ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

47 ಸಾವಿರ ಹೆಕ್ಟೇರ್‌ನಲ್ಲಿ ಸಮೃದ್ಧ ತೊಗರಿ

ವಾಣಿಜ್ಯ ಬೆಳೆಯತ್ತ ರೈತರ ಚಿತ್ತ; ಹೂ ಬಿಡುವ ಹಂತದಲ್ಲಿ ತೊಗರಿ ಬೆಳೆ
Last Updated 3 ಅಕ್ಟೋಬರ್ 2017, 9:19 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನಲ್ಲಿ ಮುಂಗಾರು ಬೆಳೆಗಳ ರಾಶಿ ಸಂಪೂರ್ಣ ಮುಗಿದಿದ್ದು, ಈಗ ವಾಣಿಜ್ಯ ಬೆಳೆ ತೊಗರಿಯತ್ತ ರೈತರ ಚಿತ್ತ ನಾಟಿದೆ.

ತಾಲ್ಲೂಕಿನಾದ್ಯಂತ ತೊಗರಿ ಬೆಳೆ ಹುಲುಸಾಗಿ ಬೆಳೆಯುತ್ತಿರುವುದರಿಂದ ರೈತರ ಮೊಗದಲ್ಲಿ ಈ ವರ್ಷ ಮಂದಹಾಸ ಮೂಡಿದೆ. ಈಗಾಗಲೇ ತೊಗರಿ ಬೆಳೆಗಳು ಮಾನವನ ಎತ್ತರಕ್ಕೆ ಬೆಳೆದು ನಿಂತಿದ್ದು, ಹೂ ಬಿಡುವ ಹಂತದಲ್ಲಿದೆ. ತೊಗರಿಯ ಸಾಲಿನಲ್ಲಿರುವ ಹಾಗೂ ಮಧ್ಯದಲ್ಲಿರುವ ಕಳೆಯನ್ನು ತೆಗೆಯಲು ರೈತರು ಮುಂದಾಗಿದ್ದಾರೆ.

ಕಳೆದ 10 ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತೊಗರಿ ಬೆಳೆಗೆ ಮಳೆ ಪೂರಕವಾಗಿದೆ. ಇದರಿಂದ ಟೊಂಗೆಗಳು ಒಡೆದು ಕವಲಾಗುತ್ತಿವೆ. ತಾಲ್ಲೂಕಿನ ರಂಜೋಳ, ಹಾಬಾಳ (ಟಿ), ಕೋಡ್ಲಾ, ಮುಧೋಳ, ಮಳಖೇಡ, ಹಂದರಕಿ, ಆಡಕಿ, ಮದನಾ, ಮೀನಹಾಬಾಳ, ನೀಲಹಳ್ಳಿ, ಊಡಗಿ ಸೇರಿದಂತೆ ವಿವಿಧೆಡೆಗಳಲ್ಲಿ ತೊಗರಿ ಬೆಳೆ ಚೆನ್ನಾಗಿದೆ. ಅಕಾಲಿಕ ಮಳೆಯಿಂದ ಮುಂಗಾರು ಬೆಳೆಗಳಲ್ಲಿ ಕಡಿಮೆ ಇಳುವರಿ ಪಡೆದ ರೈತ, ತೊಗರಿ ಬೆಳೆಯಲ್ಲಿ ಅಧಿಕ ಲಾಭವನ್ನು ಪಡೆದುಕೊಳ್ಳಲು ತಯಾರಿ ನಡೆಸಿದ್ದಾನೆ.

‘ಕೃಷಿ ಇಲಾಖೆ ವತಿಯಿಂದ ಹಿಂಗಾರು ಬೆಳೆಗಳ ಧಾನ್ಯಗಳನ್ನು ವಿತರಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಅಮೀರ ಖುಸ್ರೋ ಹೇಳುತ್ತಾರೆ.

ಹಿಂಗಾರು ಬೆಳೆ ಕಡಲೆ ಬಿತ್ತನೆ ನಡೆದಿದ್ದು, ಈ ತಿಂಗಳಲ್ಲಿ ಸಂಪೂರ್ಣ ಬಿತ್ತನೆ ಕಾರ್ಯ ಮುಗಿಯಲಿದೆ. ಅದೇ ರೀತಿಯಲ್ಲಿ ಜೋಳದ ಬಿತ್ತನೆಯನ್ನು ರೈತರು ಅಕ್ಟೋಬರ್ ಎರಡನೇ ವಾರದಲ್ಲಿ ಮುಂದಾಗಲಿದ್ದಾರೆ.

‘ತೊಗರಿ ಬೆಳೆಗೆ ಸಾಕಾಗುವಷ್ಟು ಮಳೆಯಾಗಿದ್ದು, ರೈತನ ಕೃಷಿ ಚಟುವಟಿಕೆಗಳಿಗೆ ಬಿಡುವುಬೇಕಾಗಿದೆ’ ಎಂದು ರೈತ ಭೀಮಶಪ್ಪ ಹೇಳುತ್ತಾರೆ.

‘ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾದರೆ, ರೈತರು ಹೊಲದಲ್ಲಿ ನೀರು ನಿಲ್ಲದಂತೆ ಜಾಗೃತ ವಹಿಸಬೇಕು. ಹೊಲದಲ್ಲಿ ನಿಂತ ನೀರನ್ನು ಕಾಲುವೆಗೆ ಬಿಡುವ ಪ್ರಯತ್ನ ಮಾಡಬೇಕು. ಅಲ್ಲದೆ ತೊಗರಿಯ ಕಾಂಡದ ಕೆಳ ಪ್ರದೇಶದಲ್ಲಿ ತೊಗರಿ ಗಂಟುಗಟ್ಟುವ ಸಾಧ್ಯತೆ ಈಗ ಹೆಚ್ಚಿರುತ್ತದೆ. ಗಂಟುಗಟ್ಟಿದ್ದಲ್ಲಿ ತೊಗರಿ ಬೆಳೆ ಟೊಂಗೆಗಳು ಮುರಿದು ಬೀಳುತ್ತಾ ನಾಶವಾಗುತ್ತದೆ. ಗಂಟಾಗುತ್ತಿರುವುದು ಕಂಡು ಬಂದಲ್ಲಿ ಕಾರ್ಬಂಡಿಸಿಯಂ ಮತ್ತು ಮ್ಯಾನ್ಕೊಜೆಟ್ ಸಿಂಪಡಿಸಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ವೈ.ಹಂಪಣ್ಣ ‘ಪ್ರಜಾವಾಣಿ’ ಗೆ ತಿಳಿಸಿದರು.

***
ತೊಗರಿ ಬೆಳೆ ಸಲೀಸಲಾಗಿ ಬೆಳೆಯುತ್ತಿ<br/>ರುವುದರಿಂದ ರೈತರು ಔಷಧ ಸಿಂಪರಣೆ ಮಾಡಬಾರದು. ಮುಂದಿನ ವಾರದಲ್ಲಿ ಕೃಷಿ ಇಲಾಖೆ ಮಾಹಿತಿ ಪಡೆದು, ಔಷಧ ಸಿಂಪಡಿಸಬೇಕು.
ವೈ.ಹಂಪಣ್ಣ ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT