ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ನಿರ್ವಹಣೆ; ಬೆಲ್‌ಫಾಸ್ಟ್‌ ಯಶೋಗಾಥೆ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1995ರಲ್ಲಿ ಎಂಜಿನಿಯರ್‌ ಪದವೀಧರರೊಬ್ಬರು  ₹ 6,900  ಹೂಡಿಕೆ ಮಾಡಿ ಆರಂಭಿಸಿದ್ದ ಉದ್ಯೋಗ ನೇಮಕಾತಿ ಪುಟ್ಟ ಸಂಸ್ಥೆಯೊಂದು 22 ವರ್ಷಗಳಲ್ಲಿ ವಾರ್ಷಿಕ ₹ 75 ಕೋಟಿಗಳಷ್ಟು ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಇದರ ಹಿಂದಿರುವ ಏಕೈಕ ಪ್ರೇರಕ ವ್ಯಕ್ತಿ ಜಿಜೆಎ ಪ್ರಸನ್ನ ಕುಮಾರ್‌ ಅವರು. ವಹಿವಾಟಿನ ಪ್ರಮಾಣವನ್ನು ₹ 120 ಕೋಟಿಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಅವರು ಈಗ ಕಾರ್ಯಪ್ರವೃತ್ತರಾಗಿದ್ದಾರೆ. ಎರಡು ವರ್ಷಗಳಲ್ಲಿ ಶೇ 40ರಷ್ಟು ವಹಿವಾಟು ಹೆಚ್ಚಿಸುವ ಗುರಿ ಹಾಕಿಕೊಂಡು ಅವರು ಮುನ್ನಡೆಯುತ್ತಿದ್ದಾರೆ.

ಮಾನವ ಸಂಪನ್ಮೂಲ ನಿರ್ವಹಣೆಯ ಸಂಸ್ಥೆಯೊಂದು ದೇಶದ ವಿವಿಧ ನಗರಗಳಲ್ಲಿ ತನ್ನ ಛಾಪು ಒತ್ತಿ ಈ ಪರಿ ಬೆಳೆಯುವುದರ ಹಿಂದೆ ಪ್ರಸನ್ನ ಕುಮಾರ್‌ ಅಪಾರ ಪರಿಶ್ರಮ, ಕತೃತ್ವ ಶಕ್ತಿ ಅಡಗಿದೆ.

ಮೈಸೂರು ವಿಶ್ವವಿದ್ಯಾನಿಲಯದ  ಎಂಜಿನಿಯರ್‌ ಪದವೀಧರರಾಗಿರುವ ಬೆಲ್‌ಫಾಸ್ಟ್‌ ಮ್ಯಾನೇಜ್‌ಮೆಂಟ್‌ ನಿರ್ದೇಶಕ ಪ್ರಸನ್ನ ಕುಮಾರ್‌ ಅವರು, ಮಾನವ ಸಂಪನ್ಮೂಲದ ಸಂಕೀರ್ಣ ಸ್ವರೂಪದ ಮತ್ತು ಸವಾಲಿನ ಕೆಲಸ ನಿರ್ವಹಣೆಗೆಂದೇ ಪ್ರತ್ಯೇಕ ಸಂಸ್ಥೆ ಸ್ಥಾಪಿಸಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.

ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರಿಯಲ್‌ನಲ್ಲಿ ಕೆಲಸ ಮಾಡುವಾಗಲೇ  ಇಂತಹ ದೊಡ್ಡ ದೊಡ್ಡ ಉದ್ದಿಮೆ ಸಂಸ್ಥೆಗಳಲ್ಲಿ ಇರುವ ಸಾವಿರಾರು ಕೆಲಸಗಾರರ ನಿರ್ವಹಣೆಯ ಸವಾಲಿನ ಕೆಲಸವು ಅವರ ಗಮನ ಸೆಳೆದಿತ್ತು. ಉದ್ದಿಮೆ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿಯ ನೇಮಕಾತಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿಯೇ (ಮಾನವ ಸಂಪನ್ಮೂಲ) ಏನಾದರೂ ಸಾಧನೆ ಮಾಡಬೇಕೆಂಬ ತುಡಿತದಿಂದ ಅವರು ಈ ಸಂಸ್ಥೆ ಸ್ಥಾಪಿಸಿದ್ದರು.

ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ನೇಮಕಾತಿ ಮತ್ತು ಉದ್ಯೋಗ ಒದಗಿಸುವ ಸಂಸ್ಥೆಯಾಗಿ ಸಣ್ಣದಾಗಿ ಆರಂಭಿಸಿದ ನಂತರ ಈ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಅವರೀಗ ಸಾಕಷ್ಟು ಸಫಲರಾಗಿದ್ದಾರೆ.

ಉದ್ದಿಮೆ ಸಂಸ್ಥೆಗಳಿಗೆ ಬೇಕಾದ ಗುತ್ತಿಗೆ ಸಿಬ್ಬಂದಿ ಒದಗಿಸುವ ಬೆಲ್‌ಫಾಸ್ಟ್‌, ಅಷ್ಟಕ್ಕೆ ತನ್ನ ಹೊಣೆ ಮುಗಿಯಿತು ಎಂದು ಸುಮ್ಮನಿರುವುದಿಲ್ಲ. ಇಂತಹ ಗುತ್ತಿಗೆ ಸಿಬ್ಬಂದಿಯ  ಉದ್ಯೋಗ ಭದ್ರತೆಗಾಗಿ ಹೊಸ ಹೊಸ ಕಂಪನೆಯನ್ನು ಹುಡುಕುತ್ತಲೇ ಇರುತ್ತದೆ.  ಸಿಬ್ಬಂದಿಯ ಕನಿಷ್ಠ ವೇತನ, ಉದ್ಯೋಗಿಗಳ ವಿಮೆ (ಇಎಸ್‌ಐ), ಭವಿಷ್ಯ ನಿಧಿ, ಗ್ರ್ಯಾಚುಟಿ ವಿಷಯಗಳನ್ನೂ ಸಂಸ್ಥೆ ನಿರ್ವಹಿಸುತ್ತಿದೆ.

ಟೆಕ್ನಿಷಿಯನ್ಸ್‌, ಎಂಜಿನಿಯರ್‌, ಮೆಕ್ಯಾನಿಕಲ್‌, ಫಿಟ್ಟರ್ಸ್‌–ಹೀಗೆ ಉದ್ದಿಮೆಗಳ ಅಗತ್ಯಕ್ಕೆ ತಕ್ಕಂತೆ ಅರ್ಹ ಸಿಬ್ಬಂದಿ ಒದಗಿಸುತ್ತ, ಅವರಿಗೆ ತರಬೇತಿ ನೀಡಿ ಸಂಸ್ಥೆಯ ಕೆಲಸಕ್ಕೆ ಸಜ್ಜುಗೊಳಿಸುತ್ತ,  ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ನಿಭಾಯಿಸುತ್ತ ಕೆಲಸಗಾರರ ಮತ್ತು ಮಾಲೀಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.

ಸಂಸ್ಥೆಯಲ್ಲಿ ಸದ್ಯಕ್ಕೆ 3,000 ಜನ ಇದ್ದಾರೆ. ದೇಶದಾದ್ಯಂತ ಸೇವೆ ಸಲ್ಲಿಸುತ್ತಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ದೆಹಲಿ, ಬೆಂಗಳೂರು ವಿಮಾನ ನಿಲ್ದಾಣಗಳೂ ಈ ಸಂಸ್ಥೆಯ ಸೇವೆ ಪಡೆದಿವೆ. ಮುಂಬೈ, ಕೋಲ್ಕತ್ತ ವಿಮಾನ ನಿಲ್ದಾಣಗಳಲ್ಲಿಯೂ ಕೆಲಸ ನಿರ್ವಹಿಸಲು ಸಂಸ್ಥೆ ಈಗ ಮುಂದಾಗಿದೆ. 8 ರಿಂದ 10 ಲಕ್ಷ ಜನರ ಮಾಹಿತಿಯು (ಡೇಟಾ) ಈ ಸಂಸ್ಥೆಯ ಬಳಿ ಇದೆ. ಸಂಸ್ಥೆಯಿಂದ ಇದುವರೆಗೆ 11 ರಿಂದ 12 ಸಾವಿರ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಮೂರರಿಂದ ಐದು ವರ್ಷಗಳವರೆಗೆ ಕೆಲಸ ಮಾಡಿದವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ದೇಶಿ ಕೈಗಾರಿಕಾ ರಂಗಕ್ಕೆ ವಿಶಿಷ್ಟ  ಸೇವೆ ಒದಗಿಸಿಕೊಡಬೇಕು ಎನ್ನುವುದು ಬೆಲ್‌ಫಾಸ್ಟ್‌ ಸಂಸ್ಥೆಯ ಮೂಲ ಮಂತ್ರವಾಗಿದೆ. ನೇಮಕಾತಿ ಪ್ರಕ್ರಿಯೆ ಆರಂಭದಿಂದಲೂ ಅವರ ಎಲ್ಲ ಅಗತ್ಯಗಳನ್ನೂ ಸಂಸ್ಥೆ ನೋಡಿಕೊಳ್ಳುತ್ತದೆ.

ಸಿಬ್ಬಂದಿ ನೇಮಕಾತಿ, ಮಾನವ ಸಂಪನ್ಮೂಲ ನಿರ್ವಹಣೆ ಉದ್ದೇಶಕ್ಕೆ ಉದ್ದಿಮೆ ಸಂಸ್ಥೆಗಳು  ನೀಡುವ ಹಣದಲ್ಲಿಯೇ ಬೆಲ್‌ಫಾಸ್ಟ್‌, ಹೊಸಬರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಬೆಲ್‌ಫಾಸ್ಟ್‌ ಸದ್ಯಕ್ಕೆ  ಎಬಿಬಿ, ಹನಿವೆಲ್‌, ಸಿಮೆನ್ಸ್‌, ಸೋನಿ, ಶಾಪೂರ್ಜಿ ಪಲ್ಲೊಂಜಿ ಒಳಗೊಂಡಂತೆ 150 ಸಂಸ್ಥೆಗಳಿಗೆ ಸೇವೆ ಒದಗಿಸುತ್ತಿದೆ. ಥಾಪರ್‌ ಗ್ರೂಪ್‌,ಇಂಡಿಯನ್‌ ನೇವಿ, ಎಚ್‌ಎಎಲ್‌ ನಂತಹ  ಪ್ರತಿಷ್ಠಿತ ಸಂಸ್ಥೆಗಳಿಗೂ ಕೆಲಸ ಮಾಡುತ್ತಿದೆ.

‘ಕೆಲವು ಸಂಸ್ಥೆಗಳು ಆರಂಭದಲ್ಲಿ ಒಂದರಿಂದ ಮೂರು ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳುತ್ತವೆ. ನಮ್ಮ ಸೇವೆಯಿಂದ ಸಂತುಷ್ಟರಾದವರು  ಇನ್ನೂ ಮೂರು ವರ್ಷಗಳವರೆಗೆ ನಮ್ಮ ಸೇವೆ ವಿಸ್ತರಣೆಗೆ ಒಲವು ತೋರಿಸುತ್ತವೆ.  ಕೈಗಾರಿಕೆಗಳು ನಮ್ಮ ಸೇವೆ ಮೇಲೆ ಇಟ್ಟಿರುವ ದೃಢ ವಿಶ್ವಾಸ, ನಂಬಿಕೆ, ಬದಲಾದ ಕಾಲಕ್ಕೆ ತಕ್ಕಂತೆ ಸಂಸ್ಥೆಯು ಹೊಸತನ ಮೈಗೂಡಿಸಿಕೊಂಡಿರುವುದು ಉದ್ದಕ್ಕೂ ನಮ್ಮ ನಮ್ಮ ಕೈಹಿಡಿಯುತ್ತ ಬಂದಿದೆ’ ಎಂದು ಸುದರ್ಶನ್‌ ಹೇಳುತ್ತಾರೆ.

ಸಣ್ಣ, ಮಧ್ಯಮ (ಎಸ್‌ಎಂಇ) ಉದ್ದಿಮೆಗಳಿಂದ ಹಿಡಿದು ಬೃಹತ್‌ ಉದ್ದಿಮೆ ಸಂಸ್ಥೆಗಳೂ ಬೆಲ್‌ಫೆಸ್ಟ್‌ನ ಸೇವೆ ಪಡೆಯುತ್ತಿವೆ. ಪುದುಚೇರಿ, ಹುಬ್ಬಳ್ಳಿ, ಬೆಳಗಾವಿ, – ಇಲ್ಲೆಲ್ಲ ಸಂಸ್ಥೆಯ ಚಟುವಟಿಕೆಗಳು ಬೇರು ಬಿಟ್ಟಿವೆ.

‘ಪ್ರತಿಯೊಂದು ಸಂಸ್ಥೆಯ ಪೂರ್ವಾಪರ ಅದು ಸಾಗಬೇಕೆಂದಿರುವ ಭವಿಷ್ಯದ ಹಾದಿಯ ಸಮಗ್ರ  ಅಧ್ಯಯನ ನಡೆಸಿದ ನಂತರವೇ ಅಂತಹ ಸಂಸ್ಥೆಗಳಿಗೆ ಕೆಲಸ ಮಾಡಲು, ಅಲ್ಲಿಯ ಆಡಳಿತ ಮಂಡಳಿ ಜತೆ ಕೈಜೋಡಿಸಲು  ಬೆಲ್‌ಫಾಸ್ಟ್‌ ನಿರ್ಧಾರಕ್ಕೆ ಬರುತ್ತದೆ.

‘1995ರಲ್ಲಿ ಸಂಸ್ಥೆ ಆರಂಭಿಸಿದ್ದಾಗ ಎದುರಿಸಿದ ಸವಾಲುಗಳಿಗೆ ಹೋಲಿಸಿದರೆ  ಈಗ   ಸವಾಲುಗಳ ಸ್ವರೂಪ ಸಾಕಷ್ಟು ಭಿನ್ನವಾಗಿದೆ. ತಂತ್ರಜ್ಞಾನ, ಕಾಯ್ದೆ, ಸರ್ಕಾರಿ ನಿಯಮಗಳ ಬಗ್ಗೆ ನಾವು ಬೇರೆ ಸಂಸ್ಥೆಗಳಿಂದ ಮಾಹಿತಿ ಪಡೆಯುತ್ತಲೇ ಇರುತ್ತೇವೆ. ಇದು ನಮ್ಮ ವಹಿವಾಟು ಬೆಳೆಸಲು ಗಮನಾರ್ಹವಾಗಿ ನೆರವಾಗಿದೆ’ ಎಂದು ಸುದರ್ಶನ್‌ ಹೇಳುತ್ತಾರೆ.

ಕಾಲಕ್ಕೆ ತಕ್ಕಂತೆ ತಮ್ಮ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಇವರು ಸಾಕಷ್ಟು ಬದಲಾವಣೆಗಳನ್ನೂ ಅಳವಡಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಉದ್ದಿಮೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡು ಗಮನಾರ್ಹ ಪ್ರಮಾಣದಲ್ಲಿ ವಹಿವಾಟು ವಿಸ್ತರಿಸಲು ಸಾಧ್ಯವಾಗಿದೆ.

ಕಂಪನಿಗಳ ಬೇಡಿಕೆಗಳೂ ಬದಲಾಗಿವೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶಿಷ್ಟ ಪರಿಣತ ಸಾಧಿಸಿದವರಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಸಂಸ್ಥೆಯು ಅಂತಹ ಅಗತ್ಯವನ್ನು ಒದಗಿಸಿಕೊಡುತ್ತಿದೆ. ಕ್ಯಾಂಪಸ್‌ ಆಯ್ಕೆಯಲ್ಲಿಯೂ ಭಾಗವಹಿಸುತ್ತದೆ. ಉತ್ತರ ಕರ್ನಾಟಕದವರ ಬಗ್ಗೆ ಸುದರ್ಶನ ಅವರು ವಿಶೇಷ ಕಕ್ಕುಲಾತಿ ಹೊಂದಿದ್ದಾರೆ. ಇವರೆಲ್ಲ ಉತ್ತಮ ಅವಕಾಶಗಳಿಂದ ವಂಚಿತರಾದವರು. ಅವರಿಗೆ ತರಬೇತಿ, ಅವಕಾಶಗಳು ಸಿಕ್ಕರೆ ಅವರೂ ವೃತ್ತಿ ಮತ್ತು ಬದುಕಿನಲ್ಲಿ ಸಾಕಷ್ಟು ಮುಂದೆ ಸಾಗುತ್ತಾರೆ ಎನ್ನುವ ವಿಶ್ವಾಸ ಹೊಂದಿರುವ ಸುದರ್ಶನ್‌ , ಅವರಿಗಾಗಿ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸಿಕೊಡಲು ಆದ್ಯತೆ ನೀಡುತ್ತಿದ್ದಾರೆ.

  ಉತ್ತರ ಕರ್ನಾಟಕದಲ್ಲಿ ಅವಕಾಶಗಳು ಕಡಿಮೆ ಇವೆ. ಅಲ್ಲಿ ಮಾನವ ಸಂಪನ್ಮೂಲ ಲಭ್ಯತೆ ಸಾಕಷ್ಟು ಇದೆ. ನಗರವಾಸಿಗಳು ಒಂದು ನಿರ್ದಿಷ್ಟ ಹಂತದವರೆಗೆ ಬೆಳೆದಿರುತ್ತಾರೆ. ಅವರಿಗೆ ಅವಕಾಶಗಳೂ ಹೆಚ್ಚಿಗೆ ಇರುತ್ತವೆ. ಆದರೆ, ಹಿಂದುಳಿದ ಪ್ರದೇಶಗಳ ಜನರಿಗೆ ಇದೇ ಅವಕಾಶಗಳನ್ನು ಒದಗಿಸಿದರೆ ಅವರೂ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎನ್ನುವುದು ಅವರ ಆಶಯವಾಗಿದೆ.

‘ಬಾಗಲಕೋಟೆ, ಹುಬ್ಬಳ್ಳಿ, ರಾಯಚೂರು, ಗೋವಾ, ಕಾರವಾರ  ಇಂತಹ ಕಡೆ  ಉದ್ದಿಮೆಗಳಲ್ಲಿ ಉದ್ಯೋಗ ಅವಕಾಶಗಳು ಸಿಗುವುದು ಕಡಿಮೆ. ಇಲ್ಲಿನ ಜನರಿಗೆ ಉದ್ಯೋಗ ಮಾಡುವ ಅನಿವಾರ್ಯತೆ ಇದೆ. ಕಡಿಮೆ ಸಂಬಳಕ್ಕೆ ಸಿಗುತ್ತಾರೆ. ಕೆಲವರು ಈ ಭಾಗದವರನ್ನು ಕರೆತಂದು ಹಲವು ಬಗೆಗಳಲ್ಲಿ ಶೋಷಣೆ ಮಾಡುತ್ತಾರೆ. ಬೆಲ್‌ಫಾಸ್ಟ್‌ ಅಂತಹ ಕೃತ್ಯಗಳಿಂದ ಗಾವುದ ದೂರ ಇದೆ’ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಬೆಲ್‌ಫಾಸ್ಟ್‌ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಐಎಸ್‌ಒ (ISO 9001:2015) ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ. ಸಿಬ್ಬಂದಿ ಸೇವೆ ಒದಗಿಸುವ   ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಸಂಸ್ಥೆಯಾಗಿದೆ. ಇದು ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಎಆ್ಯಂಡ್‌ಬಿ ಅಸೋಸಿಯೇಟ್ಸ್‌ನ ಅಂಗ ಸಂಸ್ಥೆಯಾಗಿದೆ.

ಉದ್ದಿಮೆ ಸಂಸ್ಥೆಗಳು ತಮ್ಮ ಸಿಬ್ಬಂದಿ ನಿರ್ವಹಣೆಯ ಹೊಣೆಯನ್ನು ಬೆಲ್‌ಫಾಸ್ಟ್‌ಗೆ ಒಪ್ಪಿಸಿ, ಮುಖ್ಯ ವಹಿವಾಟಿನತ್ತ ಹೆಚ್ಚು ಗಮನ ಹರಿಸ
ಬಹುದಾಗಿದೆ. ಇದರಿಂದ ಸಂಸ್ಥೆಗಳಿಗೆ ಹಣ, ಸಮಯ ಮತ್ತು ಸಂಪನ್ಮೂಲ ಉಳಿತಾಯವಾಗಲಿದೆ. ಕೆಲ ಸಂಸ್ಥೆಗಳಿಗೆ ಕಾಯಂ ಸಿಬ್ಬಂದಿ ಬೇಕಾಗುತ್ತಾರೆ. ಇನ್ನೂ ಕೆಲ ಕಂಪೆನಿಗಳಿಗೆ ತಾತ್ಪೂರ್ತಿಕ ನೆಲೆಯಲ್ಲಿ ಉದ್ಯೋಗಿಗಳು ಬೇಕಾಗುತ್ತಾರೆ. ಇಂತಹ ಎಲ್ಲ ಬಗೆಯ ಅಗತ್ಯಗಳನ್ನೂ ಬೆಲ್‌ಫಾಸ್ಟ್‌ ಒದಗಿಸುತ್ತದೆ. ಅಗತ್ಯ ಇದ್ದವರಿಗೆ ಗುತ್ತಿಗೆ ನೌಕರರನ್ನು ಒದಗಿಸುವ ಸಂಸ್ಥೆ, ಅವರು ಇನ್ನೊಂದೆಡೆ ಶಾಶ್ವತವಾಗಿ ನೆಲೆಗೊಳ್ಳಲೂ ನೆರವಾಗುತ್ತಿದೆ.

‘ವಹಿವಾಟಿನ ನೈತಿಕ ತತ್ವಗಳಿಗೆ ಬದ್ಧವಾಗಿರುವ ಮತ್ತು ಗುಣಮಟ್ಟದ ಜತೆ ಯಾವತ್ತೂ ರಾಜಿ ಮಾಡಿಕೊಳ್ಳದಿರುವುದೇ ಸಂಸ್ಥೆಯ ಬೆಳವಣಿಗೆಯ ಮುಖ್ಯ ಕಾರಣವಾಗಿದೆ. ಅನೇಕ ವೃತ್ತಿಯಲ್ಲಿ ತೊಡಗಿರುವವರಿಗೆ ಹಲವಾರು ಶಿಷ್ಟಾಚಾರಗಳನ್ನೂ ಕಲಿಸುವ ಅಗತ್ಯ ಇದೆ. ವಹಿವಾಟಿನ ಎಲ್ಲ ರಂಗದಲ್ಲಿಯೂ ತರಬೇತಿ ಅಗತ್ಯ ಇದೆ. ಇದರಿಂದ ಸಿಬ್ಬಂದಿಯ ಉತ್ಪಾದನೆ ಹೆಚ್ಚಳಗೊಂಡು ಉದ್ದಿಮೆ ಸಂಸ್ಥೆಗೆ  ಹಲವಾರು ಪ್ರಯೋಜನಗಳು ದೊರೆಯುತ್ತವೆ’ ಎಂದೂ ಸುದರ್ಶನ ಅವರು ಅಭಿಪ್ರಾಯಪಡುತ್ತಾರೆ.   ಮಾಹಿತಿಗೆ bellfast.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT