ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ, ಮದ್ಯದೊಂದಿಗೆ ಗಾಂಧಿ ಜಯಂತಿ!

ವಿನೂತನವಾಗಿ ಜನಜಾಗೃತಿ ಮೂಡಿಸಿದ ಕರವೇ ಕಾರ್ಯಕರ್ತರು
Last Updated 3 ಅಕ್ಟೋಬರ್ 2017, 6:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೋಳಿ ಮತ್ತು ಮದ್ಯದ ಪಾಕೇಟ್ ಹಿಡಿದುಕೊಂಡು ‘ನೋಟಿಗಾಗಿ ವೋಟು ಮಾರಬೇಡಿ’ ಎಂಬ ಜನಜಾಗೃತಿ ಕಾರ್ಯಕ್ರಮದ ಮೂಲಕ ವಿನೂತನವಾಗಿ ಗಾಂಧಿ ಜಯಂತಿ ಆಚರಿಸಿದರು. ಈ ವೇಳೆ ಕಾರ್ಯಕರ್ತರು ಮೆಣಸಿನಕಾಯಿ ಮತ್ತು ಬಾಳೆಹಣ್ಣುಗಳನ್ನು ವಿತರಿಸುವ ಮೂಲಕ ಜನರ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಕರವೇ ರಾಜ್ಯ ಘಟಕದ ಅಧ್ಯಕ್ಷ ಅಗಲಗುರ್ಕಿ ಚಲಪತಿ, ‘ಚುನಾವಣೆಯಲ್ಲಿ ಜನರು ಮದ್ಯ, ಬಾಡೂಟ ಆಮಿಷಕ್ಕೆ ಒಳಗಾಗುವ ಜತೆಗೆ ನೋಟು ಪಡೆದು ಭ್ರಷ್ಟರನ್ನು ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ದೇಶ ಹಾಳಾಗುತ್ತಿದೆ. ಆದ್ದರಿಂದ ಇವತ್ತು ನಾವು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗಾಂಧೀಜಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕಿದೆ’ ಎಂದು ಹೇಳಿದರು.

‘ವೋಟಿಗಾಗಿ ನೋಟು ತೆಗೆದುಕೊಂಡರೆ ಮೆಣಸಿನಕಾಯಿ ತಿಂದಾಗ ಬಾಯಿ ಉರಿಯುವ ರೀತಿ ಐದು ವರ್ಷಗಳ ಕಾಲ ನಾವು ಒದ್ದಾಡಬೇಕಾಗುತ್ತದೆ. ಹಣ ಪಡೆಯದೆ ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ಅದರಿಂದ ನಮ್ಮ ಸಮಾಜ ಬಾಳೆ ಹಣ್ಣು ತಿಂದಷ್ಟು ಸಿಹಿಯಾಗಿರುತ್ತದೆ. ಅದಕ್ಕಾಗಿ ನಾವು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು. ಕರವೇ ಕಾರ್ಯಕರ್ತರಾದ ನಂದಿ ಪುರುಷೋತ್ತಮ್, ದೇವರಾಜ್, ನಯಾಜ್‌, ಮುಬಾರಕ್‌, ಶಶಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT