ಗುರುವಾರ , ಸೆಪ್ಟೆಂಬರ್ 19, 2019
26 °C

ಶೌಚಾಲಯದಲ್ಲಿ ಕ್ರಾಂತಿ: ಜಿಲ್ಲಾಧಿಕಾರಿಗೆ ಗಾಂಧಿ ಪುರಸ್ಕಾರ

Published:
Updated:

ಕಲಬುರ್ಗಿ: ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಹಾಸನ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಿದ್ದಕ್ಕಾಗಿ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಗಾಂಧಿ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿಸಲು ದುಡಿದು ಶೌಚಾಲಯ ನಿರ್ಮಾಣದಲ್ಲಿ ಕ್ರಾಂತಿ ಮಾಡಿದ ಅಧಿಕಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಸನ್ಮಾನಿಸಿದರು.

ಆರ್.ವೆಂಕಟೇಶ ಕುಮಾರ ಅವರು ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 3 ತಿಂಗಳಲ್ಲಿಯೇ 57 ಸಾವಿರ ಶೌಚಾಲಯ ಹಾಗೂ 2 ವರ್ಷದಲ್ಲಿ 2 ಲಕ್ಷಕ್ಕಿಂತ ಅಧಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಶೌಚಾಲಯದಲ್ಲಿ ಕ್ರಾಂತಿ ಮಾಡಿದ್ದರು.

ಜುಲೈ 2017ರ ಅಂತ್ಯಕ್ಕೆ 2.99ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಜಿಲ್ಲೆಗೆ ಹಂಚಿಕೆಯಾದ ₨45 ಕೋಟಿ ರೂ. ಸಂಪೂರ್ಣ ಅನುದಾನ ಖರ್ಚು ಮಾಡಿ ಆರ್ಥಿಕ ಪ್ರಗತಿಯನ್ನೂ ಸಾಧಿಸಿದ್ದರು. ಹಾಸನ ಜಿಲ್ಲೆಯು 267 ಗ್ರಾಮ ಪಂಚಾಯಿತಿಗಳು 2,420 ಗ್ರಾಮಗಳನ್ನು ಹೊಂದಿದ್ದು, 3,57,510 ಕುಟುಂಬಗಳು ಶೌಚಾಲಯಗಳನ್ನು ಹೊಂದಿವೆ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಮನೆಯಲ್ಲಿ ಶೌಚಾಲಯಗಳನ್ನು ಹೊಂದುವುದು ಕಡ್ಡಾಯವಾಗಿದ್ದು, ಇದನ್ನು ಅನುಸರಿಸಿದ ಜನಪ್ರತಿನಿಧಿಗಳಿಗೆ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ವೆಂಕಟೇಶ ಕುಮಾರ ಆದೇಶ ಹೊರಡಿಸಿದ್ದರು.

ಜೆಸ್ಕಾಂ ಕಲಬುರ್ಗಿಯ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಶೇ 50ರಷ್ಟು ಪ್ರಗತಿ ಸಾಧಿಸಿದ್ದಕ್ಕಾಗಿ ಅವರಿಗೂ ಗಾಂಧಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

Post Comments (+)