ದಸಂಸದಿಂದ ರಾಜ್ಯದಾದ್ಯಂತ ಪ್ರತಿಭಟನೆ 6ಕ್ಕೆ

ಶುಕ್ರವಾರ, ಮೇ 24, 2019
26 °C

ದಸಂಸದಿಂದ ರಾಜ್ಯದಾದ್ಯಂತ ಪ್ರತಿಭಟನೆ 6ಕ್ಕೆ

Published:
Updated:

ದಾವಣಗೆರೆ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೈದ ಹಂತಕರ ಶೀಘ್ರ ಬಂಧಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಅ.6ರಂದು ಬೆಳಿಗ್ಗೆ 11ಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ಡಾ.ಎನ್‌.ಮೂರ್ತಿ ತಿಳಿಸಿದರು.

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾನವತೆಯ ಕಗ್ಗೊಲೆಯಾಗಿದೆ. ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ, ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ನೆನಪು ಮಾಸುವ ಮುನ್ನವೇ ಗೌರಿ ಲಂಕೇಶ್‌ ಹತ್ಯೆಯಾಗಿದೆ. ಅವರ ಹತ್ಯೆ ನಡೆದು ತಿಂಗಳಾಗುತ್ತಾ ಬಂದರೂ ಇನ್ನೂ ಅಪರಾಧಿಗಳನ್ನು ಬಂಧಿಸಲು ಆಗಿಲ್ಲ. ಇದು ಸರ್ಕಾರಕ್ಕೆ ನಾಚಿಗೇಡಿನ ಸಂಗತಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅಸಹಿಷ್ಣುತೆ ನಾಡಿನಲ್ಲಿ ತಾಂಡವವಾಡುತ್ತಿದೆ. ಮೌಢ್ಯಾಚರಣೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ನಿರ್ಮೂಲನೆ ವಿರುದ್ಧ ಹೋರಾಡುವ ಪ್ರಗತಿಪರ, ದಲಿತ ಚಿಂತಕರು, ವಿಚಾರವಾದಿಗಳನ್ನು ಗುಂಡಿಕ್ಕಿ ಕೊಲ್ಲುವಂತಹ ಭಯೋತ್ಪಾದನೆ ದೇಶದಲ್ಲಿ ನಡೆಯುತ್ತಿದೆ ಎಂದರು.

ಗೌರಿ ಲಂಕೇಶ್‌ ಹತ್ಯೆ ಮಾಡಿದವರನ್ನು ಕಂಡು ಹಿಡಿಯುವಲ್ಲಿ ವಿಶೇಷ ತನಿಖಾ ತಂಡಗಳು ವಿಫಲವಾಗಿವೆ. ರಾಜಕಾರಣಿಗಳು ‌ಚುನಾವಣಾ ಸಿದ್ಧತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ ವಿನಾ ಆರೋಪಿಗಳನ್ನು ಬಂಧಿಸುವತ್ತ ಚಿಂತಿಸುತ್ತಿಲ್ಲ. ಈ ಕೊಲೆ ಹಿಂದೆ ರಾಜಕೀಯ ಕುತಂತ್ರವಿದೆ. ಈ ನಿಟ್ಟಿನಲ್ಲಿ ಅ.5ರಂದು ದೆಹಲಿಯಲ್ಲಿ ಹಾಗೂ 6ರಂದು ರಾಜ್ಯದಾದ್ಯಂತ ಎಲ್ಲಾ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಏಳೆಂಟು ವರ್ಷಗಳಿಂದಲೂ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಿಲ್ಲ. ವರದಿ ಜಾರಿಗೆ ಸಚಿವ ಸಂಪುಟದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದಲೇ ಅಡ್ಡಿ ಆತಂಕಗಳು ಹೆಚ್ಚಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಿಜವಾಗಿಯೂ ದಲಿತರ ಪರವಾಗಿದ್ದರೆ ಕೂಡಲೇ ಮೀಸಲಾತಿ ವರ್ಗೀಕರಣ ಮಾಡುವ ಮೂಲಕ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜೆ.ನಿಂಗಯ್ಯ, ಶಂಭುಲಿಂಗಪ್ಪ, ಆಸೀಫ್‌, ಪ್ರಕಾಶ್‌, ಮಲ್ಲೇಶ್‌, ಶ್ರೀನಿವಾಸ್‌, ಯಲ್ಲಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry