ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿವನದಲ್ಲಿ ನೀರಾವರಿ ಹೋರಾಟಗಾರರ ಧರಣಿ

ನೀರಾವರಿ ಯೋಜನೆ ಖರ್ಚು ವೆಚ್ಚದ ಶ್ವೇತಪತ್ರಕ್ಕೆ ಒತ್ತಾಯ
Last Updated 3 ಅಕ್ಟೋಬರ್ 2017, 9:32 IST
ಅಕ್ಷರ ಗಾತ್ರ

ಕೋಲಾರ: ಅವಿಭಜಿತ ಕೋಲಾರ ಜಿಲ್ಲೆಯ ನೀರಾವರಿ ಯೋಜನೆಗಳ ಖರ್ಚು ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನಗರದ ಗಾಂಧಿವನದಲ್ಲಿ ಸೋಮವಾರ ಧರಣಿ ನಡೆಸಿದರು.

‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರೂಪಿಸಿರುವ ಎತ್ತಿನಹೊಳೆ, ಕೆ.ಸಿ ವ್ಯಾಲಿ ಯೋಜನೆಯ ಕಾಮಗಾರಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಕಾಮಗಾರಿಯೇ ನಡೆಯದಿದ್ದರೂ ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡಲಾಗಿದೆ’ ಎಂದು ಆರೋಪಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ‘ನೀರಾವರಿ ಯೋಜನೆಗಳ ವಿಚಾರದಲ್ಲಿ ಮೌನವಾಗಿರುವ ಸರ್ಕಾರ ಹೋರಾಟಗಾರರ ತಾಳ್ಮೆ ಪರೀಕ್ಷಿಸುತ್ತಿದೆ. ಯೋಜನೆಗಳ ವಿಚಾರವಾಗಿ ಯಾವುದೇ ಮಾಹಿತಿ ನೀಡದೆ ಅವಳಿ ಜಿಲ್ಲೆಗಳ ಜನರು ಹಾಗೂ ಹೋರಾಟಗಾರರನ್ನು ಕತ್ತಲಲ್ಲಿಟ್ಟು ದಿಕ್ಕು ತಪ್ಪಿಸುತ್ತಿದೆ’ ಎಂದು ಹೇಳಿದರು.

ಯೋಜನೆ ಅವೈಜ್ಞಾನಿಕ: ‘ಪರಮಶಿವಯ್ಯ ವರದಿಯನ್ನು ಮೂಲೆಗುಂಪು ಮಾಡಿರುವ ಸರ್ಕಾರ ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸಲು ರೂಪಿಸಿರುವ ಎತ್ತಿನ ಹೊಳೆ ಯೋಜನೆಯು ಅವೈಜ್ಞಾನಿಕವಾಗಿದೆ. ಎತ್ತಿನ ಹೊಳೆಯಿಂದ ಜಿಲ್ಲೆಗೆ ನೀರು ಬರುವುದಿಲ್ಲ ಎಂಬ ಮಾಹಿತಿ ಗೊತ್ತಿದ್ದರೂ ಯೋಜನೆ ಕೈಗೆತ್ತಿಕೊಂಡಿದೆ. ಇನ್ನು ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವುದು ಅಪಾಯಕಾರಿ. ಆದರೂ ಸರ್ಕಾರ ಈ ದುಸ್ಸಾಹಸಕ್ಕೆ ಕೈಹಾಕಿದೆ’ ಎಂದು ವಾಗ್ದಾಳಿ ನಡೆಸಿದರು.

‘ನೀರಾವರಿ ಯೋಜನೆಗಳ ತಾಂತ್ರಿಕ ಸಮಸ್ಯೆ ಪರಿಹಾರಕ್ಕಾಗಿ ತಜ್ಞರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ರಚಿಸುವಂತೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ತುಟಿ ಬಿಚ್ಚದೆ ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಸತ್ಯಾಂಶ ಮುಚ್ಚಿಟ್ಟು ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ’ ಎಂದು ದೂರಿದರು.

ಯಾಮಾರಿಸುತ್ತಿದೆ: ‘ಎತ್ತಿನ ಹೊಳೆ ಯೋಜನೆಯಲ್ಲಿ ನೀರಿನ ಲಭ್ಯತೆ, ಕೆ.ಸಿ ವ್ಯಾಲಿ ಮತ್ತು ಹೆಬ್ಬಾಳ ವ್ಯಾಲಿ ಯೋಜನೆ ಮೂಲಕ ಕೆರೆಗಳಿಗೆ ಹರಿಸುವ ನೀರು ಶುದ್ಧವೇ ಎಂಬ ಬಗ್ಗೆ ಸೆ.30ರೊಳಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ನೀರಿನ ಸಮಸ್ಯೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಜನರನ್ನು ಯಾಮಾರಿಸುತ್ತಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಂಟಿ ತಜ್ಞರ ಸಮಿತಿ ರಚಿಸಿ ಸತ್ಯ ಏನೆಂಬುದನ್ನು ಜನರಿಗೆ ತಿಳಿಸಬೇಕು. ನಮ್ಮ ಆರೋಪ ಸುಳ್ಳಾಗಿದ್ದಲ್ಲಿ ವಿಧಾನಸೌಧದ ಮುಂದೆ ನೇಣು ಹಾಕಿ ಎಂಬ ಸವಾಲನ್ನು ಸರ್ಕಾರ ಸ್ವೀಕರಿಸಿಲ್ಲ. ಬದಲಿಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ. ಪ್ರತಿಪಕ್ಷಗಳು ಈ ಬಗ್ಗೆ ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.

ಸಮಿತಿ ಸಂಚಾಲಕರಾದ ನಾರಾಯಣಸ್ವಾಮಿ, ದೇವರಾಜ್, ಪ್ರಭಾಕರ್, ರಂಗಪ್ಪ, ವಿ.ಕೆ.ರಾಜೇಶ್, ರವೀಂದ್ರ, ವೆಂಕಟೇಶ್, ಚಂದ್ರಕಾಂತ್, ಪುಟ್ಟರಾಜು, ರಾಜೇಶ್, ಮಂಜುನಾಥ್, ವೆಂಕಟಕೃಷ್ಣಪ್ಪ, ಕಾರ್ತಿಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT