ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 3–10–1967

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮತೀಯ ಸೌಹಾರ್ದಕ್ಕೆ ರಾಷ್ಟ್ರಪತಿ ಕರೆ

ನವದೆಹಲಿ, ಅ. 2– ಗಾಂಧಿ ಮಾರ್ಗಾನುಸರಣೆಯಿಂದ ಮಾತ್ರ ಮಾನವ ಕುಲದ ವಿಮೋಚನೆ ಹಾಗೂ ಶಾಂತಿ ಸ್ಥಾಪನೆ ಸಾಧ್ಯವೆಂದು ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಅವರು ಇಂದು ಇಲ್ಲಿ ನುಡಿದರು.

ಮಹಾತ್ಮ ಗಾಂಧಿ ಶತಮಾನೋತ್ಸವ ಸಿದ್ಧತಾ ಸಪ್ತಾಹ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತ ಅವರು ಅನೇಕ ರೀತಿಯಲ್ಲಿ ಅನೇಕ ಕಾರಣಗಳಿಗಾಗಿ ದೇಶದಲ್ಲಿ ಹಾನಿಯುಂಟು ಮಾಡಿದ ಜಾತೀಯತೆಯ ಬದಲು ನೈಜ ಮತೀಯ ಸೌಹಾರ್ದಕ್ಕೆ ಕರೆಯಿತ್ತರು.

**

ಮಹಾಜನ್ ವರದಿ ತಿರಸ್ಕಾರಕ್ಕೆ ಮಹಾರಾಷ್ಟ್ರ ಕಮ್ಯುನಿಸ್ಟರ ಕರೆ

ಮುಂಬೈ, ಅ. 2– ‘ಮಹಾಜನ್ ವರದಿಯನ್ನು ಚರ್ಚಿಸಲು ಮತ್ತು ತಿರಸ್ಕರಿಸಲು’ ಮಹಾರಾಷ್ಟ್ರ ವಿಧಾನಮಂಡಲದ ತುರ್ತು ಅಧಿವೇಶನವನ್ನು ನಡೆಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ ಮುಂಬೈ ಮಂಡಲಿಯ ಕಾರ್ಯದರ್ಶಿ ಶ್ರೀ ಪ್ರಭಾಕರ ವೈದ್ಯ ಅವರು ಮುಖ್ಯಮಂತ್ರಿ ಶ್ರೀ ವಿ.ಪಿ. ನಾಯಕ್ ಅವರಿಗೆ ಕರೆಯಿತ್ತಿದ್ದಾರೆ.

**

ಡಾ. ಲೋಹಿಯಾ ಆರೋಗ್ಯ ಸ್ವಲ್ಪ ಉತ್ತಮ

ನವದೆಹಲಿ, ಅ. 2– ಇಂದು ಬೆಳಿಗ್ಗೆ ಆತಂಕಕ್ಕೆ ಎಡೆಕೊಟ್ಟಿದ್ದ ಸೋಷಯಲಿಸ್ಟ್ ನಾಯಕ ಡಾ. ರಾಮ್ ಮನೋಹರ್‌ ಲೋಹಿಯಾ ಅವರ ಆರೋಗ್ಯ ಸ್ಥಿತಿಯು ಇಂದು ರಾತ್ರಿ ಸುಧಾರಿಸಿತು. ರಾತ್ರಿ 9ರ ಸಮಯದಲ್ಲಿ ಅವರು ಮಾತನಾಡಲು ಶಕ್ತರಾದರು.

‘ನಿಜಕ್ಕೂ ಅವರ ಸ್ಥಿತಿ ಸುಧಾರಿಸಿದೆ, ಯಾವುದೇ ಔಷಧಿ ಪ್ರಯೋಗವೂ ಇಲ್ಲದೆ ಅವರ ರಕ್ತದ ಒತ್ತಡ ಸಮರ್ಪಕವಾಗಿದೆ’ ಎಂದು ವಿಲ್ಲಿಂಗ್ಡನ್ ನರ್ಸಿಂಗ್ ಹೋಂನಲ್ಲಿ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರೊಬ್ಬರು ತಿಳಿಸಿದರು.

**

ಸಂಯುಕ್ತ ರಂಗದ ಅಸ್ತಿತ್ವಕ್ಕೆ ಧಕ್ಕೆ

ಕಲ್ಕತ್ತ, ಅ. 2– ಶ್ರೀ ಅಜಯ ಮುಖರ್ಜಿ ಅವರು ಕಮ್ಯುನಿಸ್ಟೇತರ ಸಂಪುಟವೊಂದನ್ನು ರಚಿಸುವ ಮಾತು ಕೇಳಿ ಬರುತ್ತಿದ್ದಂತೆಯೇ ಅಂತಹ ವಿದ್ಯಮಾನಗಳಿಂದ ಪಶ್ಚಿಮ ಬಂಗಾಳದ ಸಂಯುಕ್ತ ರಂಗದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಊಹಾಪೋಹ ನಡೆಯುತ್ತಿದೆ.

ಶ್ರೀ ಅಜಯ ಮುಖರ್ಜಿಯವರು ರಾಜೀನಾಮೆ ಸಲ್ಲಿಸಿದರೆ ಸಂಯುಕ್ತ ರಂಗವು ಅಸ್ತವ್ಯಸ್ತವಾಗುವುದೆಂದೂ ಪ್ರಜಾಸೋಷಲಿಸ್ಟ್ ಹಾಗೂ ಸಂಯುಕ್ತ ಸೋಷಲಿಸ್ಟ್ ಪಕ್ಷಗಳು ರಂಗದಲ್ಲಿ ಮುಂದುವರೆಯುವ ಸಂಭವವಿಲ್ಲವೆಂದೂ ರಾಜಕೀಯ ವೃತ್ತಗಳು ಅಭಿಪ್ರಾಯಪಟ್ಟಿವೆ.

**

ಉಸ್ಮಾನಿಯಾ ವಾರ್ಸಿಟಿ ಕಾಲೇಜ್ ವಿದ್ಯಾರ್ಥಿಗಳ ಚಳವಳಿ ಮುಕ್ತಾಯ

ಹೈದರಾಬಾದ್, ಅ. 2– ಶಿಕ್ಷಣ ಶುಲ್ಕ ಏರಿಕೆ ವಿರುದ್ಧ ಕಾಲೇಜ್ ವಿದ್ಯಾರ್ಥಿಗಳು ಏಳು ದಿನಗಳಿಂದ ನಡೆಸುತ್ತಿದ್ದ ಚಳವಳಿಯನ್ನು ಇಂದು ಸಂಜೆ ಮುಕ್ತಾಯಗೊಳಿಸಲಾಯಿತೆಂದು ಉಸ್ಮಾನಿಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ಸತ್ಯನಾರಾಯಣ ರೆಡ್ಡಿ ಅವರು ಪ್ರಕಟಿಸಿದರು.

ಈ ಚಳವಳಿ ಫಲವಾಗಿ ನಗರದಲ್ಲಿ ಹಾಗೂ ತೆಲಂಗಾಣ ಜಿಲ್ಲೆಗಳಲ್ಲಿ ಅನೇಕ ಗಲಭೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT