ಪೊಲೀಸ್ ಬಾತ್ಮೀದಾರನ ಹತ್ಯೆ: ಬಂಧನ

ಸೋಮವಾರ, ಮೇ 27, 2019
33 °C

ಪೊಲೀಸ್ ಬಾತ್ಮೀದಾರನ ಹತ್ಯೆ: ಬಂಧನ

Published:
Updated:

ಬೆಂಗಳೂರು: ಅಶೋಕನಗರದ ಬಿ–ಸ್ಟ್ರೀಟ್‌ನಲ್ಲಿ ಸೆ.30ರಂದು ನಡೆದಿದ್ದ ಪೊಲೀಸ್ ಮಾಹಿತಿದಾರ ಹರೀಶ್‌ಕುಮಾರ್ (32) ಕೊಲೆ ಪ್ರಕರಣ ಸಂಬಂಧ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ವೆಂಕಟೇಶ್, ವಿಜಯ್‌ ಅಲಿಯಾಸ್ ಕರಿಯ ವಿಜಿ, ಜೇಮ್ಸ್‌ ರಾಜ್, ಜೆರಾಲ್ಡ್ ಆರೋಗ್ಯರಾಜ್, ವಿಜಯ್ ಅಲಿಯಾಸ್ ಕೋಟಾಂಗುಚ್ಚಿ, ವಿಕ್ರಮ್ ಹಾಗೂ ಕಿರಣ್ ಎಂಬುವರನ್ನು ಬಂಧಿಸಿದ್ದೇವೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿವಿಲ್ ಗುತ್ತಿಗೆದಾರ

ರಾಗಿದ್ದ ಹರೀಶ್, ಕುಟುಂಬ ಸದಸ್ಯರ ಜತೆ ಬಿ–ಸ್ಟ್ರೀಟ್‌ನಲ್ಲಿ ನೆಲೆಸಿದ್ದರು. ಜೂಜಾಟ, ಡ್ರಗ್ಸ್ ಮಾರಾಟ ಸೇರಿದಂತೆ ಸ್ಥಳೀಯವಾಗಿ ನಡೆಯುವ ದಂಧೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುವ ಬಾತ್ಮೀದಾರರಾಗಿಯೂ ಕೆಲಸ ಮಾಡುತ್ತಿದ್ದರು. ಈ ಮೂಲಕ ಕೆಲ ಸ್ಥಳೀಯ ಪುಂಡರ ಬಂಧನಕ್ಕೂ ಕಾರಣರಾಗಿದ್ದರು.

ತಮ್ಮ ಅಕ್ರಮಗಳನ್ನು ಪೊಲೀಸರಿಗೆ ತಿಳಿಸುತ್ತಿದ್ದ ಹರೀಶ್ ವಿರುದ್ಧ ಕುಪಿತಗೊಂಡಿದ್ದ ಆರೋಪಿಗಳು, ಅವರ ಜತೆ ಹಿಂದೆಯೂ ಎರಡು ಸಲ ಗಲಾಟೆ ಮಾಡಿದ್ದರು. ಸೆ.30ರ ರಾತ್ರಿ 1 ಗಂಟೆ ಸುಮಾರಿಗೆ ಬಿ–ಸ್ಟ್ರೀಟ್‌ನಲ್ಲಿ ದಸರಾ ಮೆರವಣಿಗೆ ನಡೆಯುತ್ತಿದ್ದಾಗ ಬೇಕೆಂದೇ ಜಗಳ ಪ್ರಾರಂಭಿಸಿ ಅವರನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹರೀಶ್ ಹಾಗೂ ಕುಟುಂಬ ಸದಸ್ಯರು ಮನೆ ಬಳಿ ನಿಂತು ಮೆರವಣಿಗೆ ನೋಡುತ್ತಿದ್ದರು. ಈ ವೇಳೆ ಪಾನಮತ್ತರಾಗಿ ಅಲ್ಲಿಗೆ ಬಂದ ಜೇಮ್ಸ್ ಹಾಗೂ ಜೆರಾಲ್ಡ್, ಮನೆ ಕಾಂಪೌಂಡ್ ಮೇಲೆ ಕುಳಿತು ಸಿಗರೇಟ್ ಸೇದಲು

ಪ್ರಾರಂಭಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಹರೀಶ್, ಕೆಳಗಿಳಿಯುವಂತೆ ಗದರಿದ್ದರು. ಆಗ ಅಲ್ಲಿಂದ ಹೊರಟು ಹೋಗಿದ್ದ ಅವರಿಬ್ಬರೂ, ಸ್ವಲ್ಪ ಸಮಯದಲ್ಲೇ ಸಹಚರರನ್ನು ಕರೆದುಕೊಂಡು ಮಾರಕಾಸ್ತ್ರಗಳೊಂದಿಗೆ ಮನೆ ಹತ್ತಿರ ಬಂದು ಹತ್ಯೆ ಮಾಡಿದ್ದರು.

ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆ

‘ಹಂತಕರು ಹರೀಶ್ ಅವರನ್ನು ಹತ್ಯೆಗೈದ ದೃಶ್ಯವು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೃತರ ಅಣ್ಣ ಜಗದೀಶ್ ಅವರೂ ಆರೋಪಿಗಳನ್ನು ಗುರುತಿಸಿದರು. ಈ ಸುಳಿವುಗಳನ್ನು ಆಧರಿಸಿ ಏಳು ಮಂದಿಯನ್ನು ಬಂಧಿಸಿದ್ದೇವೆ. ಮದ್ಯ ಹಾಗೂ ಮಾದಕ ವಸ್ತುವಿನ ಅಮಲಿನಲ್ಲಿ ಕೃತ್ಯ ಎಸಗಿದ್ದಾಗಿ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry