ಮಂಗಳವಾರ, ಸೆಪ್ಟೆಂಬರ್ 17, 2019
21 °C
ಭೀಕರ ಹಲ್ಲೆ: ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ

‘ವೈರಲ್‌ ವಿಡಿಯೊ’ ಆಧರಿಸಿ 6 ಜನರ ಬಂಧನ

Published:
Updated:

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ದಲಿತ ಯುವಕರೊಬ್ಬರ ಮೇಲೆ ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದನ್ನು ಆಧರಿಸಿ ಜೇವರ್ಗಿ ಪೊಲೀಸರು ಸೋಮವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೇವರ್ಗಿಯ ಶಿವರಾಜ ಕಾಂತಪ್ಪ, ಸಂತೋಷ ಸುಭಾಷ ಚನ್ನೂರ, ಪ್ರಕಾಶ ಹೊಸಮನಿ, ಮಾರೆಪ್ಪ ಮಡಿವಾಳಕರ ಹಾಗೂ ಮಾಣಿಕ್‌ ರೆಡ್ಡಿ ಬಂಧಿತ ಆರೋಪಿಗಳು.

‘10ರಿಂದ 12 ದಿನಗಳ ಹಿಂದೆ ಶಿವಕುಮಾರ ಮೇಲೆ ನಡೆದ ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹಲ್ಲೆ ಕುರಿತು ಗಾಯಾಳು ಅಥವಾ ಆತನ ಕುಟುಂಬದವರು ಯಾವುದೇ ದೂರು ನೀಡಿರಲಿಲ್ಲ. ನಾವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದೇವೆ’ ಎಂದು ಕಲಬುರ್ಗಿ ಗ್ರಾಮೀಣ ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರ ತಿಳಿಸಿದರು.

‘ಜೇವರ್ಗಿಯ ಪಾಲಿಟೆಕ್ನಿಕ್‌ ಕಾಲೇಜು ಸಮೀಪ ಈ ಹಲ್ಲೆ ನಡೆದಿದೆ. ಹಳೆ ವೈಷಮ್ಯದಿಂದ ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

Post Comments (+)