ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಶ್ರೀಧರ, ಘಟಪ್ರಭಾ
ನನ್ನ ವಯಸ್ಸು 63, ನಾನು ಚಿಲ್ಲರೆ ವ್ಯಾಪಾರ ಮಾಡಿ, ಬ್ಯಾಂಕ್‌ನಲ್ಲಿ ಸ್ವಲ್ಪ ಹಣವಿರಿಸಿ, 1990 ರಲ್ಲಿ ಒಂದು ಗುಂಟೆ ನಿವೇಶನ ಕೊಂಡಿದ್ದೆ. ಈ ನಿವೇಶನ ಮಾರಾಟ ಮಾಡಿದ್ದೇನೆ. ಇದರಿಂದ ₹15 ಲಕ್ಷ ಬಂದಿದೆ. ನಾನು ತೆರಿಗೆ ಸಲ್ಲಿಸಬೇಕೇ, ಸಲ್ಲಿಸುವುದಾದರೆ ಏನು ಮಾಡಬೇಕು?

ಉತ್ತರ: ನೀವು ಮಾರಾಟ ಮಾಡಿದ ನಿವೇಶನದಿಂದ ಬಂದ ಹಣವನ್ನು ಮಾರಾಟ ಮಾಡಿ 6 ತಿಂಗಳೊಳಗೆ ಮೂರು ವರ್ಷಗಳ ಅವಧಿಗೆ ₹ 15 ಲಕ್ಷ NHIA ಅಥವಾ REC ಬಾಂಡ್‌ನಲ್ಲಿ ಇರಿಸಿದರೆ, ಬಂಡವಾಳ ವೃದ್ಧಿ (Capital Gain) ತೆರಿಗೆ ಅನ್ವಯಾಗುವುದಿಲ್ಲ. ಮೂರು ವರ್ಷಗಳ ನಂತರ ಹಾಗೆ ಬಂದಿರುವ ಮೊತ್ತವನ್ನು ನೀವು ಬೇರೆ ಯಾವ ರೀತಿಯಲ್ಲಿಯೂ ಹೂಡಿಕೆ ಮಾಡಬಹುದು. ಒಟ್ಟಿನಲ್ಲಿ ಮುಂದೆ ತೆರಿಗೆ ಭಯವಿರುವುದಿಲ್ಲ. ಈ ಮಾರ್ಗ ನಿಮಗೆ ಬೇಡವಾದಲ್ಲಿ, ಮಾರಾಟ ಮಾಡಿ ಬಂದ ಲಾಭದ ಶೇ 20 ರಷ್ಟು ತೆರಿಗೆ ಸಲ್ಲಿಸುವ ಅವಕಾಶವೂ ಇದೆ.

ಪುಟ್ಟರಾಜಣ್ಣ, ವಿಜಯಪುರ
1. ವಾಹನಗಳಿಗೆ ಪಾವತಿಸುವ ವಾರ್ಷಿಕ ವಿಮೆಯು ವರಮಾನ ತೆರಿಗೆ ಸೆಕ್ಷನ್‌ 80ಸಿ ಅಡಿಯಲ್ಲಿ ರಿಯಾಯ್ತಿ ಇದೆಯೇ. 2. ELSS ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಿ; 3. HUF ಬಗ್ಗೆ ಮಾಹಿತಿ ನೀಡಿರಿ; 4. ಹೆಲ್ತ್ ಇನ್ಶುರನ್ಸ್‌ ಹಾಗೂ ಮೆಡಿಕಲ್‌ ಇನ್ಶುರನ್ಸ್‌ ಇರುವ ವ್ಯತ್ಯಾಸವೇನು. 5. PF,GPF,PPF ಇವುಗಳ ವ್ಯತ್ಯಾಸ ಏನು?

ಉತ್ತರ: ಜೀವವಿಮೆ ಕಂತುಗಳಿಗೆ ಮಾತ್ರ ವರಮಾನ ತೆರಿಗೆ ಸೆಕ್ಷನ್‌ 80ಸಿ ಆಧಾರದ ಮೇಲೆ ವಿನಾಯ್ತಿ ಇದೆ. ವಾಹನಗಳಿಗೆ ಪಾವತಿಸುವ ವಿಮೆಗೆ ಯಾವ ಸೆಕ್ಷನ್‌ನಲ್ಲಿಯೂ ವಿನಾಯ್ತಿ ಇರುವುದಿಲ್ಲ. Equity Linked Savings Scheme (ELSS) ನಲ್ಲಿ ತೊಡಗಿಸುವ ಒಂದು ಅಂಶ, ಜೀವ ವಿಮೆಗೆ ಮೀಸಲಾಗಿಟ್ಟು, ಉಳಿದ ಹಣ ಕಂಪೆನಿ ಷೇರುಗಳಲ್ಲಿ ತೊಡಗಿಸುತ್ತಾರೆ. ಇಲ್ಲಿ ಗರಿಷ್ಠ 3 ವರ್ಷಗಳ ಕಾಲ ಇರಿಸಿ, ಸೆಕ್ಷನ್‌ 80ಸಿ ಆಧಾರದ ಮೇಲೆ ತೆರಿಗೆ ವಿನಾಯತಿ ಪಡೆಯಬಹುದು.

HUF (Hindu Undivided Family) ಅವಿಭಕ್ತ ಕುಟುಂಬದ ಸದಸ್ಯರಿಗೆ ಸಂಬಂಧಿಸಿದಂತೆ, ಇಲ್ಲಿ ಬರುವ ಒಟ್ಟು ಆದಾಯದ ಮೇಲೆ ತೆರಿಗೆ ಸಲ್ಲಿಸಬಹುದು. ಹೆಲ್ತ್ ಹಾಗೂ ಮೆಡಿಕಲ್‌ ಇನ್ಶುರನ್ಸ್‌ ಎರಡೂ ಒಂದೇ ಆಗಿರುತ್ತದೆ. ಇಲ್ಲಿ ಸೆಕ್ಷನ್‌ 80ಡಿ ಆಧಾರದ ಮೇಲೆ ರಿಯಾಯ್ತಿ ಪಡೆಯಬಹುದು. PF-GPE ಎರಡೂ ಒಂದೇ ಆಗಿದ್ದು, ಸರ್ಕಾರಿ ನೌಕರಿಯಲ್ಲಿ GPF (Government Provident Fund) ಹಾಗೂ ಉಳಿದ ಖಾಸಗಿ ನೌಕರಿಯಲ್ಲಿ ಪಿ.ಎಫ್‌. ಎಂತಲೂ ಹೇಳುತ್ತಾರೆ. PPF (Public Provident Fund) ಒಂದು 15 ವರ್ಷಗಳ ಯೋಜನೆ. ಇಲ್ಲಿ ಕನಿಷ್ಠ ₹ 500, ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ತುಂಬಬಹುದು. ಈ ಖಾತೆ ಭಾರತೀಯ ಪ್ರಜೆಗಳು ಪ್ರಾರಂಭಿಸಬಹುದು. ಇಲ್ಲಿ ಬರುವ ಬಡ್ಡಿಗೆ ತೆರಿಗೆ ಇಲ್ಲ. ಸೆಕ್ಷನ್‌ 80ಸಿ ಆಧಾರದ ಮೇಲೂ ತೆರಿಗೆ ವಿನಾಯ್ತಿ ಪಡೆಯಬಹುದು.

ನಾಗರಾಜು, ಹಾಸನ
ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಸದ್ಯ ನಿವೃತ್ತನಾಗಿದ್ದೇನೆ. ನನ್ನ ಮಗಳು 2ನೇ ಪಿಯುಸಿಯಲ್ಲಿ ಓದುತ್ತಿದ್ದಾಳೆ. ನನಗೆ ಸ್ವಂತ ಮನೆ ಇಲ್ಲ.  ನನಗೆ ₹ 14,750 ಪಿಂಚಣಿ ಬರುತ್ತದೆ. ನಿವೃತ್ತಿಯಿಂದ ಬಂದ ಹಣ ಹೇಗೆ ಠೇವಣಿ ಮಾಡಲಿ ಹಾಗೂ ನನಗೆ ಮನೆ ಕಟ್ಟುವ ಆಸೆ ಇದೆ. ನನಗೆ ಗೃಹ ಸಾಲ ದೊರೆಯಬಹುದೇ? ನಾನು ಮುಂದೆ ಏನಾದರೂ ಕೆಲಸ ಮಾಡಬಹುದೆ?

ಉತ್ತರ: ನೀವು ನಿವೃತ್ತಿಯಿಂದ ಪಡೆದ ಮೊತ್ತವನ್ನು ತಿಳಿಸಿಲ್ಲ. ನಿಮಗೆ ನಿವೃತ್ತಿಯಿಂದ ಬರುವ ಪಿಂಚಣಿ ನಿಮ್ಮ ಮನೆ ಖರ್ಚಿಗೆ ಸಾಕಾಗಬಹುದು. ನಿವೃತ್ತಿಯಿಂದ ಬಂದ ಮೊತ್ತವನ್ನು ಬ್ಯಾಂಕಿನಲ್ಲಿ 5 ವರ್ಷಗಳ ಠೇವಣಿಯಲ್ಲಿ ಇರಿಸಿರಿ. ಹೀಗೆ ಠೇವಣಿ ಮಾಡುವಾಗ ಒಮ್ಮೆಲೇ ಬಡ್ಡಿ ಬರುವ ಮರು ಹೂಡಿಕೆ ಠೇವಣಿಯಲ್ಲಿ ಎಲ್ಲಾ ಹಣ ತೊಡಗಿಸಿರಿ. ಒಟ್ಟು ಮೊತ್ತ ವಿಂಗಡಿಸಿ ₹50,000 ಗಳ ಬೇರೆ ಬೇರೆ ಬಾಂಡ್‌ ಪಡೆಯಿರಿ. ಇದರಿಂದ ಮುಂದೆ ನಿಮಗೆ ಏನಾದರೂ ಅಗತ್ಯ ಬಿದ್ದಲ್ಲಿ, ಒಂದು ಬಾಂಡ್‌ ಅವಧಿಗೆ ಮುನ್ನ ಪಡೆಯಲು ಅನುಕೂಲವಾಗುತ್ತದೆ. ಜೊತೆಗೆ ಉಳಿದ ಹಣ ಹಾಗೆಯೇ ಮುಂದುವರಿಸಲು ಅನುಕೂಲವಾಗುತ್ತದೆ.

ನಿಮ್ಮ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಂತ ಮನೆ ಕಟ್ಟುವುದಾಗಲಿ ಸಾಲ ಪಡೆಯುವುದಾಗಲಿ ಸಾಧ್ಯವಾಗಲಾರದು. ಮಗಳ ವಿದ್ಯಾಭ್ಯಾಸ ಮದುವೆ ಕೂಡಾ ನಿಮ್ಮ ಇಂದಿನ ಆದ್ಯತೆಯಾಗಿದೆ. ಮಗಳು ವಿಜ್ಞಾನ (Science) ವಿಷಯ ಓದುತ್ತಿದ್ದರೆ, ಅವಳು ವೃತ್ತಿಪರ ಶಿಕ್ಷಣ ಪಡೆಯುವುದಾದರೆ (BE-MBBS-Etc.) ನಿಮಗೆ ಸರ್ಕಾರದ ಮಾದರಿ ಶಿಕ್ಷಣ ಯೋಜನೆಯಲ್ಲಿ ಬಡ್ಡಿ ಸಬ್ಸಿಡಿಯ (Interest-Subsidy) ಸಾಲ ದೊರೆಯುತ್ತದೆ. ನೀವು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡಿದ್ದರಿಂದ, ಒಳ್ಳೆ ಕಂಪೆನಿಗಳಲ್ಲಿ ರಕ್ಷಣಾ ಸಿಬ್ಬಂದಿ (Security Employee) ಯಾಗಿ ಸುಲಭವಾಗಿ ಕೆಲಸ ಸಿಗುತ್ತದೆ. ನಿಮ್ಮ ನಿವೃತ್ತ ಜೀವನ ಸುಖಮಯವಾಗಲಿ ಎಂದು ಆಶಿಸುತ್ತೇನೆ.

ಮಂಜುನಾಥ, ಬೆಂಗಳೂರು
ನನ್ನ ವಯಸ್ಸು 27. ನಾನು, ನನ್ನ ತಮ್ಮ, ತಂದೆ ತಾಯಿ ಜತೆಗೆ ₹ 8,000 ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ನಾನು MNCಯಲ್ಲಿ ಕೆಲಸ ಮಾಡುತ್ತಿದ್ದು, ನನ್ನ ಸಂಬಳ ₹ 20,000. ನನ್ನ ತಮ್ಮ ಸದ್ಯ ಕೆಲಸಕ್ಕೆ ಸೇರಿಕೊಂಡಿದ್ದಾನೆ. ನಮಗೆ ₹ 3 ಲಕ್ಷ ವೈಯಕ್ತಿಕ ಸಾಲವಿದೆ.  ನಮಗೆ ಹಿರಿಯರ ಆಸ್ತಿಯಿಂದ ಸುಮಾರು ₹ 14 ಲಕ್ಷ ಹಣ ಬರಲಿದೆ. ಈ ಮೊತ್ತಕ್ಕೆ ತೆರಿಗೆ ಇದೆಯೇ? ಇದ್ದರೆ ಎಷ್ಟು ಕೊಡಬೇಕಾಗುತ್ತದೆ? ಈ ಹಣದಿಂದ, ನಿವೇಶನ ಅಥವಾ ಮನೆ ಕೊಳ್ಳಬೇಕೆಂದಿದ್ದೇವೆ. ನನಗೆ ಬ್ಯಾಂಕ್‌ ಸಾಲ ದೊರೆಯಬಹುದೇ, ಒಂದು ವೇಳೆ ಸಿಗದಿರುವಲ್ಲಿ ಹೀಗೆ ಬರುವ ₹ 14 ಲಕ್ಷ ಹೇಗೆ ವಿನಿಯೋಗಿಸಬೇಕು. ನಿಮ್ಮ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದೇವೆ.

ಉತ್ತರ: ನೀವು ಹಿರಿಯರ ಆಸ್ತಿಯಿಂದ ಪಡೆಯುವ ₹ 14 ಲಕ್ಷದಿಂದ ಸ್ವಂತ ಮನೆ ಅಥವಾ ಫ್ಲ್ಯಾಟ್‌ ಕೊಂಡುಕೊಳ್ಳುವಲ್ಲಿ ಅಥವಾ ಹಿರಿಯರ ಆಸ್ತಿ ಕೃಷಿ ಭೂಮಿಯಾದಲ್ಲಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್ ಸಂಪೂರ್ಣ ವಿನಾಯತಿ ಇದೆ. (ಸೆಕ್ಷನ್‌ 54ಎಫ್‌–48) ಇದೇ ವೇಳೆ ಸೆಕ್ಷನ್‌ 54ಇಸಿಯ ಆಧಾರದ ಮೇಲೆ NHIA-REC ಬಾಂಡುಗಳಲ್ಲಿ ತೊಡಗಿಸಿದರೂ ಸಂಪೂರ್ಣ ತೆರಿಗೆ ವಿನಾಯ್ತಿ ಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಹೆಚ್ಚಿನ ಬಡ್ಡಿ ಕೊಡುವಲ್ಲಿ ಆ ಸಾಲ ತೀರಿಸಲು ಆದ್ಯತೆ ಕೊಡಿರಿ. ನಿಮ್ಮ ಸಂಬಳ ಹಾಗೂ ಸಾಲ ಮರುಪಾವತಿಸುವ ಸಾಮರ್ಥ್ಯ ನೋಡುವಾಗ, ಸದ್ಯದ ಪರಿಸ್ಥಿತಿಯಲ್ಲಿ ಗೃಹಸಾಲ ದೊರಕಲಾರದು. ನಿಮ್ಮ ಹಿರಿಯರ ಆಸ್ತಿಯಿಂದ ಬರುವ ಹಣಕ್ಕೆ ನಾನು ಮೇಲೆ ವಿವರಿಸಿದಂತೆ ತೆರಿಗೆ ಬರುವಲ್ಲಿ NHIA-REC ಬಾಂಡ್‌ನಲ್ಲಿ ತೊಡಗಿಸಿರಿ. ತೆರಿಗೆ ಬಾರದಿರುವಲ್ಲಿ 5 ವರ್ಷಗಳ ಅವಧಿಗೆ, ನಿಮ್ಮ ತಂದೆ ತಾಯಿ ಜಂಟಿ ಖಾತೆಯಿಂದ ಅವಧಿ ಠೇವಣಿ ಬ್ಯಾಂಕಿನಲ್ಲಿ ಮಾಡಿ ನೆಮ್ಮದಿಯಿಂದ ಜೀವಿಸಿರಿ. ಸಾಧ್ಯವಾದರೆ ₹ 2000–3000 ಆರ್‌.ಡಿ. 5 ವರ್ಷಗಳ ಅವಧಿಗೆ ಮಾಡಿರಿ.

ಕಬ್ಸದ, ಧಾರವಾಡ
ನಾನು ನಿವೃತ್ತ ನೌಕರ. ನನಗೆ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದಾರೆ. ನಾನು ಈ ಮಕ್ಕಳ ಹೆಸರಿನಲ್ಲಿ ಒಂದು ಮೊತ್ತ ಅವಧಿ ಠೇವಣಿ ಮಾಡಬೇಕೆಂದಿದ್ದೇನೆ. ನಾನು ದಾನ ಪತ್ರ ಮಾಡಿ ಮಕ್ಕಳಿಗೆ ಕೊಡಬಹುದೇ? ನನಗೆ ತೆರಿಗೆ ಬರಬಹುದೇ ತಿಳಿಸಿರಿ.

ಉತ್ತರ: ಯಾವುದೇ ವ್ಯಕ್ತಿ, ತನ್ನ ಆದಾಯ ಅಥವಾ ಉಳಿತಾಯದಿಂದ ತನ್ನ ಹೆಂಡತಿ ಅಥವಾ ಅಪ್ರಾಪ್ತ ವಯಸ್ಕ ಮಕ್ಕಳಿಗೆ ದಾನಪತ್ರ (Gift Deed) ಮೂಲಕ ಅಥವಾ ಅವರ ಹೆಸರಿನಲ್ಲಿ ಹಣ ಬ್ಯಾಂಕ್‌ನಲ್ಲಿ ಇರಿಸಿದರೆ, ಅಲ್ಲಿ ಬರುವ ಬಡ್ಡಿಗೆ ನೀವೇ ತೆರಿಗೆ ಸಲ್ಲಿಸಬೇಕಾಗುತ್ತದೆ. ನೀವು ಮೇಲೆ ತಿಳಿಸಿದಂತೆ ಒಂದು ಮೊತ್ತ ನಿಮ್ಮ ಅಪ್ರಾಪ್ತ ವಯಸ್ಕರಾದ ಮಕ್ಕಳಿಗೆ ದಾನ ಪತ್ರ ಅಥವಾ ಅವರ ಹೆಸರಿನಲ್ಲಿ ಠೇವಣಿ ಇರಿಸಿದರೆ, ಅಲ್ಲಿ ಬರುವ ಬಡ್ಡಿಗೆ ನೀವೇ ತೆರಿಗೆ ಕೊಡಬೇಕಾಗುತ್ತದೆ. ಆದರೆ ನೀವು ಹಿರಿಯ ನಾಗರಿಕರಾದ್ದರಿಂದ, ಬಡ್ಡಿ ಹಾಗೂ ಇತರೆ ಒಟ್ಟು ಆದಾಯ ವಾರ್ಷಿಕವಾಗಿ ₹ 3 ಲಕ್ಷ ದೊಳಗಿರುವಲ್ಲಿ ತೆರಿಗೆ ಬರುವುದಿಲ್ಲ.

ಸತೀಶ್‌, ಹುಬ್ಬಳ್ಳಿ
ನಾನು ಎಸ್‌ಬಿಐನಲ್ಲಿ ₹ 2.30 ಲಕ್ಷ ಎಫ್‌ಡಿ ಮಾಡಿದ್ದೇನೆ. ಉಳಿತಾಯ ಖಾತೆಯಲ್ಲಿ ₹ 31,000 ಇದೆ. ತಿಂಗಳಿಗೆ ₹ 500 ಮ್ಯೂಚುವಲ್‌ ಫಂಡ್‌ಗೆ ಕಟ್ಟುತ್ತೇನೆ. ನನಗೆ ಆದಾಯ ತೆರಿಗೆ ಬರುತ್ತಿದೆಯೇ ತಿಳಿಸಿರಿ.

ಉತ್ತರ: ನಿಮಗೆ ವಾರ್ಷಿಕವಾಗಿ ಬಡ್ಡಿ ಹಾಗೂ ಉಳಿದ ಎಲ್ಲಾ ಆದಾಯ (ಕೃಷಿ ಆದಾಯ ಹೊರತುಪಡಿಸಿ) ಸೇರಿಸಿ, ₹ 2.50 ಲಕ್ಷ ದಾಟುವಲ್ಲಿ ಮಾತ್ರ, ₹ 2.50 ಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಪ್ರತೀ ವರ್ಷ 15–ಜಿ ನಮೂನೆ ಫಾರಂ ಬ್ಯಾಂಕಿಗೆ ಏಪ್ರಿಲ್‌ನಲ್ಲಿ ಸಲ್ಲಿಸಿ, ಬಡ್ಡಿ ಮೂಲದಲ್ಲಿ ತೆರಿಗೆ ಮುರಿಯದಂತೆ (ಟಿಡಿಎಸ್‌) ನೋಡಿಕೊಳ್ಳಿ. ಹೀಗೆ 15ಜಿ ಕೊಡದಿರುವಲ್ಲಿ ಬ್ಯಾಂಕ್‌ನಲ್ಲಿ ಟಿಡಿಎಸ್‌ ಮಾಡುತ್ತಾರೆ. ಪ್ಯಾನ್‌ಕಾರ್ಡು ಕೂಡಾ ಕೊಡಿರಿ. ಕೊಡದಿರುವಲ್ಲಿ ಶೇ 20 ಟಿಡಿಎಸ್‌ ಆಗುತ್ತದೆ.

ಪಿ. ಪಾಪಣ್ಣ, ಬೆಂಗಳೂರು
ನನ್ನ ನಿವೃತ್ತಿಯಿಂದ ಬಂದ ಹಣದಿಂದ ಎರಡು ನಿವೇಶನ ಕೊಂಡಿದ್ದೇನೆ. ಒಂದು ನಿವೇಶನ ನನ್ನ ಹೆಸರಿನಲ್ಲಿಯೂ, ಇನ್ನೊಂದು ನಿವೇಶನ ನನ್ನ ಮಗಳ ಹೆಸರಿನಲ್ಲಿಯೂ ಕೊಂಡುಕೊಂಡಿದ್ದೇನೆ. ಒಂದು ನಿವೇಶನ ಮಾರಾಟ ಮಾಡಿ, ಇನ್ನೊಂದರಲ್ಲಿ ಮನೆ ಕಟ್ಟಿ ನಾನು ವಾಸವಾಗಿರಬೇಕೆಂದಿದ್ದೇನೆ. ನಂತರ ಈ ಮನೆ ಇಬ್ಬರು ಹೆಣ್ಣುಮಕ್ಕಳಿಗೆ ಮೃತ ಪತ್ರದ ಮುಖಾಂತರ ವರ್ಗಾಯಿಸಬೇಕೆಂದಿದ್ದೇನೆ. ಬಂಡವಾಳ ವೃದ್ಧಿ ತೆರಿಗೆ ಹೇಗೆ ಉಳಿಸಲಿ. ನಾನು ಮಾರಾಟ ಮಾಡಿ ಬಂದ ಸಂಪೂರ್ಣ ಹಣ ಮನೆ ಕಟ್ಟಲು ಉಪಯೋಗಿಸುತ್ತೇನೆ. ದಯಮಾಡಿ ಸರಳ ಮಾರ್ಗ ಸೂಚಿಸಿರಿ.

ಉತ್ತರ: ಸೆಕ್ಷನ್‌ 54. ಎಫ್‌ ಪ್ರಕಾರ, ಸ್ಥಿರ ಆಸ್ತಿ ಮಾರಾಟ ಮಾಡಿ ಬಂದ ಲಾಭದಿಂದ ಓರ್ವ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬವು (HUF), ಸ್ವಂತ ಮನೆ ಕಟ್ಟಿಸಿಕೊಳ್ಳುವಲ್ಲಿ, ಬಂಡವಾಳ ವೃದ್ಧಿ ತೆರಿಗೆ (Capital Gain Tax) ಬರುವುದಿಲ್ಲ. ನೀವು ಸ್ಥಿರ ಆಸ್ತಿ ಮಾರಾಟ ಮಾಡಿ ಬರುವ ಸಂಪೂರ್ಣ ಹಣ ಮನೆ ಕಟ್ಟಲು ಉಪಯೋಗಿಸುವುದರಿಂದ ತೆರಿಗೆಗೆ ಒಳಗಾಗುವುದಿಲ್ಲ. ಸ್ಥಿರ ಆಸ್ತಿ ಮಾರಾಟ ಮಾಡಿದ ಮೂರು ವರ್ಷಗಳ ಒಳಗೆ ಮನೆ ಕಟ್ಟಬೇಕಾಗುತ್ತದೆ ನೆನಪಿರಲಿ.

ನೀವು ಉಯಿಲು ಬರೆಯುವಾಗ, ಇಬ್ಬರೂ ಮಕ್ಕಳ ಹೆಸರಿಗೆ ಬರೆಯುವುದಾದಲ್ಲಿ ಉಯಿಲನ್ನು ದ್ವಿಪ್ರತಿಯಲ್ಲಿ (Both Original) ಬರೆಯಿರಿ. ಇದರಿಂದ ಇಬ್ಬರೂ ಹೆಣ್ಣುಮಕ್ಕಳಿಗೆ, ಬೇರೆ ಬೇರೆ ಉಯಿಲು ಪತ್ರ ಕೊಡಲು ಅನುಕೂಲವಾಗುತ್ತದೆ. ಉಯಿಲನ್ನು ನೋಂದಾಯಿಸುವ ಅಥವಾ ಸ್ಟ್ಯಾಂಪ್‌ ಪೇಪರಿನ ಮೇಲೆ ಬರೆಯುವ ಅವಶ್ಯವಿಲ್ಲ. ಆದರೂ ಸಾಧ್ಯವಾದರೆ ನೋಂದಾಯಿಸಿಬಿಡಿ. ಒಮ್ಮೆ ಬರೆದ ಉಯಿಲು ಬದಲಾಯಿಸುವ ಹಕ್ಕು ನಿಮಗಿರುತ್ತದೆ ಹಾಗೂ ಒಬ್ಬ ವ್ಯಕ್ತಿಯ ಕೊನೆಯ ಉಯಿಲು ಮಾತ್ರ ಕಾರ್ಯಗತವಾಗುತ್ತದೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT