ಚಾಲನೆ ವೇಳೆ ಫೋನ್‌ ತೊಂದರೆ ಕೊಡದಿರಲು...

ಭಾನುವಾರ, ಮೇ 26, 2019
32 °C

ಚಾಲನೆ ವೇಳೆ ಫೋನ್‌ ತೊಂದರೆ ಕೊಡದಿರಲು...

Published:
Updated:
ಚಾಲನೆ ವೇಳೆ ಫೋನ್‌ ತೊಂದರೆ ಕೊಡದಿರಲು...

ವಾಹನ ಚಾಲನೆ ಮಾಡುವ ವೇಳೆ ಮೊಬೈಲ್‌ ಫೋನ್‌ನಲ್ಲಿ ಮಾತನಾಡಬೇಡಿ’ ಎಂಬ ರಸ್ತೆ ಸುರಕ್ಷತೆಯ ಜಾಹೀರಾತುಗಳನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ, ಮೊಬೈಲ್‌ನಲ್ಲಿ ಮಾತನಾಡುವುದು ಮಾತ್ರ ಚಾಲನೆ ವೇಳೆ ಪ್ರಾಣಕ್ಕೆ ಮುಳುವಾಗುವ ಸಂಗತಿಯಲ್ಲ, ನೀವು ಮೊಬೈಲ್‌ನಲ್ಲಿ ಮಾತನಾಡದಿದ್ದರೂ ನಿಮ್ಮ ಫೋನ್‌ ನಿಮ್ಮ ಪ್ರಾಣಕ್ಕೆ ಸಂಚಕಾರ ತರಬಲ್ಲದು. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಸ್ಮಾರ್ಟ್‌ಫೋನ್‌ಗಳು ಬಹುತೇಕರ ಕೈಯಲ್ಲಾಡುತ್ತಿರುವ ಈ ದಿನಗಳಲ್ಲಿ ನೂರಾರು ಆ್ಯಪ್‌ಗಳ ನೋಟಿಫಿಕೇಷನ್‌ಗಳು ಮೊಬೈಲ್‌ಗೆ ಬರುವುದು ಸಾಮಾನ್ಯ. ಆ್ಯಪ್‌ನ ನೋಟಿಫಿಕೇಷನ್‌ಗಳು, ನೀವು ಸಬ್‌ಸ್ಕ್ರೈಬ್‌ ಮಾಡಿರುವ ವೆಬ್‌ಸೈಟ್‌ಗಳ ನೋಟಿಫಿಕೇಷನ್‌ಗಳು ಸೇರಿದಂತೆ ನಿಮ್ಮ ಫೋನ್‌ಗೆ ನಿರಂತರವಾಗಿ ಸಂದೇಶಗಳು ಬರುತ್ತಲೇ ಇರುತ್ತವೆ. ಚಾಲನೆ ಮಾಡುತ್ತಿರುವ ಸಂದರ್ಭದಲ್ಲೂ ಹೀಗೆ ಬರುವ ಸಂದೇಶಗಳನ್ನು ನೋಡಲೆಂದು ಮೊಬೈಲ್‌ ಕೈಗೆತ್ತಿಕೊಳ್ಳುವವರೂ ಬಹಳ. ಹೀಗೆ ಮೊಬೈಲ್‌ ಕೈಗೆತ್ತಿಕೊಂಡ ವೇಳೆ ನಿಮ್ಮ ಗಮನ ಬೇರೆಡೆಗೆ ಹರಿದು ರಸ್ತೆಯಲ್ಲಿ ಅಪಘಾತವಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.

ಹೀಗೆ ಚಾಲನೆ ವೇಳೆ ಮೊಬೈಲ್‌ ನಿಮಗೆ ತೊಂದರೆ ಕೊಡದಂತೆ ಮಾಡಲು ಹಲವು ಆಯ್ಕೆಗಳಿವೆ. ಇಂತಹ ಆಯ್ಕೆಗಳಲ್ಲಿ ಕೆಲವು ಮ್ಯಾನುವಲ್‌ ಆಯ್ಕೆಗಳಾದರೆ ಕೆಲವು ಸ್ವಯಂ ಆಗಿ ಸೆನ್ಸಾರ್‌ ಮೂಲಕ ನಿಮಗೆ ಕರೆ, ಸಂದೇಶಗಳ ತೊಂದರೆ ತಪ್ಪಿಸುತ್ತವೆ. ಮ್ಯಾನುವಲ್‌ ಆಯ್ಕೆಗಳ ವಿಷಯಕ್ಕೆ ಬಂದರೆ ನೀವು ಚಾಲನೆಗೆ ಮುಂದಾಗುವ Do not disturb ಅಥವಾ Aeroplane mode ಆಯ್ಕೆಗಳನ್ನು ಬಳಸಬಹುದು. ಈ ಎರಡೂ ಆಯ್ಕೆಗಳು ನಿಮ್ಮ ಮೊಬೈಲ್‌ನಲ್ಲಿ ಇಲ್ಲದೇ ಇದ್ದರೆ ಚಾಲನೆ ಮುಗಿಯುವವರೆಗೂ ನಿಮ್ಮ ಮೊಬೈಲ್‌ ಅನ್ನು ವೈಬ್ರೇಟ್‌ ಇಲ್ಲದೆ ಸೈಲೆಂಟ್‌ ಮೋಡ್‌ನಲ್ಲಿಡಬಹುದು. ಇಲ್ಲವೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಬಹುದು.

ಇಂಥ ಮ್ಯಾನುವಲ್‌ ಆಯ್ಕೆಗಳನ್ನು ತಪ್ಪಿಸಲು ಈಗ ಹಲವು ಆ್ಯಪ್‌ಗಳು ಬಂದಿವೆ. DriveSafe Mode, Drive Mode, TrueMotion Family Safe Driving ನಂಥ ಆ್ಯಪ್‌ಗಳು ಚಾಲನೆ ವೇಳೆ ನಿಮ್ಮ ಮೊಬೈಲ್‌ ತೊಂದರೆಗಳಿಂದ ನಿಮ್ಮನ್ನು ಕಾಯಬಲ್ಲವು.

ಯುವಜನರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿರುವ ಇಂಥ ಆ್ಯಪ್‌ಗಳ ಮೂಲಕ ಫೋಷಕರು ತಮ್ಮ ಮಕ್ಕಳು ಎಲ್ಲಿದ್ದಾರೆ, ಅವರ ವಾಹನ ಎಷ್ಟು ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ ಎಂಬುದನ್ನೆಲ್ಲಾ ತಿಳಿದುಕೊಳ್ಳಬಹುದು.

ಇನ್ನೂ ಕೆಲವು ಸ್ಮಾರ್ಟ್‌ ಫೋನ್‌ ಹಾಗೂ ಆ್ಯಪ್‌ಗಳು ನೀವು ಕಾರ್‌ ಅಥವಾ ಬೈಕ್‌ ಚಾಲೂ ಮಾಡುತ್ತಿದ್ದಂತೆ ಸೆನ್ಸಾರ್‌ ಮೂಲಕ Do not disturb ಮೋಡ್‌ಗೆ ಸ್ವಯಂಚಾಲಿತವಾಗಿ ಆಯ್ಕೆ ಬದಲಿಸುತ್ತವೆ.

ನಿಮಗೆ ಸಂದೇಶ ಕಳಿಸುವವರಿಗೆ ನೀವು ಚಾಲನೆಯಲ್ಲಿದ್ದೀರಿ ಎಂಬುದನ್ನು ಸಂದೇಶದ ಮೂಲಕ ತಿಳಿಸುತ್ತವೆ. ಇನ್ನು ಕೆಲವು ಕಾರುಗಳಲ್ಲಿರುವ ಮುಂದುವರಿದ ತಂತ್ರಜ್ಞಾನ ಕೂಡ ನಿಮ್ಮನ್ನು ಫೋನ್‌ನ ತೊಂದರೆಯಿಂದ ತಪ್ಪಿಸುವಂಥ ಸ್ವಯಂಚಾಲಿತ ಆಯ್ಕೆಗಳನ್ನು ಹೊಂದಿದೆ. ⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry