ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಿಪಲ್ಲೆ ತರಾಕ್‌ ಹೋದಾಕಿ ಹೆಣವಾದಳು’

ಶರಣಸಿರಸಗಿ: ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ, ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ
Last Updated 3 ಅಕ್ಟೋಬರ್ 2017, 9:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೊಲಕ್ ಕಾಯಿಪಲ್ಲೆ ತರಾಕ್‌ ಹೊಂಟೀನಿ. ಕತ್ಲಆಗೂದ್ರಾಗ ಮನೀಗೆ ಬರ್ತೀನಿ ಅಂತಾ ಹೇಳಿ ಹೋದಾಕಿ ಹೆಣಾ ಆಗಿ ಬಂದಾಳ ನೋಡ್ರಿ’

ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಜಯಶ್ರೀ ಗೋಡಕೆ ಅವರ ಸೋದರತ್ತೆ ಭಾಗಮ್ಮ ಅವರು ಹೀಗೆ ಹೇಳುತ್ತ ರೋದಿಸುತ್ತಿದ್ದರು.

‘ನಿನ್ನೆ(ಭಾನುವಾರ) ಮಧ್ಯಾಹ್ನ ಮಕ್ಕಳನ್ನ ಕರ್ಕೊಂಡ್ ಜಯಶ್ರೀ ಹೊಲದ ಕಡೀಗೆ ಹೊಂಟಿದ್ಲು. ಹಾದ್ಯಾಗ್ ಸಿಕ್‌ ನಾನು ಇಷ್ಟ್ ಬಿಸಲಾಗ ಮಕ್ಕಳ್ನ್‌ ಕರ್ಕೊಂಡು ಯಾಕ ಹೊಂಟೀ ಅಂತ ಕೇಳಿದ್ದೆ. ಹೊಲಕ್ ಹೋಗಿ ಕಾಯಿಪಲ್ಲೆ ತಗೊಂಡ ಲಗೂನ ಬರ್ತೀನಿ ಅಂದಿದ್ಲು. ಈಗ ನೋಡಿದ್ರ ಹೆಣ ಆಗ್ಯಾಳ. ಮಕ್ಳನ್ನು ಜತೀಗೆ ಕರ್ಕೊಂಡು ಹೋಗ್ಯಾಳ್ರಿ’ ಎಂದು ಕಣ್ಣೀರಾದರು ಅವರು.

‘ಮಕ್ಳಿಗೆ ಕಾಮಣಿ ಆಗೈತಿ, ಮನ್ಯಾಗ ಸೆಖಿ ಆಗ್ತೈತಿ. ಅದಕ್ ಸ್ವಲ್ವ ಗಾಳಿಗೆ ಕರ್ಕೊಂಡು ಬಂದೀನ್ರಿ ಎಂದು ಹಾದಿಯಲ್ಲಿ ಸಿಕ್ಕೋರಿಗೆಲ್ಲ ಹೇಳಿದ್ದಳು’ ಎಂದು ನೆನಪಿಸಿಕೊಂಡರು ಗ್ರಾಮದ ಬಸಮ್ಮ.

ಮುಗಿಲು ಮುಟ್ಟಿದ ಆಕ್ರಂದನ: ಜಯಶ್ರೀ ಗೋಡಕೆ ಅವರು ಭಾನುವಾರವೇ ಮಗಳಾದ ಪವಿತ್ರಾ(12), ಪುತ್ರರಾದ ಸುನಿಲ್(10) ಅನಿಲ್‌(6) ಅವರೊಂದಿಗೆ ಶರಣಸಿರಸಗಿ ಸಮೀಪದ ಹಾದಿ ಬಸವಣ್ಣ ಪ್ರದೇಶದ ತಮ್ಮ ಹೊಲಕ್ಕೆ ತೆರಳಿದ್ದರು.

ಮನೆ ಬಿಡುವಾಗ ತರಕಾರಿ ತರುವುದಾಗಿ ತಂದೆ–ತಾಯಿಗೆ ಹೇಳಿದ್ದರು. ಆದರೆ, ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿದ್ದಾರೆ. ಸಮೀಪದ ಹೊಲದವರು ಶವ ನೋಡಿ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಭಾನುವಾರ ರಾತ್ರಿಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಜಯಶ್ರೀ ಶವ ಹೊರ ತೆಗೆದಿದ್ದರು.

ಇತ್ತೀಚೆಗೆ ಸುರಿದ ಮಳೆಯಿಂದ ಬಾವಿಯಲ್ಲಿ ಹೆಚ್ಚಿನ ಪ್ರಮಾಣ ನೀರು ತುಂಬಿಕೊಂಡಿತ್ತು. ಬೆಳಕಿನ ವ್ಯವಸ್ಥೆಯೂ ಇಲ್ಲದೆ ಪೊಲೀಸರು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.ಸೋಮವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದರು. ಪಂಪ್‌ಸೆಟ್‌ ಬಳಸಿ ಬಾವಿಯಲ್ಲಿದ್ದ ನೀರನ್ನೆಲ್ಲ ಹೊರಗೆ ಚೆಲ್ಲಿದರು. ಮೊದಲು ಪವಿತ್ರಾ ಶವ ಹೊರ ತೆಗೆಯಲಾಯಿತು. ನಂತರ ಅನಿಲ್ ಹಾಗೂ ಸುನಿಲ್‌ ಶವ ಹೊರತೆಗೆದರು.

ಮೂವರು ಮಕ್ಕಳ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಗ್ರಾಮಕ್ಕೆ ತಂದಾಗ ಗ್ರಾಮಸ್ಥರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಶರಣಸಿರಸಗಿ ಹಾಗೂ ವಿವಿಧೆಡೆಯಿದ ಬಂದಿದ್ದ ಸಂಬಂಧಿಕರು ಗೋಳಿಟ್ಟರು. ಗ್ರಾಮದ ಮಹಿಳೆಯರು ಟ್ರ್ಯಾಕ್ಟರ್‌ ಸುತ್ತ ಜಮಾಯಿಸಿ ಕಣ್ಣೀರು ಸುರಿಸಿದರು.

ತವರಿಗೆ ಬಂದಿದ್ದ ಜಯಶ್ರೀ: ಜಯಶ್ರೀ ಅವರ ವಿವಾಹ ಆಳಂದ ತಾಲ್ಲೂಕಿನ ಬಸವರಾಜ ಅವರೊಂದಿಗೆ 16 ವರ್ಷಗಳ ಹಿಂದೆ ನಡೆದಿತ್ತು. ಒಂದೂವರೆ ತಿಂಗಳ ಹಿಂದೆ ತವರಿಗೆ ಬಂದಿದ್ದರು.

ಪತಿ ಬಸವರಾಜ ಸಹ 15 ದಿನ ಮಾವನ ಮನೆಯಲ್ಲಿದ್ದು ಇತ್ತೀಚೆಗೆ ಸ್ವಗ್ರಾಮಕ್ಕೆ ಮರಳಿದ್ದರು. ಜಯಶ್ರೀ ಅವರ ಮೂವರು ಮಕ್ಕಳಲ್ಲಿ ಪವಿತ್ರಾ ಹಾಗೂ ಸುನಿಲ್‌ ಕಲಬುರ್ಗಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

‘ಪತಿ ಮದ್ಯವ್ಯಸನಿಯಾಗಿದ್ದು. ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಪತ್ನಿ ಬಹಳಷ್ಟು ಬುದ್ಧಿವಾದ ಹೇಳಿದ್ದರು. ಆದರೂ ಪತಿ ಸರಿಹೋಗಿರಲಿಲ್ಲ.
ಇದೇ ಕಾರಣಕ್ಕೆ ಮಕ್ಕಳೊಂದಿಗೆ ತವರಿಗೆ ಬಂದು ನೆಲೆಸಿದ್ದಳು’ ಎಂದು ಗ್ರಾಮಸ್ಥರು ತಿಳಿಸಿದರು.

ಜಯಶ್ರೀ ಅವರ ತಂದೆ ಮಹಾದೇವಪ್ಪಗೆ 10 ಎಕರೆ ಜಮೀನು ಇದೆ. ಇವರಿಗೆ ಜಯಶ್ರೀ ಹಾಗೂ ಇಬ್ಬರು ಪುತ್ರರಿದ್ದಾರೆ. ಇಡೀ ಕುಟುಂಬ ಕೃಷಿಯನ್ನೇ ನಂಬಿಕೊಂಡಿದೆ. ತಂದೆಗೆ ಸೇರಿದ ಜಮೀನಿನಲ್ಲಿನ ಬಾವಿಯಲ್ಲಿಯೇ ಜಯಶ್ರೀ ಆತ್ಮಹತ್ಯೆಗೆ
ಶರಣಾಗಿದ್ದಾರೆ.

‘ನಮ್ಮ ಕುಟುಂಬದ ನಡುವೆ ಯಾವುದೇ ಆಸ್ತಿ ಕಲಹ ಇರಲಿಲ್ಲ. ಪತಿಯೊಂದಿಗೆ ನಡೆಯುತ್ತಿದ್ದ ಕಲಹದ ಬಗ್ಗೆ ನಮಗೆ ತಿಳಿಸಿರಲಿಲ್ಲ’ ಎಂದು ತಂದೆ ಮಹಾದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದಲ್ಲಿ ಮೌನ ಆವರಿಸಿದ್ದು, ಬಂಧುಗಳು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT