ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕುಸ್ಥಾಪನೆಗಷ್ಟೇ ಸೀಮಿತವಾದ ರಸ್ತೆ ಅಭಿವೃದ್ಧಿ

ಸಾಧಾರಣ ಮಳೆಗೆ ಹದಗೆಟ್ಟು ಕೆಸರುಮಯವಾದ ನಗರದ ರಸ್ತೆಗಳು
Last Updated 3 ಅಕ್ಟೋಬರ್ 2017, 9:47 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ರಸ್ತೆ ಅಭಿವೃದ್ಧಿ ಕೇವಲ ಶಂಕುಸ್ಥಾಪನೆ, ಪ್ರಚಾರಕ್ಕಷ್ಟೇ ಸೀಮಿತವಾಗಿಬಿಟ್ಟಿದೆ. ಒಂದೆರಡು ದಿನಗಳಿಂದ ಸುರಿದ ಸಾಧಾರಣ ಮಳೆಗೇ ರಸ್ತೆಗಳು ಅಕ್ಷರಶಃ ಕೆಸರುಗದ್ದೆಗಳಾಗಿಬಿಟ್ಟಿವೆ.

ನಗರದಲ್ಲಿ 24‍‍X7 ಕುಡಿಯುವ ನೀರು ಪೂರೈಕೆ ಯೋಜನೆಯ ಪೈಪ್‌ಲೈನ್‌ಗಾಗಿ ರಸ್ತೆಗಳನ್ನು ಅಗೆದ ನಂತರ ಅವುಗಳ ಮರು ನಿರ್ಮಾಣ ಆಗಿಲ್ಲ. ಸಿಂಪಿಲಿಂಗಣ್ಣ ರಸ್ತೆ, ಗಡಿಯಾರ ಕಂಬದಿಂದ ಮೆಹಬೂಬ್‌ನಗರ ವೃತ್ತದವರೆಗಿನ ರಸ್ತೆ (ಸಿಂಧೋಗಿ ರಸ್ತೆ) ಸಂಚರಿಸಲಾಗದಷ್ಟು ಕೆಟ್ಟುಹೋಗಿವೆ. ಇದೇ ರಸ್ತೆ ಮುಂದೆ ಚತುಷ್ಪಥವಾಗಿ ಪರಿವರ್ತನೆಯ ಹಂತದಲ್ಲಿದೆ. ಆದರೆ, ನಗರ ಸಂಪರ್ಕಿಸುವ ಈ ರಸ್ತೆಯ ಗತಿ ದೇವರಿಗೇ ಪ್ರೀತಿ ಎಂದು ಅಕ್ಕಪಕ್ಕದ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಅಬಕಾರಿ ಗೋದಾಮು, ನಿರ್ಮಿತಿ ಕೇಂದ್ರ, ಪ್ರತಿಷ್ಠಿತ ವಸತಿಗೃಹ, ಜೈನಮಂದಿರಗಳು, ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಏಕೈಕ ರಸ್ತೆಯಲ್ಲಿ ಟಾರು ಎದ್ದಿದೆ. ವಾಹನ ಸಂಚಾರದಿಂದ ರಸ್ತೆಯ ಮೇಲಿನ ಕೆಸರು ದ್ವಿಚಕ್ರ ವಾಹನ ಸವಾರರ, ಪಾದಚಾರಿಗಳ ಮೇಲೆ ಸಿಡಿಯುತ್ತಿದೆ. ಈ ಸಮಸ್ಯೆಯಿಂದ ವಾಹನಗಳಿಗೆ ಹಾನಿ, ಜನರ ನಡುವೆ ಜಗಳ, ಕೊಚ್ಚೆಯಲ್ಲಿ ವಾಹನಗಳು ಸಿಲುಕುವುದು ನಿತ್ಯದ ನೋಟ.

ಇತ್ತ ಸಿಂಪಿ ಲಿಂಗಣ್ಣ ರಸ್ತೆ (ಹಸನ್‌ ರಸ್ತೆ)ಯ ಪರಿಸ್ಥಿತಿಯಂತೂ ಇನ್ನೂ ಶೋಚನೀಯ. ಈ ರಸ್ತೆ ಮರು ನಿರ್ಮಾಣಕ್ಕೆ ಸೆ.12ರಂದು ಭರ್ಜರಿಯಾಗಿ ಶಂಕುಸ್ಥಾಪನೆ ನಡೆದಿದೆ. ಈ ಕಾರ್ಯಕ್ರಮ ಅಷ್ಟಕ್ಕೇ ಸೀಮಿತವಾಗಿದೆ. ಕಾಮಗಾರಿ ಆರಂಭವಾಗಲೇ ಇಲ್ಲ. ಜನರು ಸಮಸ್ಯೆ ಎದುರಿಸುವುದು ನಿಂತಿಲ್ಲ. ರೈಲು ನಿಲ್ದಾಣ ರಸ್ತೆಯೂ ಕೆಸರುಮಯ.

ವಿವೇಕಾನಂದ ಶಾಲೆಯ ರಸ್ತೆಯೂ ಅಷ್ಟೇ. ಕಾಂಕ್ರಿಟ್‌ ಕಾಮಗಾರಿ ಮಾಡುವ ಭರವಸೆಗಳು ಹರಿದುಬಂದಿವೆ. ಆದರೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಿಲ್ಲ. ಮುಖ್ಯ ರಸ್ತೆಯ ಪರಿಸ್ಥಿತಿಯೂ ಭಿನ್ನವೇನಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಹಿನ್ನೆಲೆಯಲ್ಲಿ ಕೆಲವೆಡೆ ತೇಪೆ ಹಾಕಲಾಗಿತ್ತು. ಅದು ಮತ್ತೆ ಹಳೇ ಪರಿಸ್ಥಿತಿಗೆ ಬಂದಿದೆ.

ಮೂಲಸೌಕರ್ಯ ಜನರ ಅತಿಮುಖ್ಯ ಬೇಡಿಕೆ. ಕೊನೇ ಪಕ್ಷ ಆಡಳಿತ ವ್ಯವಸ್ಥೆ ರಸ್ತೆಗಳನ್ನಾದರೂ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಲಿ ಎಂದು ನಾಗರಿಕರು ನಿರೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ನಗರಸಭೆ ಅಧ್ಯಕ್ಷ  ಮಹೇಂದ್ರ ಛೋಪ್ರಾ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

***
ಹೊಂದಾಣಿಕೆ ಸಮಸ್ಯೆ

15 ಕಿಲೋಮೀಟರ್‌ ವ್ಯಾಪ್ತಿಯ ನಗರದೊಳಗೆ ಒಟ್ಟು  175 ಕಿಲೋಮೀಟರ್‌ ಉದ್ದದ ರಸ್ತೆ ಇದೆ. ಹಂತಹಂತವಾಗಿಯಾದರೂ ಕಾಮಗಾರಿ ಕೈಗೆತ್ತಿಕೊಂಡಿದ್ದರೆ ಇದುವರೆಗೆ ವ್ಯವಸ್ಥಿತ ನಿರ್ಮಾಣಗಳು ಮುಗಿದುಬಿಡುತ್ತಿದ್ದವು. ಕುಡಿಯುವ ನೀರು ಪೂರೈಕೆ, ಒಳಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವ ಏಜೆನ್ಸಿಗಳು ಬೇರೆ ಬೇರೆ. ಇವರ ನಡುವೆ ಪರಸ್ಪರ ಹೊಂದಾಣಿಕೆ ಕೊರತೆ ಇದೆ. ಒಬ್ಬರು ರಸ್ತೆ ನಿರ್ಮಿಸುತ್ತಿದ್ದಂತೆಯೇ ಮತ್ತೆ ಉಳಿದವರು ಅಗೆಯುತ್ತಲೇ ಬರುತ್ತಾರೆ. ಹೀಗಾದಾಗ ವ್ಯವಸ್ಥಿತ ಕಾಮಗಾರಿ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಹಿರಿಯ ನಾಗರಿಕ ಗೋವಿಂದರಾವ್‌.

***
ರಸ್ತೆ ಅವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ ಸಾಕಾಗಿದೆ. ಮುಂದೆ ಇಲ್ಲೇ ಡರ್ಟ್‌ ಟ್ರ್ಯಾಕ್‌ ಮೋಟಾರ್‌ ರೇಸ್‌ (ಬೈಕ್‌, ಕಾರ್‌ ರೇಸ್‌) ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ
ಪ್ರವೀಣ, ಸ್ಥಳೀಯ ನಿವಾಸಿ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT