ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು?

ಗುರುವಾರ , ಮೇ 23, 2019
26 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು?

Published:
Updated:
ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು?

ಒಂದರ್ಥದಲ್ಲಿ ಎಲ್ಲರೂ ಗುರುಗಳೆ. ಅಂದರೆ ನಾವೆಲ್ಲರೂ ಒಂದಲ್ಲಾ ಒಂದು ಕಸಬನ್ನು ಕಲಿಯುವವರಾಗಿರುತ್ತೇವೆ ಅಥವಾ ಕಲಿಸುವವರಾಗಿರುತ್ತೇವೆ. ದಿನನಿತ್ಯದ ಬದುಕಿನಲ್ಲಿ ಕಲಿಕೆ ಅನಿವಾರ್ಯ. ಮಗಳಿಗೆ ಒಗ್ಗರಣೆ ಹೇಗೆ ಹಾಕಬೇಕೆಂದು ಕಲಿಸುವ ತಾಯಿ ಕೂಡಾ ಗುರು, ಹೊಲವನ್ನು ಹೇಗೆ ಉಳಬೇಕೆಂದು ಹೇಳಿಕೊಡುವ ತಂದೆ ಕೂಡಾ ಗುರು. ಶಿಶುನಾಳ ಶರೀಫರಿಗೆ ಗೋವಿಂದ ಭಟ್ಟರು ಗುರುಗಳು. ಕನ್ನಡ ಚಲನಚಿತ್ರದ ಎಷ್ಟೋ ನಟನಟಿಯರಿಗೆ ಪುಟ್ಟಣ್ಣ ಕಣಗಾಲ ಗುರುಗಳು. ಗಿರೀಶ ಕಾರ್ನಾಡ ಅವರೇ ಹೇಳುವಂತೆ ಬರವಣಿಗೆ ಎಂದರೆ ತಿದ್ದಿ ಮತ್ತೆ ಮತ್ತೆ ಬರೆಯುವುದೆಂದು ಕಲಿಸಿದ ಎ.ಕೆ ರಾಮಾನುಜನ್ ಮತ್ತು ಅವರ ಕನ್ನಡವನ್ನು ತಿದ್ದಿದ ಕೀರ್ತಿನಾಥ ಕುರ್ತಕೋಟಿ ಅವರ ಗುರುಗಳು. ಷೇಕ್ಸ್‌ಪಿಯರ್ ಜಗತ್ತಿನ ನಾಟಕಕಾರರಿಗೆಲ್ಲ ಗುರು. ಹಿಂದುಸ್ತಾನಿ ಸಂಗೀತ ಕಲಿಕೆಯಲ್ಲಿಯಂತೂ ಗುರು ಸಂಪ್ರದಾಯ ಮಹತ್ವದ ಪಾತ್ರವಹಿಸಿದೆ. ಹೀಗೆ ದಿನನಿತ್ಯದ ಸಾಮಾನ್ಯ ಕ್ಷೇತ್ರದಿಂದ ಹಿಡಿದು ವಿಶಿಷ್ಟವಾದ ಸಂಕೀರ್ಣ ಕ್ಷೇತ್ರಗಳವರೆಗೂ ನಮ್ಮನ್ನು ನಾವು ಗುರು-ಶಿಷ್ಯ ಅನುಸಂಧಾನದಲ್ಲಿ ತೊಡಗಿಸಿಕೊಂಡಿರುತ್ತೇವೆ.

ಆದರೆ ವಿಶೇಷವಾಗಿ ಇನ್ನೊಂದು ಗುರು ಪರಂಪರೆ ಇದೆ. ಅದೆಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರ ಗುರು ಪರಂಪರೆ. ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಶಿಕ್ಷಣ ಕ್ಷೇತ್ರವನ್ನು ಕಾಳಜಿಯಿಂದ ಕಟ್ಟಬೇಕಾದ ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕ ಗುರು ಆಗುವುದೆಂದರೇನು? ಎನ್ನುವ ಪ್ರಶ್ನೆ ಕೇಳುವುದು ತೀರಾ ಅಗತ್ಯವೆನಿಸುತ್ತದೆ. ಅಂದರೆ ವರ್ತಮಾನದಲ್ಲಿ ಶಿಕ್ಷಕನಾಗುವುದೆಂದರೆ ಏನು? ಎಂಬ ಪ್ರಶ್ನೆಯನ್ನು ಎತ್ತುತ್ತ, ಇಂದು ಶಿಕ್ಷಕನ ಜವಾಬ್ದಾರಿಗಳು, ಅವನಿಗಿರಬೇಕಾದ ಸಾಮರ್ಥ್ಯಗಳು, ತಾತ್ವಿಕ ಅರಿವು ಗುರಿಗಳನ್ನು ಕುರಿತು ಕೊಂಚ ಆಲೋಚಿಸುವುದು ಸಮಂಜಸವೆನಿಸುತ್ತದೆ. ಇಲ್ಲಿ ಉನ್ನತ ಶಿಕ್ಷಣದಲ್ಲಿ ತೊಡಗಿಕೊಂಡ ಶಿಕ್ಷಕರ ಕುರಿತು ವಿಶೇಷ ಗಮನ ಕೊಡಲಾಗಿದೆ.

ಇಟಲಿಯ ಚಿಂತಕ ಅಂಟೋನಿಯೊ ಗ್ರಾಮ್ಶಿ ಗುರುತಿಸುವಂತೆ ಶಿಕ್ಷಕರೆಂದರೆ ಸದಾ ಕಲಿಕೆಯಲ್ಲಿ ನಿರತರಾದವರು (ಮೆನ್ ಆಫ್ ಲರ್ನಿಂಗ್). ಹಾಗಾಗಿ ಶಿಕ್ಷಕ ವೃತ್ತಿ ಇನ್ನುಳಿದ ವೃತ್ತಿಗಳಂತಲ್ಲ. ಇದೊಂದು ಭಿನ್ನವಾದ ಜೀವನ ಕ್ರಮ. ಉಳಿದ ನೌಕರರು ತಮ್ಮ ಕಛೇರಿ ವೇಳೆ ಹೆಚ್ಚು ಕೆಲಸದಲ್ಲಿ ಮಗ್ನರಾಗಿದ್ದರೆ, ಶಿಕ್ಷಕವೃತ್ತಿಯಲ್ಲಿರುವವರು ಸದಾ ಅಧ್ಯಯನ ಮತ್ತು ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಪಾಂಡಿತ್ಯಪೂರ್ಣ ಬದುಕು ಅರೆಕಾಲಿಕ ಕೆಲಸವಲ್ಲ. ಅದೊಂದು ಪೂರ್ಣಾವಧಿ ಕೆಲಸ. ಅಧ್ಯಯನದಿಂದ ಪಾಂಡಿತ್ಯವನ್ನು ಗಿಟ್ಟಿಸಿಕೊಂಡು, ಅದನ್ನು ಗಿಟ್ಟಿಸಿಕೊಳ್ಳುವುದು ಹೇಗೆಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕನ ಪರಿಕಲ್ಪನೆ ಇದು. ಕೇವಲ ಪಾಂಡಿತ್ಯವು ಕಲಿಸಲಿಕ್ಕೆ ಯೋಗ್ಯವಾದುದೆಂದು (Only scholarship is worthy of teaching) ಅಮೆರಿಕಾದ ನಿರಚನವಾದದ ವಿಮರ್ಶಕ ಪೌಲ್ ದಿ ಮಾನ್ ಹೇಳುತ್ತಾನೆ. ಪಾಂಡಿತ್ಯವೆಂದರೆ ಉನ್ನತಮಟ್ಟದ ಕಲಿಕೆ. ಒಬ್ಬ ಶಿಕ್ಷಕನೆಂದರೆ ಪಂಡಿತ, ಚಿಂತಕ, ವಿದ್ವತ್‌ಅನ್ನು, ಆಲೋಚನೆ ಮಾಡುವುದನ್ನು ಕಲಿಸುವ ವಿಷಯ ತಜ್ಞ. ಲೋಕ-ಗ್ರಹಿಕೆಯನ್ನು ತೀಕ್ಷಣವಾಗಿ ಹಿಡಿಯುವ, ಕುತೂಹಲಕಾರಿಯಾದ ಬುದ್ಧಿಯನ್ನು ಹೊಂದಿದ ಸಂವೇದನಾಶೀಲ ಸೂಕ್ಷ್ಮಮತಿ. ಓದು, ಅಧ್ಯಯನ ಮತ್ತು ಆಲೋಚನೆ ಮಾಡುವುದನ್ನು ಕಲಿಸುವುದು ಪಾಂಡಿತ್ಯವನ್ನು ಕಲಿಸಿದಂತೆ. ಇದು ಒಂದು ಸಾಮರ್ಥ್ಯವೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ ಈ ವಿದ್ವತ್ ಪೂರ್ಣ ಶಿಕ್ಷಕ (ಸ್ಕಾಲರ್ಲಿ ಟೀಚರ್) ಇವೆಲ್ಲವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳವುದರ ಮೂಲಕ ತೃಪ್ತಿಯನ್ನು ಕಾಣುತ್ತಾನೆ; ವಿದ್ವತ್ ಅವನ ಆಯ್ಕೆ ಮತ್ತು ಆನಂದ.

ಇಂದಿನ ನಮ್ಮ ಸಮಸ್ಯೆ ಏನೆಂದರೆ ಹೇಗಾದರೂ ಡಿಗ್ರಿ ಪಡೆದು ಶಿಕ್ಷಕ ವೃತ್ತಿಯನ್ನು ಜೀವನೋಪಾಯಕ್ಕೋಸ್ಕರ ಅನುಸರಿಸುವ ಮನೋವೃತ್ತಿ ಹೆಚ್ಚಾಗಿ, ವಿದ್ವತ್ ಪೂರ್ಣ ಶಿಕ್ಷಕ ಮರೆಯಾಗುತ್ತಿದ್ದಾನೆ. ಈ ವೃತ್ತಿ ಒಂದು ನೌಕರಿಯಾಗಿ ಪರಿಗಣಿಸಲ್ಪಡುತ್ತಿದೆಯೇ ವಿನಾ ಒಂದು ಜೀವಂತರೂಢಿ ಸಂಪ್ರದಾಯವಾಗಿ (ಲಿವಿಂಗ್‌ ಪ್ರ್ಯಾಕ್ಟಿಸ್) ಕಾಣುತ್ತಿಲ್ಲ. ಇದನ್ನೇ ಅರಸಿ ಬಂದು ಅನುಸರಿಸುವ ಮಾದರಿಗಳು ಕಣ್ಮರೆಯಾಗುತ್ತಿವೆ. ಮಿಕ್ಕೆಲ್ಲ ವೃತ್ತಿಗಳನ್ನು ಪಡೆಯುವುದು ವಿಫಲವಾದಾಗ ಕೊನೆಯ ಆಯ್ಕೆಯಾಗಿ ಶಿಕ್ಷಕ ವೃತ್ತಿಯೆಂಬಂತಾಗಿದೆ. ಇದಕ್ಕೆ ವೈಯಕ್ತಿಕವಾಗಿ ವ್ಯಕ್ತಿಗಳನ್ನು ದೂಷಿಸುವುದು ವ್ಯರ್ಥ. ಇಂದು ನಾವು ಕಟ್ಟಿಕೊಳ್ಳುವ ಬದುಕಿನ ಪರಿಯೇ ಅಂತಹದಾಗಿದೆ. ಮೇಸ್ಟ್ರು, ಮಾಸ್ತರ್ ಎಂದರೆ ಎಂಜಿನಿಯರ್ ಡಾಕ್ಟರ್ ವೃತ್ತಿಗಳಿಗಿಂತ ಸಾಧಾರಣ ಎನ್ನುವ ಸಾಮಾಜಿಕ ಧೋರಣೆಯ ಕಾಲವಿದು. ವೃತ್ತಿಪರತೆಯಿಂದ ಬಾಹ್ಯಜೀವನವನ್ನು ಗುರುತಿಸುವ ಕಾಲದಲ್ಲಿ ಪಾಂಡಿತ್ಯಪೂರ್ಣ ಬದುಕಿನ ಅಂತರ್ ಜೀವನದ ಮೌಲ್ಯವನ್ನು ಅರಿಯುವುದು ಸ್ವಲ್ಪ ಕಷ್ಟ.

ಒಂದು ಸಾರಿ ನಮ್ಮ ಶಿಕ್ಷಣ ಕ್ಷೇತ್ರವನ್ನು ಪರಿಶೀಲಿಸೋಣ. ಅಲ್ಲಿ ಒಳ್ಳೆಯದಂತಹದನ್ನು ಕಂಡೇ ಕಾಣುತ್ತೇವೆ. ಆದರೆ ಆ ಕ್ಷೇತ್ರವನ್ನು ಇನ್ನೂ ಉತ್ತಮಗೊಳಿಸುವ ಸಾಧ್ಯತೆಗಳನ್ನೂ ಕಾಣುತ್ತೇವೆ. ಆದ್ದರಿಂದ ಅದನ್ನು ಕೊಂಚ ವಿಮರ್ಶಾತ್ಮಕವಾಗಿ ನೋಡಬೇಕೆಂದೆನಿಸುತ್ತದೆ. ಉತ್ತಮ ಶಿಕ್ಷಕನೆಂಬ ಪರಿಕಲ್ಪನೆಯ ತಿಳಿವಳಿಕೆಯಲ್ಲಿಯೇ ಕೆಲವು ಮಿತಿಗಳನ್ನು ಗುರುತಿಸಬಹುದು. ಶಿಕ್ಷಕರೂ ಸೇರಿದಂತೆ ವಿದ್ಯಾರ್ಥಿಗಳ ಪ್ರಕಾರ ಯಾರು ಒಳ್ಳೆಯ ಶಿಕ್ಷಕ? ಸರ್ವೇಸಾಮಾನ್ಯವಾಗಿ ಯಾರು ಕ್ಲಾಸ್‌ಗಳನ್ನು ಕತೆ, ಜೋಕ್ ಮುಂತಾದ ಮಸಾಲಗಳೊಂದಿಗೆ ರಂಜಿಸುತ್ತಾರೆಯೋ ಅವರು ಒಳ್ಳೆಯ ಶಿಕ್ಷಕ ಎಂಬಂತಾಗಿದೆ. ವಿದ್ಯಾರ್ಥಿಗಳನ್ನು ತೇಲಿಸಿ, ರಂಜಿಸಿ, ಅವರಿಗೆ ವೇಳೆ ಹೋಗಿದ್ದು ಗೊತ್ತಾಗದ ಹಾಗೆ ಮನರಂಜನೆಯನ್ನು ಕೊಡುವುದು ಒಳ್ಳೆ ಪಾಠ ಮಾಡುವ ಮಾದರಿಯೆಂದು ನಾವು ನಂಬಿದ್ದೇವೆ. ವಿದ್ಯಾರ್ಥಿಗಳು ಕೂಡಾ ಅದನ್ನೇ ಅಪೇಕ್ಷಿಸುತ್ತಾರೆ.

ಆದರೆ ಕ್ಲಾಸ್‌ರೂಮ್ ಎಂದರೆ ಮನರಂಜನೆಯ ತಾಣವಲ್ಲ, ಶಿಕ್ಷಕ ನಟನಲ್ಲ. ಕ್ಲಾಸ್ ಸಕತ್ತಾಗಿತ್ತು ಎಂದು ಫೀಡ್‌ಬ್ಯಾಕ್ ಕೊಡುವ ವಿದ್ಯಾರ್ಥಿಗಳು, ಕ್ಲಾಸ್‌ನ್ನು ಸಿನಿಮಾ ಥಿಯೇಟರ್‌ನಂತೆ ಭಾವಿಸಿರುತ್ತಾರೆ. ಕ್ಲಾಸ್‌ನ್ನು ಸಕತ್ತಾಗಿ ಮಾಡುವುದೆಂದರೆ ರಂಜಿಸುವುದಲ್ಲ, ಕಲಿಸುವುದು. ಕಲಿಸುವುದು ಕಠಿಣ. ಅದು ಶ್ರಮವನ್ನು ಬಯಸುತ್ತದೆ, ಬುದ್ಧಿಗೆ ಕೆಲಸ ಕೊಡುತ್ತದೆ. ವಿದ್ಯಾರ್ಥಿಗಳು ಇದನ್ನು ಇಷ್ಟ ಪಡುವುದು ಕಷ್ಟವೇ. ಹಾಗಾದರೆ ನಮ್ಮ ಮುಂದಿರುವ ಆಯ್ಕೆ ಮನರಂಜನೆ ಅಥವಾ ಕಲಿಕೆ. ಮನರಂಜನೆ ಕೊಡುವ ಶಿಕ್ಷಕ ಪರಿಕಲ್ಪನೆಗಿಂತ ಕಲಿಕೆಯನ್ನು ಸಾಕಾರಗೊಳಿಸುವ ಶಿಕ್ಷಕ ಪರಿಕಲ್ಪನೆ ಲೇಸು ಅಲ್ಲವೇ?

ಹಾಗಾದರೆ ಕಲಿಕೆಯೆಂದರೇನು? ಒಂದು ಜ್ಞಾನಕ್ಷೇತ್ರದಲ್ಲಿರುವ ವ್ಯಾಖ್ಯಾನಗಳನ್ನು ಬಾಯಿಪಾಠ ಮಾಡುವುದಲ್ಲ. ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳನ್ನು ತಯಾರಿ ಮಾಡುವುದಲ್ಲ. ಮಾಹಿತಿ ಸಂಗ್ರಹಿಸುವುದೂ ಅಲ್ಲ. ನಿರ್ದಿಷ್ಟ ಜ್ಞಾನಕ್ಷೇತ್ರದಲ್ಲಿ ಕೆಲವು ಕ್ರಿಯಾ-ಪ್ರಕ್ರಿಯೆಗಳನ್ನು ಕಲಿಯುವುದು. ಸಮಾಜಶಾಸ್ತ್ರವೇ ಆಗಲಿ, ರಸಾಯನಶಾಸ್ತ್ರವೇ ಆಗಲಿ, ಆ ಆ ಕ್ಷೇತ್ರಗಳಲ್ಲಿರುವ ಪರಿಕಲ್ಪನೆ, ಬೌದ್ಧಿಕ ಉಪಕರಣಗಳನ್ನು ಅರಿತುಕೊಂಡು, ಅವುಗಳನ್ನು ಹೇಗೆ ಬಳಸಬೇಕೆಂದು ಕಲಿಯುವುದು. ಹೀಗೆ ಕಲಿಯುವಾಗ ವಿದ್ಯಾರ್ಥಿಗಳು ತಪ್ಪುವುದು ಅಥವಾ ಅಲ್ಲಿ ದೋಷ ಉಂಟಾಗುವುದು ಸಹಜ; ಎಲ್ಲಾ ಕಲಿಕೆಗಳಲ್ಲಿ ಆಗುವಂತೆ. ಆಗ ಶಿಕ್ಷಕನಾದವನು ಅಂತಹ ತಪ್ಪುಗಳನ್ನು ತಿದ್ದಬೇಕು. ಆಗ ಕಲಿಕೆ ಉಂಟಾಗುತ್ತದೆ. ಕಲಿಕೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅವರು ಕಲಿಯುತಿದ್ದಾರೆಂದು ಅದರ ಅರ್ಥ. ಶಿಕ್ಷಕನ ಕೆಲಸವೆಂದರೆ ಕಲಿಕೆಯಲ್ಲಾಗುವ ತಪ್ಪುಗಳನ್ನು ಗುರುತಿಸಿ, ತಿದ್ದುವುದು. ಅದು ಒಂದು ಸಾಮರ್ಥ್ಯ.

ಕೆಲವು ಬಾರಿ ಶಿಕ್ಷಕನಾಗುವುದೆಂದರೆ ವಿದ್ಯಾರ್ಥಿಗಳ ಹಿತವನ್ನು ಬಯಸುವವನೆಂದು ತಿಳಿದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೆಚ್ಚಿನ ಮಾಹಿತಿಯನ್ನು ಕೊಡುವುದು, ಟಿಪ್ಪಣಿಗಳನ್ನು ಬರೆಸುವುದು ಅಥವಾ ಬರೆದು ಕೊಡುವುದು ಎಂದು ತಿಳಿದಿರುತ್ತೇವೆ. ಹೀಗೆ ಮಾಡುವುದರ ಹಿಂದಿನ ಉದ್ದೇಶ ಒಳ್ಳೆಯದೇ ಇರಬಹುದು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬೇಕೆಂಬ ಕಾಳಜಿಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಆದರೆ ಇದರಿಂದ ಒಂದರ್ಥದಲ್ಲಿ ವಿದ್ಯಾರ್ಥಿಗಳಿಗೆ ಪರೋಕ್ಷವಾಗಿ ಹಾನಿಯನ್ನು ಮಾಡುತ್ತಿರುತ್ತೇವೆ; ಇದು ಕಲಿಕೆಗೆ ಮಾರಕವಾಗಬಹುದು. ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಾವೇ ಸಂಗ್ರಹಿಸುವುದು ಹೇಗೆ, ಅದನ್ನು ಅರ್ಥೈಸುವುದು ಹೇಗೆ, ಟಿಪ್ಪಣಿಗಳನ್ನು ಮಾಡಿಕೊಂಡು ಪರೀಕ್ಷೆಗೆ ಸ್ವತಃ ತಯಾರಾಗುವ ಕೌಶಲಗಳನ್ನು ಕಲಿಸುವುದು ಸೂಕ್ತವೆನಿಸುತ್ತದೆ. ಮೇಲಾಗಿ ಪರೀಕ್ಷೆಗಳಿರುವುದು ಕಲಿಕೆಯನ್ನು ಮೌಲ್ಯಮಾಪನ ಮಾಡಲು. ಕಲಿಕೆ ಇರುವುದು ಪರೀಕ್ಷೆಗಳಿಗಾಗಿ ಅಲ್ಲ!

ಜಗತ್ತಿನ ಶ್ರೇಷ್ಠ ಶಿಕ್ಷಕರಲ್ಲೊಬ್ಬನಾದ ಸಾಕ್ರೆಟಿಸ್‌ನ ಶೈಕ್ಷಣಿಕ ವಿಧಾನದಿಂದ ಸಮಕಾಲೀನ ಶಿಕ್ಷಕ ಕಲಿಯಬೇಕಾಗಿದೆ. ಕಲ್ಲುಗುಟಿಗ ತಂದೆ, ಸೂಲಗಿತ್ತಿ ತಾಯಿಯ ಮಗನಾದ ಸಾಕ್ರೆಟಿಸ್ ತನ್ನ ಶಿಕ್ಷಣ ಕಲೆಯನ್ನು ಅವನ ತಂದೆ-ತಾಯಿಂದಿರಿಂದ ಕಲಿತರಬೇಕು. ಕಲ್ಲಿಗೆ ಆಕಾರ ಬರುವುದು ಹೊರಗಿನಿಂದ ಅಲ್ಲ. ಅದು ಕಲ್ಲಿನೊಳಗೇ ಇರುತ್ತದೆ. ಅದನ್ನು ಕೆತ್ತಿ ಒಂದು ಆಕಾರ ಕೊಡಬೇಕಾಗುತ್ತದೆ. ತಾಯಿಯ ಗರ್ಭದಿಂದ ಸೂಲಗಿತ್ತಿ ಮಗುವನ್ನು ಹೊರಗೆ ತಗೆಯಬೇಕು. ಸಾಕ್ರೆಟಿಸ್ ಕೂಡಾ ಈ ಸಿದ್ಧಾಂತವನ್ನೇ ನಂಬಿದ್ದ. ವಿದ್ಯೆ ಎನ್ನುವುದು ವಿದ್ಯಾರ್ಥಿಗಳಲ್ಲಿ ಇರುತ್ತದೆ. ಶಿಕ್ಷಕನ ಕೆಲಸವೆಂದರೆ ಅದನ್ನು ಹೊರಗೆ ತೆಗೆಯುವುದು. ಇದನ್ನೇ ವಿವೇಕಾನಂದರು Education is the manifestation of the perfection already in man ಎಂದಿದ್ದು. ಆದರೆ ಮಾಹಿತಿ ಪ್ರಧಾನ ಶಿಕ್ಷಣ ಮಾದರಿ, ವಿದ್ಯಾರ್ಥಿಗಳ ತಲೆಗೆ ಹೊರಗಿನಿಂದ ದತ್ತಾಂಶ ತುಂಬುವುದನ್ನು ನಂಬುತ್ತದೆ.

ಸಾಕ್ರೆಟಿಸ್ ಕಲಿಕಾ ವಿಧಾನವೆಂದರೆ ಪ್ರಶ್ನೆಗಳನ್ನು ಎತ್ತುವುದು ಮತ್ತು ಉತ್ತರಗಳನ್ನು ಹುಡುಕುವ ಚರ್ಚಾಕುಶಲ ಶಿಕ್ಷಣ ಪದ್ಧತಿ. ವಿದ್ಯಾರ್ಥಿಗಳಿಗೆ ಸಮಂಜಸ ಪ್ರಶ್ನೆಗಳನ್ನು ಹೇಗೆ ಕೇಳಬೇಕೆಂಬುದನ್ನು ಕಲಿಸಬೇಕು. ಆದರೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪ್ರಶ್ನೆಗಳಿಗೆ ಸಿದ್ಧವಾಗಿರುವ ಉತ್ತರಗಳನ್ನು ಹೇಗೆ ಕೊಡಬೇಕೆಂಬ ತರಬೇತಿಯನ್ನೇ ಹೆಚ್ಚು ಕೊಡುತ್ತೇವೆ. ಅದಕ್ಕಾಗಿ ಮಾಹಿತಿ ಒದಗಿಸುವ ಹಪಾಹಪಿ. ಒಂದು ಕಾಲವಿತ್ತು. ಮಾಹಿತಿ ಒದಗಿಸುವುದು ಕೂಡಾ ಶಿಕ್ಷಕನ ಜವಾಬ್ದಾರಿಯಾಗಿತ್ತು. ಈಗ ಮಾಹಿತಿ ಯುಗದಲ್ಲಿಯೇ ನಾವಿದ್ದೇವೆ. ಗೂಗಲ್ ಆ ಕೆಲಸ ಮಾಡುತ್ತದೆ. ಒಂದು ವೇಳೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಹಿತಿ ಸಂಗ್ರಹಿಸುವುದು ಕಷ್ಟವೆನಿಸಿದರೂ, ಮಾಹಿತಿಯನ್ನು ಹೇಗೆ ಸಂಗ್ರಹಿಸ ಬೇಕೆಂಬುದನ್ನು ಕಲಿಸುವುದು ಅಗತ್ಯ. ಬೋಧಿಸುವುದಕ್ಕಿಂತ ಕಲಿಯುವಂತೆ ಮಾಡಬೇಕು ಎನ್ನುವುದು ಸಾಕ್ರೆಟಿಸ್‌ನ ವಾದ.

ಮಾಹಿತಿ ಒದಗಿಸುವ ಕೆಲಸವಿಲ್ಲವೆಂದರೆ, ಶಿಕ್ಷಕರು ಕ್ಲಾಸಿನಲ್ಲಿ ಏನು ಮಾಡಬೇಕು? ಅವರು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಬೆಳೆಸುವ ಕೆಲಸ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟವಾದ ಸಾಮರ್ಥ್ಯ ಬೆಳೆಸಬೇಕಾದರೆ ಮೊದಲು ಶಿಕ್ಷಕರಿಗೆ ಆ ಸಾಮರ್ಥ್ಯ ಇರಬೇಕಾಗುತ್ತದೆ. ಉದಾಹರಣೆಗೆ, ಭಾಷಾ ವಿಷಯಗಳನ್ನು ಕಲಿಸುವ ಶಿಕ್ಷಕರು ಓದುವ ಮತ್ತು ಬರೆಯುವ ಸಾಮರ್ಥ್ಯಗಳನ್ನು ತಮ್ಮ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾದರೆ, ಮೊದಲು ಅವರಿಗೆ ಆ ಸಾಮರ್ಥ್ಯ ಇರಬೇಕು. ಭೌತಶಾಸ್ತ್ರವನ್ನು ಮಾಡುವುದು ಹೇಗೆಂದು ಕಲಿಸುವ ಶಿಕ್ಷಕ ಮೊದಲು ಭೌತಶಾಸ್ತ್ರ ಹೇಗೆ ಮಾಡಬೇಕೆಂಬ ಸಾಮರ್ಥ್ಯವನ್ನು ಗಿಟ್ಟಿಸಿಕೊಂಡಿರಬೇಕು. ಇಲ್ಲದಿದ್ದರೆ ಭೌತಶಾಸ್ತ್ರದ ಸಿದ್ಧಾಂತಗಳ ಬಗ್ಗೆ ಮಾಹಿತಿ ಒದಗಿಸುವ ಕೆಲಸ ಮಾಡಬೇಕಾಗುತ್ತದೆ. ಹೇಗೆ ಹಿಂದುಸ್ಥಾನಿ ಸಂಗೀತದಲ್ಲಿ ನಿರ್ದಿಷ್ಟ ರಾಗ, ಘರಾಣ ಗೊತ್ತಿದ್ದವರು ಆ ಪರಂಪರೆಯ ಗುರುವಾಗುತ್ತಾರೆಯೋ ಹಾಗೆ ನಿರ್ದಿಷ್ಟ ವಿಷಯ ತಜ್ಞರು ನಿರ್ದಿಷ್ಟ ವಿಷಯದ ಶಿಕ್ಷಕರಾಗಬೇಕು.

ಕೊನೆಯದಾಗಿ, ಶಿಕ್ಷಕನ ಅಸ್ಮಿತೆ ಹೇಗಿರಬೇಕು? ಶಿಕ್ಷಕನಾದವನು, ವಿಶೇಷವಾಗಿ ಉನ್ನತ ಶಿಕ್ಷಣದ ತಾಣಗಳಾದ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ, ತನ್ನನ್ನು ತಾನು ಹುದ್ದೆಗಳೊಂದಿಗೆ ಗುರುತಿಸಿಕೊಳ್ಳುವುದು ರೂಢಿ. ಅಂದರೆ ನಾನೊಬ್ಬ ಉಪನ್ಯಾಸಕ, ಸಹ-ಪ್ರಾಧ್ಯಾಪಕ ಅಥವಾ ಪ್ರಾಧ್ಯಾಪಕ ಇತ್ಯಾದಿ. ಇವು ಶಿಕ್ಷಕನ ಅಸ್ಮಿತೆಗಳಲ್ಲ. ಇತಿಹಾಸದ ಶಿಕ್ಷಕ ತನ್ನನ್ನು ತಾನು ಇತಿಹಾಸಕಾರನೆಂದು ಗುರುತಿಸಿಕೊಳ್ಳುವುದು ಅವಳ ಅಸ್ಮಿತೆ. ಹೀಗೆ ಆಯಾ ಜ್ಞಾನಶಾಖೆಗಳಿಗೆ ಅನುಗುಣವಾಗಿ ತಾನೊಬ್ಬ ಸಮಾಜಶಾಸ್ತ್ರಜ್ಞ, ಭೌತವಿಜ್ಞಾನಿ, ರಸಾಯನಿಕ ವಿಜ್ಞಾನಿ ಎಂದು ಗುರುತಿಸಿಕೊಳ್ಳಬೇಕು. ಶಿಕ್ಷಕನ ಅಸ್ಮಿತೆ ಅವನ ಜ್ಞಾನಶಿಸ್ತುಗಳೊಂದಿಗೆ ಹೋಗಬೇಕು, ಹುದ್ದೆಗಳೊಂದಿಗಲ್ಲ. ಇದರ ತಾತ್ಪರ್ಯವೆಂದರೆ ಇತಿಹಾಸಕಾರ ಇತಿಹಾಸವನ್ನು, ಸಮಾಜಶಾಸ್ತ್ರಜ್ಞ ಸಮಾಜ ವಿಜ್ಞಾನವನ್ನು, ಭೌತವಿಜ್ಞಾನಿ ಭೌತವಿಜ್ಞಾನವನ್ನು ಕಲಿಸವ ಶಿಕ್ಷಕನಾಗಬೇಕು. ಏಕೆಂದರೆ ಅವರೆಲ್ಲರೂ ಮುಂದಿನ ಪೀಳಿಗೆಯ ಇತಿಹಾಸಕಾರರನ್ನು, ಸಮಾಜ ವಿಜ್ಞಾನಿಗಳನ್ನು, ನೈಸರ್ಗಿಕ ವಿಜ್ಞಾನಿಗಳನ್ನು ಸೃಷ್ಟಿಸುವ ಕೆಲಸದಲ್ಲಿ ತೊಡಗಿರುತ್ತಾರೆಯೇ ಹೊರತು ಉಪನ್ಯಾಸಕರನ್ನು, ಪ್ರಾಧ್ಯಾಪಕರನ್ನು ತಯಾರು ಮಾಡುವುದರಲ್ಲಿ ಅಲ್ಲ.

ಈ ಮೇಲೆ ವಿಶ್ಲೇಷಿಸಿದ ವಿವರಣೆಯ ಅರ್ಥ ನಾನು ಅಂತಹ ಒಬ್ಬ ಉತ್ತಮ ಶಿಕ್ಷಕ ಎಂಬ ಮನೋಭಾವನೆಯಿಂದ ಅಲ್ಲ!. ನನ್ನ ವೃತ್ತಿ ಜೀವನದಲ್ಲಿ ಶಿಕ್ಷಕನಾಗುವುದೆಂದರೇನು? ಎಂಬ ಪ್ರಶ್ನೆ ಕೇಳಿಕೊಂಡು, ಪಡೆದ ಸಣ್ಣ ಉತ್ತರವನ್ನು ಹಂಚಿಕೊಂಡಿದ್ದೇನೆ. ಶಿಕ್ಷಕನಾಗುವುದೆಂದರೆ ರಂಜಿಸುವ ಮಾಂತ್ರಿಕನಾಗುವುದಲ್ಲ. ವಿಚಾರಿಕೆಯ, ಚಿಂತನಶೀಲ ಬದುಕನ್ನು ಅನುಸುರಿಸುವ ವಿಷಯ ತಜ್ಞರಾಗುವುದು. ವಿದ್ಯಾರ್ಥಿಗಳಿಗೆ ಆಲೋಚನೆ ಮಾಡುವುದನ್ನು ಕಲಿಸುವುದು.

ನಮ್ಮ ಸುತ್ತಮುತ್ತ ಅಂತಹ ವಿಷಯ ತಜ್ಞರಾದ ಶಿಕ್ಷಕರಿದ್ದಾರೆಂಬುದನ್ನು ಅಲ್ಲಗಳೆಯುವಂತಿಲ್ಲ. ಅವರನ್ನು ಅನುಸರಿಸಿ ಕಲಿಯಬೇಕಾಗಿದೆ!

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry