ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಹೌಸ್‌ನೊಳಗೆ ಕ್ಯಾಪ್ಸಿಕಂ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗದ್ದೆಗಳಲ್ಲಿ ಕ್ಯಾಪ್ಸಿಕಂ ಬೆಳೆಯುವವರನ್ನು ನೋಡಿದ್ದೇವೆ. ರಾಜ್ಯದಲ್ಲಿ ಬೆರಳೆಣಿಕೆ ಯಷ್ಟು ಮಂದಿ ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆಯಲು ಪ್ರಯತ್ನಿಸಿದ್ದಾರೆ.ಚಿಕ್ಕಮಗಳೂರಿನ ಪ್ರೇಮಾ ಕಾಮತ್ ಅಂಥವರಲ್ಲಿ ಒಬ್ಬರು. 22 ಗುಂಟೆಯಲ್ಲಿ ಪಾಲಿಹೌಸ್ ನಿರ್ಮಿಸಿ ಕ್ಯಾಪ್ಸಿಕಂ ಬೆಳೆದು ಆದಾಯವನ್ನು ಗಳಿಸುತ್ತಿದ್ದಾರೆ.

ಹಿಂದೆ ಆಲೂಗಡ್ಡೆ, ಬೀನ್ಸ್, ಬಟಾಣಿ, ಟೊಮಾಟೊ ಹೀಗೆ ತರಕಾರಿಗಳನ್ನೇ ಬೆಳೆಯುತ್ತಿದ್ದ ಇವರು ಪಾಲಿಹೌಸ್‌ನಲ್ಲಿ ಗುಲಾಬಿ, ಮೆಣಸು ಬೆಳೆಯುವ ಬಗ್ಗೆ ಲೇಖನಗಳನ್ನು ಓದಿ ತಿಳಿದುಕೊಂಡರು. ತೋಟಗಾರಿಕಾ ಇಲಾಖೆಯಿಂದ ಮಾಹಿತಿ, ಮಾರ್ಗದರ್ಶನದ ಜತೆಗೆ ಸಬ್ಸಿಡಿ ಸಹಿತ ಹಣಕಾಸಿನ ನೆರವೂ ಸಿಕ್ಕಿತು.

ನಾಲ್ಕು ತಿಂಗಳ ಹಿಂದೆ ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ಮುಗಿದು ಇದೀಗ ಅದರಲ್ಲಿ ಆರು ಸಾವಿರ ಮೆಣಸಿನ ಗಿಡಗಳು ಬೆಳೆದಿದ್ದು, ಇಳುವರಿ ನೀಡುತ್ತಿವೆ. ನೂರು ಗ್ರಾಂಗೆ ₹33,000ದಂತೆ ಬೀಜವನ್ನು ಖರೀದಿಸಿ ನರ್ಸರಿಯವರಿಗೆ ನೀಡಿ ಅವರಿಂದ ಸಸಿ ಮಾಡಿಸಿಕೊಂಡರು. ಗಿಡಕ್ಕೆ ತಲಾ ₹7.50ರಂತೆ ನರ್ಸರಿ ವೆಚ್ಚವಾಯಿತು.

ಪಾಲಿಹೌಸ್‌ ಒಳಗೆ ಸರ್ವಋತುಗಳಲ್ಲೂ ಒಂದೇ ರೀತಿಯ ವಾತಾವರಣ ಇರುತ್ತದೆ. ಆದ್ದರಿಂದ ಯಾವಾಗ ಬೇಕಾದರೂ ನಾಟಿ ಮಾಡಬಹುದು. ಐದು ಅಡಿ ಅಂತರದಲ್ಲಿ ಸಾಲು ನಿರ್ಮಿಸಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಬಿಟ್ಟು ಸಸಿ ನೆಡಲಾಗಿದೆ.

ನಾಟಿ ಹಂತದ ಬಳಿಕ ಆಗಾಗ ರಾಸಾಯನಿಕ ಗೊಬ್ಬರ ನೀಡುತ್ತಿರಬೇಕು. ಎರಡು ದಿನಕ್ಕೊಮ್ಮೆ ರೋಗ ಬಾರದಂತೆ ಮದ್ದನ್ನು ಸಿಂಪಡಿಸುತ್ತಿರಬೇಕು. ಬೆಳೆಗೆ ನೀರು ಅಗತ್ಯ. ಹನಿ ನೀರಾವರಿ ವ್ಯವಸ್ಥೆಯೊಂದಿಗೆ ಎತ್ತರದಿಂದ ಎಲ್ಲಾ ಗಿಡಗಳಿಗೆ ಇಬ್ಬನಿಯಂತೆ ಏಕಕಾಲದಲ್ಲಿ ನೀರೊದಗಿಸಲು ಫೋಗಾರ್ ನೀರಾವರಿ ವ್ಯವಸ್ಥೆ ಕೈಗೊಂಡಿದ್ದಾರೆ.

ಗಿಡಗಳು ದೊಡ್ಡವಾದ ಮೇಲೆ ಬೀಳದಂತೆ ನೋಡಿಕೊಳ್ಳಲು ದಾರದಿಂದ ಅವುಗಳನ್ನು ಕಟ್ಟಲಾಗುತ್ತದೆ. ನೆಟ್ಟು 45 ದಿನದಲ್ಲಿ ಕಾಯಿ ನೀಡಲು ಆರಂಭ. ಇವರು ಗಿಡಗಳನ್ನು ಕಟಾವಿಗೆ ಅನುಕೂಲವಾಗುವಂತೆ ವಿಂಗಡಿಸಿಕೊಂಡಿದ್ದಾರೆ. ವಾರಕ್ಕೆ ಒಂದೂವರೆ ಟನ್ ಮೆಣಸು ಕಟಾವಿಗೆ ಸಿಗುತ್ತಿದೆ. ಕೆ.ಜಿ.ಗೆ ₹28ರಂತೆ ನೀಡಿ ಇಲ್ಲಿಗೆ ಬಂದು ಖರೀದಿಸುತ್ತಾರೆ. ಮೂರು ಮೆಣಸು ಸುಮಾರು ಒಂದು ಕೆ.ಜಿ.ಯಷ್ಟು ತೂಗುತ್ತದೆ.

ಒಂದು ಗಿಡದಿಂದ ನಾಲ್ಕು ಕೆ.ಜಿ. ಕಾಯಿ ಲಭ್ಯ. ಒಂದೂವರೆ ವರ್ಷದವರೆಗೆ ಇಳುವರಿ ಸಿಗುತ್ತದೆ. ನಂತರ ಬೇರೆ ಬೆಳೆಯನ್ನು ಬೆಳೆಯಬೇಕು. ಪಾಲಿಹೌಸ್ ಐದು ವರ್ಷಗಳವರೆಗೆ ಹಾಳಾಗುವುದಿಲ್ಲ. ಹಳದಿ, ಹಸಿರು, ಕೆಂಪು ಮೂರು ಬಣ್ಣದ ತಳಿಗಳು ಇವರಲ್ಲಿವೆ. ಗಿಡಗಳಿಗೆ ರೋಗ ಬರುವುದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ತೋಟದ ಸುತ್ತ ಒಳಭಾಗದಲ್ಲಿ ಚೆಂಡು ಹೂವಿನ ಗಿಡವನ್ನು ನೆಟ್ಟಿದ್ದಾರೆ.

ಬೇಸಿಗೆಗಾಲದಲ್ಲಿ ಉಷ್ಣಾಂಶವನ್ನು ನಿಯಂತ್ರಿಸಲು ಪಾಲಿಹೌಸ್‌ನ ಒಳಭಾಗದಿಂದ ಎತ್ತರವಾಗಿ ಶೇಡ್‌ ನೆಟ್‌ ಅಳವಡಿಸಬೇಕು. ಮಳೆ, ಚಳಿಗಾಲದಲ್ಲಿ ಅಗತ್ಯವಿರುವುದಿಲ್ಲ. ಸಮಪ್ರಮಾಣದ ವಾತಾವರಣವನ್ನು ದಿನದ 24 ಗಂಟೆಯೂ ಕಾಯ್ದುಕೊಳ್ಳಬೇಕು. ಕ್ಯಾಪ್ಸಿಕಂ ಬೆಳೆಯಲ್ಲಿನ ಪ್ರೇಮಾ ಅವರ ಪ್ರಯೋಗ ಇತರರಿಗೆ ಮಾದರಿ. ಅವರ ಸಂಪರ್ಕಕ್ಕೆ: 90358 29770 (ರಾತ್ರಿ 7 ರಿಂದ 7.30ರವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT