿನಾಶದ ಅಂಚಿನತ್ತ ಸಾಗುತ್ತಿರುವ ಬಗ್ಗೆಯೂ ಈ ಸಾಕ್ಷ್ಯಚಿತ್ರ ಬೆಳಕು ಚೆಲ್ಲುತ್ತದೆ.

ಅ.5ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ 90 ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. 105ಕ್ಕೂ ಹೆಚ್ಚು ದೇಶಗಳ 4 ಸಾವಿರಕ್ಕೂ ಹೆಚ್ಚಿನ ಪ್ರವೇಶಗಳಿಂದ ಈ ಚಲನಚಿತ್ರಗಳನ್ನು ಆರಿಸಲಾಗಿದೆ. ಸಾಕ್ಷ್ಯಚಿತ್ರ ಒಳಗೊಂಡಂತೆ ಚಲನಚಿತ್ರಗಳು 14, ಶಾರ್ಟ್‌ ಅನಿಮೇಷನ್‌ಗಳು 15, ಶಾರ್ಟ್‌ ಫಿಕ್ಷನ್ಸ್‌ ಮತ್ತು ಸಾಕ್ಷ್ಯಚಿತ್ರಗಳು 14, ಇಂಡಿಯನ್‌ ಪನೋರಮ ಸ್ಪರ್ಧೆಯೇತರ 16 ಮತ್ತು ವಿಶ್ವ ಸಿನಿಮಾ ಸ್ಪರ್ಧೆಯೇತರ 31 ಚಲನಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಈ ಉತ್ಸವವು ಕಲೆ, ವಿಜ್ಞಾನ ಮತ್ತು ಸಂಸ್ಕೃತಿಗಳ ಮಿಶ್ರಣ. ಕಲೆ, ಯೋಗ್ಯತಾ ನಿರ್ಣಯ ಮತ್ತು ಸಂವಾದಗಳ ಮೂಲಕ ಪರಿಸರ ಸಂರಕ್ಷಣೆ ಮಾಡುವುದೇ ಈ ಉತ್ಸವದ ಮೂಲ ಉದ್ದೇಶ.

‘ನಾವಿಂದು ಜೀವ ಪರಿಸರದ ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಇದಕ್ಕೆ ಕಾರಣಗಳು ಹಲವು. ಪರಿಸರ ಸಂರಕ್ಷಣೆಯೂ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಆಗ ಮಾತ್ರ ಭೂಮಂಡಲದಲ್ಲಿರುವ ಜೀವಿಗಳ ಉಳಿವು ಸಾಧ್ಯ ಎಂದರು ಉತ್ಸವದ ಅಧ್ಯಕ್ಷ ರಿಕಿ ಕೇಜ್‌.

‘ನಾನು ಗ್ರಾಮ್ಮಿ ಪ್ರಶಸ್ತಿ ಸ್ವೀಕರಿಸಿದ ದಿನದಿಂದಲೇ ವಿಶ್ವ ಪರಿಸರ ಸಂರಕ್ಷಣೆಗೆ ನಿರ್ಧರಿಸಿದೆ. ನನ್ನ ಈ ಹೋರಾಟಕ್ಕೆ ಭಾರತ ಸೇರಿದಂತೆ ವಿಶ್ವದ ಹಲವು ಮುಖಂಡರು ಬೆಂಬಲಿಸುತ್ತಿದ್ದಾರೆ. ಜನರಿಗೆ ಸಂದೇಶ ರವಾನಿಸಲು ಚಲನಚಿತ್ರವು ಅದ್ಭುತವಾದ ಮಾಧ್ಯಮ. ಕಲಾತ್ಮಕ ಮಾಧ್ಯಮಗಳ ಮೂಲಕ ಈ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT