‘ಬಡವರ ಸ್ಥಾನದಲ್ಲಿ ನಿಂತು ಯೋಚಿಸಿ’

ಗುರುವಾರ , ಜೂನ್ 20, 2019
26 °C
ಗರ್ಭಿಣಿಯರಿಗೆ ಉಡಿ ತುಂಬಿ ‘ಮಾತೃಪೂರ್ಣ’ ಯೋಜನೆಗೆ ಸಚಿವ ವಿನಯ ಕುಲಕರ್ಣಿ ಚಾಲನೆ

‘ಬಡವರ ಸ್ಥಾನದಲ್ಲಿ ನಿಂತು ಯೋಚಿಸಿ’

Published:
Updated:

ಧಾರವಾಡ: ‘ಬಡವರ ಹಿತದೃಷ್ಟಿಯಿಂದ ಜಾರಿಯಾಗುವ ಯೋಜನೆಗಳ ಕುರಿತು ಶ್ರೀಮಂತ ವರ್ಗ ಸದಾ ಕಟಕಿಯಾಡುತ್ತದೆ. ಆದರೆ, ಆ ಬಡವರ ಸ್ಥಾನದಲ್ಲಿ ನಿಂತು  ಆಲೋಚಿಸಿದಾಗ ಮಾತ್ರ ಪರಿಸ್ಥಿತಿಯ ಅರಿವಾಗುತ್ತದೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು.

ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಜರುಗಿದ ಮಾತೃಪೂರ್ಣ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

‘ಅನ್ನ ಭಾಗ್ಯ ಯೋಜನೆಯಿಂದಾಗಿ ದುಡಿಮೆಗಾಗಿ ಗುಳೇ ಹೋಗುವವರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಮೊದಲು ನೀಡುತ್ತಿದ್ದ 5ಕೆ.ಜಿ. ಅಕ್ಕಿಗೆ ಈಗ ಇನ್ನೂ ಎರಡು ಕಿಲೋ ಸೇರಿಸಿ ಒಟ್ಟು 7ಕೆ.ಜಿ. ನೀಡಲಾಗುತ್ತಿದೆ. ಅದರಂತೆಯೇ ಈಗ ಜಾರಿಗೆ ಬಂದಿರುವ ಮಾತೃಪೂರ್ಣ ಯೋಜನೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾಕಷ್ಟು ಗರ್ಭಿಣಿ ಹಾಗೂ ಬಾಣಂತಿಯರಿಗೆ ನೆರವಾಗುವುದರ ಜತೆಗೆ ನವಜಾತ ಶಿಶುಗಳ ಆರೈಕೆಗೂ ಸಹಕಾರಿಯಾಗಲಿದೆ’ ಎಂದು ಹೇಳಿದರು.

‘ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಯಾರೂ ಹಿಂದೆ ಬೀಳಬಾರದು. ಯೋಜನೆಯ ಆರಂಭದಲ್ಲಿ ಸೌಲಭ್ಯ ಪಡೆಯಲು ಹಿಂಜರಿಕೆ ಇದ್ದೇ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಾತೃಪೂರ್ಣ ಯೋಜನೆಯ ಲಾಭ ಪಡೆದು ಆರೋಗ್ಯವಂತ ಶಿಶು ಹಾಗೂ ತಾಯಂದಿರ ಮೂಲಕ ಸುಭದ್ರ ರಾಷ್ಟ್ರ ಕಟ್ಟುವಲ್ಲಿ ನೆರವಾಗಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ‘ರಾಜ್ಯ ಸರ್ಕಾರ ಅಭಿವೃದ್ಧಿಪರವಾಗಿರುವ ಕಾರಣದಿಂದಾಗಿ ಈ ಹಿಂದೆ ನಿಂತು ಹೋಗಿದ್ದ ಹಲವು ಪಿಂಚಣಿ ಯೋಜನೆಗಳನ್ನು ಮರು ಜಾರಿಗೊಳಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ’ ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಮಾತನಾಡಿ, ‘ಮಾಧ್ಯಮಗಳು ಹಾಗೂ ವಿರೋಧ ಪಕ್ಷದ ಮುಖಂಡರು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡಲು ಕಾಯುತ್ತಿರುತ್ತಾರೆ. ಹೀಗಾಗಿ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯರ್ತೆಯರು ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಅಡುಗೆ ಹಾಗೂ ಸ್ವಚ್ಛತಗೆ ಹೆಚ್ಚಿನ ಮಹತ್ವ ನೀಡಬೇಕು’ ಎಂದರು.

ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಮಾತನಾಡಿ, ‘ಈ ಮೊದಲು ಪೌಷ್ಟಿಕ ಆಹಾರ ಸಿದ್ಧಪಡಿಸಲು ಬೇಕಾದ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆದರೆ, ಹಲವರಿಗೆ ಸಿದ್ಧಪಡಿಸಿಕೊಳ್ಳಲೂ ಹಲವು ತೊಂದರೆಗಳಿದ್ದವು. ಇವುಗಳನ್ನು ಮನಗಂಡ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಎಲ್ಲಾ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ವಾರದಲ್ಲಿ ಆರು ದಿನ ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಸತ್ವಯುತ ಆಹಾರ ನೀಡಲಾಗುತ್ತದೆ’ ಎಂದರು.

ಇದೇ ಸಂದರ್ಭದಲ್ಲಿ 500 ಗರ್ಭಿಣಿಯರ ಉಡಿ ತುಂಬಲಾಯಿತು. ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್‌ ರಾಯಮಾನೆ ಅವರು ಮಹಿಳೆಯರಿಗೆ ಅರಿಶಿಣ, ಕುಂಕುಮ ಹಚ್ಚಿ, ಉಡಿ ತುಂಬಿ ಶುಭಹಾರೈಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry