ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ನುಗ್ಗಿದ ನೀರು, ಸೇತುವೆಗಳು ಜಲಾವೃತ

ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ; ತತ್ತರಿಸಿದ ರೈತರು; ಕುಸಿದ ಗೋಡೆ
Last Updated 3 ಅಕ್ಟೋಬರ್ 2017, 6:02 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಕೆಲವೆಡೆ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದರೆ, ಇನ್ನೊಂದಡೆ ಮನೆಗಳಿಗೆ ನೀರು ನುಗ್ಗಿದೆ. ಕೆಲ ಸೇತುವೆಗಳು ಜಲಾವೃತಗೊಂಡಿವೆ. ಸಂಚಾರ ಅಸ್ತವ್ಯವಸ್ತವಾಗಿದ್ದು, ಜನ ಪರದಾಡುವಂತಾಗಿದೆ.

ಮಳೆ ಅಬ್ಬರಕ್ಕೆ ಚರಂಡಿಗಳು ತುಂಬಿ ಹರಿದಿದ್ದರಿಂದ, ನಗರದ ರಸ್ತೆಗಳು ಮಳೆ ನೀರಿನಿಂದ ಆವೃತ್ತವಾದವು.ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಕೆಲ ವಾಹನಗಳು ಮಳೆಗೆ ಕೆಟ್ಟು ನಿಂತಿದ್ದರಿಂದ, ಚಾಲಕರು ಪರಿಪಾಟಲು ಅನುಭವಿಸಿದರು.

ಇಲ್ಲಿನ ರೂಪನಗುಡಿ ರಸ್ತೆಯ ರಾಜೋತ್ಸವ ನಗರದಲ್ಲಿನ ಅಮೀನಾಬಿ ಎಂಬುವರರ ಮನೆ ಮಳೆಯ ಅಬ್ಬರಕ್ಕೆ ಭಾನುವಾರ ಮುಂಜಾನೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಮನೆ ಬೀಳುವ ಶಬ್ದ ಕೇಳುತ್ತಲೇ ಮನೆಯೊಳಗಿದ್ದವರೆಲ್ಲ ಹೊರಗೆ ಓಡಿ ಬಂದಿದ್ದಾರೆ.

ತಾಳೂರು ರಸ್ತೆ ಅಂಬೇಡ್ಕರ ನಗರದ ಸುಮಾರು ಹತ್ತು ಮನೆಗಳಿಗೆ ನೀರು ನುಗ್ಗಿವೆ. ಜನರು ನೀರನ್ನು ಹೊರಹಾಕಲು ಹರಸಾಹಸಪಟ್ಟರು. ಮಲಗುವುದನ್ನು ಬಿಟ್ಟು ಮಧ್ಯರಾತ್ರಿಯವರೆಗೆ ನೀರು ಹೊರ ಹಾಕಬೇಕಾಯಿತು. ಜಿಲ್ಲಾ ಕ್ರೀಡಾಂಗಣ ಹಾಗೂ ಸತ್ಯನಾರಾಯಣಪೇಟೆಯ ಕೆಲ ಸೇತುವೆ ರಸ್ತೆಗಳು ಜಲಾವೃತಗೊಂಡಿದ್ದವು.

ತಗ್ಗು ಈ ಪ್ರದೇಶದಲ್ಲಿರುವ ನಗರದ ಕೆಲ ರಸ್ತೆಗಳು ಮಳೆ ನೀರಿನಿಂದ ತುಂಬಿ ಹಳ್ಳದಂತಾಗುತ್ತವೆ. ಈ ವೇಳೆ ವಾಹನಗಳ ಸಂಚಾರವಿರಲಿ, ಜನರ ಓಡಾಟವೂ ಕಷ್ಟವಾಗುತ್ತದೆ. ಚರಂಡಿಗಳು ಕಟ್ಟಿಕೊಳ್ಳುವುದರಿಂದ, ನೀರು ಹರಿದು ಹೋಗಲು ಸಾಧ್ಯವಾಗದೆ ಗಂಟೆಗಟ್ಟಲೆ ಹಾಗೆಯೇ ಇರುತ್ತದೆ. ಹಲವು ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಸತ್ಯನಾರಾಯಣ ಪೇಟೆಯ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

ಒಂದನೇ ವಾರ್ಡ್‌ನ ಹರಿಶ್ಚಂದ್ರ ನಗರದಲ್ಲಿ ಕರಣ್ ಸಿಂಗ್, ಕುಲ್‌ದೀಪ್‌ ಸಿಂಗ್ ಕವಿತಾ ಸಿಂಗ್‌ ಎಂಬುವವರ ಮನೆಗೆ ಮಳೆ ನೀರು ನುಗ್ಗಿದೆ. ಕನಕದುರ್ಗಮ್ಮ ದೇವಸ್ಥಾನದ ಬಳಿಯ ಇರುವ ಸಂಯುಕ್ತ ಪ್ರೌಢಶಾಲೆಯ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಕೆರೆಯಂತಾಗಿರುವ ದೃಶ್ಯ ಕಂಡುಬಂತು.

ತೋಟಕ್ಕೆ ನುಗ್ಗಿದ ನೀರು:

ತಾಲ್ಲೂಕಿನ ಡಿ.ನಾಗೇನಹಳ್ಳಿಯ ಸಪೋಟಾ ಹೊಲದಲ್ಲಿ ಮೂರು ಅಡಿಯಷ್ಟು ಮಳೆ ನೀರು ನಿಂತು ಕೊಂಡಿವೆ. ಸುಮಾರು 25 ಎಕರೆ ಹೊಲದಲ್ಲಿ ನೀರು ಸಂಗ್ರಹಣೆವಾಗಿದೆ.

ತೋಟಗಳಲ್ಲಿ ಮಳೆ ನೀರು ನಿಂತಿದ್ದರಿಂದ, ರೈತರು ಇದೀಗ ಕೊಳೆರೋಗದ ಭೀತಿಯಲ್ಲಿದ್ದಾರೆ. ಯಂತ್ರಗಳ ನೆರವಿನಿಂದ ನೀರು ಹೊರಹಾಕಲು ಪ್ರಯಾಸಪಡಬೇಕಾದ ಸ್ಥಿತಿ ಎದುರಾಗಿದೆ. ಫಸಲು ಕೈ ಸೇರುವ ಹಂತದಲ್ಲಿ, ಮಳೆ ನೀರು ಮಾಡಿದ ಆವಾಂತರಕ್ಕೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಮಳೆ ವರದಿ:
ಜಿಲ್ಲೆಯ ಬಳ್ಳಾರಿ ತಾಲ್ಲೂಕಿನಲ್ಲ 38.4 ಮಿ.ಮೀ., ಹೂವಿನ ಹಡಗಲಿ 42.2 ಮಿ.ಮೀ., ಹಗರಿಬೊಮ್ಮನಹಳ್ಳಿ 7 ಮಿ.ಮೀ., ಹೊಸಪೇಟೆ 2.8 ಮಿ.ಮೀ., ಕೂಡ್ಲಿಗಿ 6.8 ಮಿ.ಮೀ. ಹಾಗೂ ಸಂಡೂರಿನಲ್ಲಿ 18.4 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT