ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಆಯೋಗ ಮಸೂದೆ ಕೈಬಿಡಲು ಒತ್ತಾಯ

Last Updated 2 ಅಕ್ಟೋಬರ್ 2017, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಕೈಬಿಡಬೇಕು’ ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಸದಸ್ಯರು ನಗರದಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಚಾಮರಾಜಪೇಟೆಯಲ್ಲಿರುವ ಘಟಕದ ಕಚೇರಿಯಲ್ಲಿ ಬೆಳಿಗ್ಗೆ 6 ಗಂಟೆಗೆ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸತ್ಯಾಗ್ರಹ ಆರಂಭಿಸಿದರು.

ಘಟಕದ ಕಾರ್ಯದರ್ಶಿ ಡಾ. ಬಿ. ವೀರಣ್ಣ, ‘ಭಾರತೀಯ ವೈದ್ಯಕೀಯ ಪರಿಷತ್ತನ್ನು (ಎಂ.ಸಿ.ಐ) ರದ್ದುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರ ಬದಲು ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುತ್ತಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು. ಪರಿಷತ್ತನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ವೈದ್ಯರಿಗೆ ಸಂಬಂಧಪಟ್ಟ  ಕಾನೂನುಗಳ ಕೆಲ ಅಂಶಗಳು ಅವೈಜ್ಞಾನಿಕವಾಗಿವೆ. ಅವುಗಳನ್ನು ತಿದ್ದುಪಡಿ ಮಾಡಬೇಕು. ವೈದ್ಯರ ಸಣ್ಣ ತಪ್ಪುಗಳಿಗೆ ಗಂಭೀರ ಶಿಕ್ಷೆ ನೀಡುವುದು ಸರಿಯಲ್ಲ. ಪ್ರಸವಪೂರ್ವ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಮಾತ್ರ ಕಠಿಣ ಶಿಕ್ಷೆ ವಿಧಿಸಬೇಕು’ ಎಂದರು.

‘ದೇಶದಾದ್ಯಂತ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿವೆ. ಅದರ ತಡೆಗೆ ರಾಜ್ಯದಲ್ಲಿ ರೂಪಿಸಿರುವ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ಕಾಯ್ದೆಯನ್ನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ಘಟಕದ ಅಧ್ಯಕ್ಷ ಡಾ.ರಾಜಶೇಖರ್‌ ಬಳ್ಳಾರಿ ಮಾತನಾಡಿ, ‘ಗ್ರಾಹಕ ರಕ್ಷಣಾ ಕಾನೂನಿನಡಿ ವೈದ್ಯರು ನೀಡಬೇಕಾದ ಪರಿಹಾರ ಧನಕ್ಕೆ ಮಿತಿಯನ್ನು ನಿಗದಿಪಡಿಸಬೇಕು. ದಂಡ ವಿಧಿಸುವಾಗ ಪ್ರತಿಯೊಬ್ಬರಿಗೂ ಒಂದೇ ಮಾನದಂಡ ಇರಬೇಕು. ಆಯುರ್ವೇದ ವೈದ್ಯರು ಅಲೋಪಥಿ ಔಷಧಿ ನೀಡುವುದಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ರೋಗಿಗಳಿಗೆ ತೊಂದರೆಯಾಗಿಲ್ಲ: ನಗರದ ಹಲವು ಆಸ್ಪತ್ರೆಯ ವೈದ್ಯರ ಪ್ರತಿನಿಧಿಗಳಷ್ಟೆ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಇದರಿಂದ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.

‘ನಗರದ ವಿಕ್ಟೊರಿಯಾ, ಬೌರಿಂಗ್‌ ಸೇರಿ ರಾಜ್ಯದ ಎಲ್ಲ ಆಸ್ಪತ್ರೆಯಲ್ಲಿ ಎಂದಿನಂತೆ ವೈದ್ಯರು ಕೆಲಸ ಮಾಡಿದ್ದಾರೆ. ಕೆಲಸ ಮುಗಿಸಿಯೇ ಕೆಲ ವೈದ್ಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಒಳ ಹಾಗೂ ಹೊರ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ದೊರಕಿದ್ದು, ಎಲ್ಲಿಯೂ ತೊಂದರೆಯಾಗಿಲ್ಲ’ ಎಂದು ಡಾ. ವೀರಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT