ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಕಂಬದ ಮಠದಲ್ಲಿ ₨5 ಕೋಟಿ ವೆಚ್ಚದ ಬಸವ ಭವನ

ಹೊಳಲ್ಕೆರೆ: ಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮ, ವಿವಿಧ ಮಠಾಧೀಶರು ಉಪಸ್ಥಿತಿ
Last Updated 3 ಅಕ್ಟೋಬರ್ 2017, 7:32 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಒಂಟಿಕಂಬದ ಮಠದ ಆವರಣದಲ್ಲಿ  5 ಕೋಟಿ ರೂ ವೆಚ್ಚದಲ್ಲಿ ಬಸವ ಭವನ ನಿರ್ಮಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಪಟ್ಟಣದ ಒಂಟಿಕಂಬದ ಮಠದಲ್ಲಿ ಸೋಮವಾರ ನಡೆದ ಮಲ್ಲಿಕಾರ್ಜುನ ಮರುಘ ರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನಿಂದಲೂ ಇಲ್ಲಿನ ಮಠದ ಆವರಣದಲ್ಲಿ ಬಸವ ಭವನ ನಿರ್ಮಿಸುವ ಬಯಕೆ ಇತ್ತು. ಶಿವಮೂರ್ತಿ ಮುರುಘಾ ಶರಣರೂ ಈ ಬಗ್ಗೆ ಆಸಕ್ತಿ ಹೊಂದಿದ್ದರು. ಅವರ ಅಭಿಲಾಷೆಯಂತೆ ಈಗ ಸರ್ಕಾರದಿಂದ ₨4 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಉಳಿದ ಒಂದು ಕೋಟಿ ಅನುದಾನವನ್ನೂ ಕೊಡಿಸುತ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದಲೇ ಕಟ್ಟಡ ನಿರ್ಮಿಸಿ ಮಠದ ಸುಪರ್ದಿಗೆ ನೀಡಲಾಗುವುದು. ಇಲ್ಲಿನ ಮಠ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರು ಉಳಿದುಕೊಳ್ಳಲು ₨ 50 ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು ಎಂದರು.

‘ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಮಠಗಳು ಮಾಡುತ್ತಿವೆ. ಅನ್ನ, ಅಕ್ಷರ ದಾಸೋಹ ನೀಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ. ನಾನು ದೇವರನ್ನು ನಂಬುವುದಿಲ್ಲ. ನನಗೆ ಮಠಾಧೀಶರೇ ದೇವರು, ಮಠಗಳೇ ದೇವಾಲಯ ಇದ್ದಂತೆ. ಮಲ್ಲಿಕಾರ್ಜುನ ಸ್ವಾಮೀಜಿ ಅವರು ದಾವಣಗೆರೆಯ ವಿರಕ್ತ ಮಠದಲ್ಲಿದ್ದಾಗ ನಾನು ಮೊದಲ ಬಾರಿ ಮಠಕ್ಕೆ ಹೋಗಿದ್ದೆ. ಆಗ ನಗರಸಭೆ ಸದಸ್ಯನಾಗಿದ್ದು, ಸ್ವಾಮೀಜಿ ನನ್ನನ್ನು ಸನ್ಮಾನಿಸಿದ್ದರು. ಮುಂದೆ ನಿನಗೆ ಉತ್ತಮ ಭವಿಷ್ಯ ಇದೆ ಎಂದು ಹರಸಿದ್ದರು. ಅವರ ಹಾರೈಕೆಯಂತೆ ಇಂದು ನಾನು ಅವರು ಲಿಂಗೈಕ್ಯರಾದ ಜಾಗದಿಂದಲೇ ಶಾಸಕನಾಗಿ, ಸಚಿವನಾಗಿದ್ದೇನೆ’ ಎಂದು ಆಂಜನೇಯ ಹೇಳಿದರು.

‘ಹಿಂದೊಮ್ಮೆ ನನಗೂ ಶಿವಮೂರ್ತಿ ಶರಣರಿಗೂ ವಿಷಯಾಧಾರಿತ ವೈಮನಸ್ಸು ಉಂಟಾಗಿತ್ತು. ಅದಕ್ಕೆ ಅಂದಿನ ಪರಿಸ್ಥಿತಿಗಳು ಕಾರಣ ಇರಬಹುದು. ಆದರೆ ಮುಂದೆ ನಾನೇ ಮಠಕ್ಕೆ ಹೋಗಿ ಸ್ವಾಮೀಜಿ ಅವರ ಆಶೀರ್ವಾದ ಪಡೆದೆ. ನನಗೆ ಶಿವಮೂರ್ತಿ ಶರಣ ಬಗ್ಗೆ ಅಪಾರ ಗೌರವ ಇದೆ. ಮುಂದೆಯೂ ಇರುತ್ತದೆ’ ಎಂದು ಸಚಿವರು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘1994ರಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಇಲ್ಲಿ ಐಕ್ಯರಾದರು. ಅವರ ದೇಹ ಸಾವನ್ನಪ್ಪಿರಬಹುದು. ಆದರೆ ಅವರ ಚಿಂತನೆಗಳು, ವಿದ್ವತ್ತು, ಸಮಾಜಮುಖಿ ಕಾರ್ಯಗಳು ಇಂದಿಗೂ ಜೀವಂತವಾಗಿವೆ. ಅವರ ಜೀವನದ ಕೊನೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದಾಗ ನನ್ನ ಕೈ ಹಿಡಿದು ‘ಸಂಸ್ಥಾನ, ಸಂಸ್ಥಾನ’ ಎಂದರು. ಆಗ ನಾನು ‘ಗುರುಗಳೇ ನೀವು ನಿಶ್ಚಿಂತೆಯಾಗಿರಿ. ನಿಮ್ಮ ಅಭಿಲಾಷೆಗಿಂತ ನೂರು ಪಟ್ಟು ಎತ್ತರಕ್ಕೆ ಮಠವನ್ನು ಕೊಂಡೊಯ್ಯುತ್ತೇನೆ’ ಎಂದು ವಚನ ನೀಡಿದೆ. ಅದರಂತೆ ಮಠ ಮುನ್ನಡೆಯುತ್ತಿದೆ’ ಎಂದರು.

‘ಇಂದಿನ ಶಿಷ್ಯರೇ ಮುಂದಿನ ಗುರುಗಳಾಗುತ್ತಾರೆ. ಗುರುವಿನ ಆಶೀರ್ವಾದದಿಂದ ಮುಂದೆ ನಾವೇ ಗುರುವಾಗಿ ಸಮಾಜವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಪಡೆಯುತ್ತೇವೆ. ಸಮಾಜದಲ್ಲಿ ಅನ್ಯರಿಗೆ ನೋವು ಕೊಡುವ, ನೋವಲ್ಲೂ ನಗುವ, ಅನ್ಯರ ನೋವು ನಿವಾರಿಸುವ ಮೂರು ವರ್ಗಗಳಿರುತ್ತವೆ. ಮಠಗಳು ಜನರ ನೋವನ್ನು ತಣಿಸುವ ಕಾಯಕ ಮಾಡುತ್ತವೆ. ಗುರು ಪರಂಪರೆ ಸಮಾಜದ ನೋವು ನಿವಾರಿಸುವ ಭರವಸೆಯಿಂದ ಮುನ್ನಡೆಯುತ್ತಿದೆ’ ಎಂದು ಶ್ರೀಗಳು ಹೇಳಿದರು.
ಬೆಂಗಳೂರಿನ ಕಡಬ ಶ್ರೀನಿವಾಸ್ ಅವರಿಂದ ಜಾದೂ ಪ್ರದರ್ಶನ ನಡೆಯಿತು.

ಮೈಸೂರಿನ ಹೊಸಮಠದ ಚಿದಾನಂದ ಸ್ವಾಮೀಜಿ, ಬೆಟ್ಟದ ಹಳ್ಳಿಯ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಮಾಜಿ ಶಾಸಕರಾದ ಎಂ.ಚಂದ್ರಪ್ಪ, ಎ.ವಿ.ಉಮಾಪತಿ, ಪಿ.ರಮೇಶ್, ಎಂ.ಬಿ.ತಿಪ್ಪೇರುದ್ರಪ್ಪ, ಟಿ.ಎಚ್‌.ಬಸವರಾಜಪ್ಪ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜ್, ಮುರುಗೇಶ್, ಚಿತ್ರದುರ್ಗ ನಗರ ಸಭೆ ಮಾಜಿ ಅಧ್ಯಕ್ಷ ಕಾಂತರಾಜ್, ಹನುಮಲಿ ಷಣ್ಮುಖಪ್ಪ, ಎಲ್.ಬಿ.ರಾಜಶೇಖರ್, ಶರಣ ಸಂಸ್ಕೃತಿ ಉತ್ಸವ ಕಾರ್ಯಾಧ್ಯಕ್ಷ ಶಂಕರ ಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. .

***
ಪೂಜೆಗಿಂತ ಜನಸೇವೆ ಮುಖ್ಯ:ಸಚಿವರ ಸ್ಪಷ್ಟನೆ

ವಿಧಾನಸೌಧ ಸರ್ವ ಧರ್ಮೀಯರ ಸೌಧ, ಅಲ್ಲಿಗೆ ಸಮಸ್ಯೆ ಹೊತ್ತು ಬರುವ ಜನರ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕೇ ವಿನಃ ಪೂಜೆ ಮಾಡುವುದರಿಂದ ಅಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಒಂಟಿಕಂಬದ ಮಠದಲ್ಲಿ ನಡೆದ ಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ‘ವಿಧಾನ ಸೌಧದಲ್ಲಿ ಪೂಜೆ ಮಾಡಬಾರದು’ ಎಂಬ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದರು.

‘ನಾನು ಯಾರನ್ನೂ ಅಪಹಾಸ್ಯ ಮಾಡುವ ಹೇಳಿಕೆ ನೀಡಿಲ್ಲ. ನನಗೆ ಎಲ್ಲಾ ಧರ್ಮದ ಜನರ ಬಗ್ಗೆಯೂ ನನಗೆ ಗೌರವ ಇದೆ. ನಾನು ಮನದಲ್ಲೇ ದೇವರನ್ನು ಕಾಣುತ್ತೇನೆ. ನಾನು ಬಸವಣ್ಣನ ಅನುಯಾಯಿ. ಬಸವ ತತ್ವದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ನಾನು ಸಚಿವನಾದಾಗ ಬಸವಣ್ಣನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೆ. ವಿಧಾನಸೌಧದ ನನ್ನ ಕಚೇರಿಯಲ್ಲೂ ಬಸವಣ್ಣ ಹಾಗೂ ಮರುಳಸಿದ್ದರ ಭಾವಚಿತ್ರಗಳನ್ನಿಟ್ಟು, ಅವುಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರವೇಶ ಮಾಡಿದ್ದೆ. ಕಾಯಕವೇ ಕೈಲಾಸ ಎಂಬ ಅವರ ಮಾತಿನಂತೆ ನಡೆಯುತ್ತಿದ್ದೇನೆ’ ಎಂದರು.
ವಿಧಾನಸೌಧದ ಮೇಲೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಯಲಾಗಿದೆ. ಇದರಂತೆ ಪೂಜೆಗಿಂತ ಜನಸೇವೆ ಮುಖ್ಯ ಎಂಬ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಆಕ್ಷೇಪ ಮಾಡಿರುವುದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT