ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಲಿಹೊಳೆ–ಕೊಡಗಿನ ಮತ್ತೊಂದು ಗರಿಮೆ!

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪ್ರಕೃತಿದತ್ತವಾದ ರಮಣೀಯ ತಾಣಗಳನ್ನು ಒಡಲಲ್ಲಿಟ್ಟುಕೊಂಡು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಕೊಡಗು ಜಿಲ್ಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಬರವಿಲ್ಲ. ಜೀವನದಿ ಕಾವೇರಿ ಆವಿರ್ಭವಿಸುವ ಕಾಫಿ ನಾಡಿನಲ್ಲಿ ಜಲ ಮೂಲಗಳಿಗೂ ಕೊರತೆ ಇಲ್ಲ. ದೊಡ್ಡ ಜಲ‍ಪಾತಗಳು, ಅಲ್ಲಲ್ಲಿ ಕಾಣ ಸಿಗುವ ಸಣ್ಣ ಸಣ್ಣ ತೊರೆಗಳು, ಝರಿಗಳು, ಪುಟ್ಟ ನದಿಗಳು ಕೊಡಗು ಪ್ರವಾಸವನ್ನು ಸ್ಮರಣೀಯವನ್ನಾಗಿಸುತ್ತವೆ.

ಮಡಿಕೇರಿ–ಮೈಸೂರು ನಡುವಣ ಮುಖ್ಯ ರಸ್ತೆ ಬಿಟ್ಟು ಸಣ್ಣ ಪಟ್ಟಣಗಳು, ಗ್ರಾಮೀಣ ಭಾಗಗಳತ್ತ ಸಾಗುವ ಮಾರ್ಗದತ್ತ ಹೊರಳಿದರೆ, ಚಿಕ್ಕ ಹೊಳೆಗಳಲ್ಲಿ ಹರಿವ ನೀರನ್ನು ಕಿಂಡಿ ಅಣೆಕಟ್ಟಿನ ಮೂಲಕ ತಡೆದ ಪ್ರಯತ್ನಗಳೂ ಅಲ್ಲಲ್ಲಿ ಕಾಣಸಿಗುತ್ತವೆ. ಈ ಪುಟ್ಟ ಜಲಾಶಯಗಳು ಸುತ್ತಮುತ್ತಲಿನ ಪ್ರದೇಶಗಳ ನೀರಿನ ಅಗತ್ಯವನ್ನು ಪೂರೈಸುತ್ತವೆ.

ಕೊಡಗಿನಲ್ಲಿ ಅಣೆಕಟ್ಟು ಅಥವಾ ಜಲಾಶಯ ಎಂದಾಕ್ಷಣ ನೆನಪಾಗುವುದು ಹಾರಂಗಿ ಜಲಾಶಯ. ದಿನಂಪ್ರತಿ ನೂರಾರು ಪ್ರವಾಸಿಗರು ಭೇಟಿ ನೀಡುವ ಈ ಜಲಾಶಯವನ್ನು ಬಿಟ್ಟು, ಪರಿಸರ ಕುತೂಹಲಿಗಳನ್ನು ಆಕರ್ಷಿಸುವ ಇನ್ನೊಂದು ಜಲಾಶಯ ಅಲ್ಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹಾರಂಗಿಯಷ್ಟು ದೊಡ್ಡ ಜಲಾಶಯ ಅದಲ್ಲ. ಆದರೆ, ನೋಡುಗನ ಮೈಮನ ತಣಿಸುವಷ್ಟು ಜಲರಾಶಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅದು ಹಿಂದೆ ಬಿದ್ದಿಲ್ಲ. ಅದರ ಹೆಸರು ಚಿಕ್ಲಿಹೊಳೆ ಜಲಾಶಯ.‌

ದಟ್ಟ ಕಾನನದ ನಡುವೆ, ಹಚ್ಚ ಹಸುರನ್ನು ಮೈಹೊದ್ದುಕೊಂಡಿರುವ ಈ ಜಲಾಶಯವು ಪ್ರಶಾಂತ ವಾತಾವರಣ, ನೆಮ್ಮದಿಯ ಅನುಭೂತಿ ಬಯಸುವ ನಿಸರ್ಗ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ. ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ ಅಡ್ಡವಾಗಿ ಈ ಜಲಾಶಯ ನಿರ್ಮಿಸಲಾಗಿದೆ. ಸುತ್ತಲಿನ 18 ಗ್ರಾಮಗಳ ಕೃಷಿ ಭೂಮಿಗೆ ನೀರು ಪೂರೈಸುವ ಉದ್ದೇಶದಿಂದ 1985ರಲ್ಲಿ ರೂಪುತಳೆದಿರುವ ಈ ಜಲಾಶಯ ಕಾವೇರಿ ನೀರಾವರಿ ನಿಗಮದ ಅಧೀನದಲ್ಲಿದೆ.

0.18 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವ ಈ ಅಣೆಕಟ್ಟು 464.90 ಮೀಟರ್‌ ಉದ್ದವಿದೆ. ಇದರಲ್ಲಿ ಗರಿಷ್ಠ 265 ಎಕರೆಗಳಷ್ಟು ಪ್ರದೇಶದಲ್ಲಿ ನೀರು ಹರಡಿಕೊಳ್ಳುತ್ತದೆ. ಈ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ಗಳಿಲ್ಲ. ಬದಲಿಗೆ ಜಲಾಶಯ ತುಂಬಿದ ನಂತರ, ನೀರು ಹೊರಹೋಗಲು ಕೋಡಿ ನಿರ್ಮಿಸಲಾಗಿದೆ. ಇದರಲ್ಲೂ ಒಂದು ವೈಶಿಷ್ಟ್ಯವಿದೆ. ಈ ಕೋಡಿಯು ಅಂಡಾಕಾರದಲ್ಲಿದೆ. ಜಲಾಶಯ ತುಂಬಿದಾಗ ಇದರ ಮೂಲಕ ನೀರು ಹರಿಯುವ ದೃಶ್ಯ ನಿಜಕ್ಕೂ ನಯನ ಮನೋಹರ.

ಪ್ರಸಿದ್ಧ ಪ್ರವಾಸಿ ಕೇಂದ್ರ– ದುಬಾರೆ ಆನೆ ಶಿಬಿರ ದಿಂದ ಕೇವಲ 5 ಕಿ.ಮೀ ದೂರದಲ್ಲಿ ಚಿಕ್ಲಿಹೊಳೆ ಜಲಾಶಯವಿದೆ. ದುಬಾರೆಗೆ ಹೋಗುವ ಮಾರ್ಗದಲ್ಲೇ ಇದ್ದರೂ, ಹೆಚ್ಚಿನ ಪ್ರವಾಸಿಗರು ಇತ್ತ ಕಾಲಿಡುವುದಿಲ್ಲ. ಹಾಗಾಗಿ ಜಲಾಶಯದ ಬಳಿ ಅಂಗಡಿಗಳು, ಜನರ ಗೌಜಿ ಗದ್ದಲಗಳು ಕಾಣ ಸಿಗುವುದಿಲ್ಲ. ಆದರೆ, ನೀರು ಕಂಡರೆ ಹುಚ್ಚೆದ್ದು ಕುಣಿಯುವ ಕೆಲವು ಪ್ರವಾಸಿಗರು ಎಚ್ಚರಿಕೆಯ ಫಲಕಗಳನ್ನೂ ಲೆಕ್ಕಿಸದೆ ನೀರಿನತ್ತ ಇಳಿಯುವುದಕ್ಕೆ ಮುಂದಾಗುತ್ತಾರೆ.

ಸ್ವಚ್ಛ, ಸುಂದರ ವಾತಾವರಣವನ್ನು ಅನುಭವಿಸ ಬೇಕು, ಕೊಡಗಿನ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸಬೇಕು ಎಂದುಕೊಳ್ಳುವವರು ಚಿಕ್ಲಿ ಜಲಾಶಯ‌ವನ್ನು ಕಣ್ತುಂಬಿಕೊಳ್ಳಲೇಬೇಕು.

ಹೀಗೆ ಬನ್ನಿ: ಕುಶಾಲನಗರ–ಸಿದ್ದಾಪುರ ರಸ್ತೆಯಲ್ಲಿ 15 ಕಿ.ಮೀ ಬಂದು ರಂಗಸಮುದ್ರ ಗ್ರಾಮದಲ್ಲಿ ಬಲಕ್ಕೆ ತಿರಬೇಕು. ಅಲ್ಲಿಂದ ಕಾಡಿನ ನಡುವೆ ಮೂರು ಕಿ.ಮೀ ಉದ್ದದ ಟಾರು ರಸ್ತೆಯಲ್ಲಿ ಸಾಗಿದರೆ ಜಲಾಶಯ ಸಿಗುತ್ತದೆ. ಚಿಕ್ಲಿಹೊಳೆ ಜಲಾಶಯವು ಮಡಿಕೇರಿಯಿಂದ 45 ಕಿ.ಮೀ ದೂರದಲ್ಲಿದೆ. ಸಂಪರ್ಕ ಸಾರಿಗೆ ವ್ಯವಸ್ಥೆ ಲಭ್ಯವಿಲ್ಲದಿರುವುದರಿಂದ, ಸ್ವಂತ ವಾಹನ ಇಲ್ಲವೇ ಟ್ಯಾಕ್ಸಿ, ಆಟೊಗಳಲ್ಲೇ ಹೋಗಬೇಕಷ್ಟೆ.

ನಿರ್ವಹಣೆ ಕೊರತೆ: ಸುಂದರ ಪ್ರವಾಸಿ ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿರುವ ಚಿಕ್ಲಿ ಜಲಾಶಯವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಇದರ ಮಾಲೀಕತ್ವ ಹೊಂದಿರುವ ಕಾವೇರಿ ನಿರಾವರಿ ನಿಗಮ ಈ ಬಗ್ಗೆ ಹೆಚ್ಚು ಗಮನ ನೀಡಿದಂತಿಲ್ಲ. ಅಲ್ಲಿರುವ ನಿಗಮದ ಕಚೇರಿಗಳು ಪಾಳುಬಿದ್ದಿವೆ. ‘ನೀರಿಗೆ ಇಳಿಯದಿರಿ ಮೊಸಳೆಗಳಿವೆ’ ಎಂದು ಹೇಳುವ ಎಚ್ಚರಿಕೆ ಫಲಕ ಅಳವಡಿಸಿದ್ದರೂ, ತಡೆಬೇಲಿಗಳು ಇಲ್ಲ. ಮೇಲ್ವಿಚಾರಣೆ ವ್ಯವಸ್ಥೆ ಇಲ್ಲದಿರುವುದರಿಂದ ಈ ಪ್ರದೇಶ ಅನೈತಿಕ ಚಟುವಟಿಗಳ ತಾಣವಾಗುತ್ತಿದೆ ಎಂಬ ಆರೋಪ ಸ್ಥಳೀಯರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT