ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಚಿಂತನೆಯ ರಾಜಕಾರಣ ಬೇಕಿದೆ

ಪಾಂಡವಪುರ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಬೋರೇಗೌಡ ಅಭಿಮತ
Last Updated 3 ಅಕ್ಟೋಬರ್ 2017, 9:54 IST
ಅಕ್ಷರ ಗಾತ್ರ

ಪಾಂಡವಪುರ: ‘ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವ ಎಲ್ಲ ರಾಜಕೀಯ ಪಕ್ಷಗಳನ್ನು ವಿಸರ್ಜಿಸಬೇಕು. ದೇಶದಲ್ಲಿ ಗಾಂಧಿ ಚಿಂತನೆಯ ಹೊಸ ದಿಕ್ಕಿನ ರಾಜಕಾರಣವನ್ನು ಹುಟ್ಟುಹಾಕಬೇಕಿದೆ’ ಎಂದು ಸಾಹಿತಿ ಬೋರೇಗೌಡ ಚಿಕ್ಕಮರಳಿ ಅಭಿಪ್ರಾಯಪಟ್ಟರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧಿ ಬಯಸಿದ್ದು ಪ್ರಭುತ್ವದ ರಾಜಕಾರಣವನ್ನಲ್ಲ, ಪ್ರಜಾರಾಜ್ಯದ ರಾಜಕಾರಣವನ್ನ. ಪರಧರ್ಮವನ್ನು ಅರಿಯದವನು ಸ್ವಧರ್ಮವನ್ನು ಅರ್ಥಮಾಡಿಕೊಳ್ಳಲಾರ ಎಂಬ ಗಾಂಧೀಜಿಯ ಮಾತುಗಳನ್ನು ಸ್ವಧರ್ಮದ ಬಗ್ಗೆ ವೀರಾವೇಶದಿಂದ ಮಾತನಾಡುವವರು ಮೊದಲು ಅರಿಯಬೇಕಾಗಿದೆ’ ಎಂದರು.

‘ಜಾಗತಿಕಮಟ್ಟದ ಆರ್ಥಿಕ ಬದಲಾವಣೆಗಳು ಭೋಗ ಜೀವನದತ್ತ ನಮ್ಮನ್ನು ಆಕರ್ಷಿಸಿವೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗುವ ಶಿಕ್ಷಣವನ್ನು ವಿಶ್ವವಿದ್ಯಾಲಯಗಳು ನೀಡುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಗ್ರಾಮಗಳು ತಮ್ಮ ಅಸ್ವಿತ್ವವನ್ನು ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯವರ ಜೀವನ ಶಿಕ್ಷಣ, ಗುಡಿಕೈಗಾರಿಕೆ, ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ನುಚ್ಚು ನೂರಾಗಿವೆ. ರಾಜಕೀಯ ಇಚ್ಛಾಶಕ್ತಿ ಇಲ್ಲವಾಗಿದೆ’ ಎಂದು ಹೇಳಿದರು.

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘ದೇಶವನ್ನು ಗುಲಾಮಗಿರಿಯಿಂದ ಬಿಡಿಸಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿ ಮತ್ತು ದೇಶದೊಳಗಿದ್ದ ‘ಗುಲಾಮಗಿರಿಯನ್ನು ಬಿಡುಗಡೆಗೊಳಿಸಲು ಹೋರಾಡಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಆಧುನಿಕ ಭಾರತದ ನಿರ್ಮಾಪಕರು. ಲಾಲ್‌ಬಹದ್ದೂರ್ ಶಾಸ್ತ್ರಿಯಂತಹ ಪ್ರಧಾನಿ ದೇಶದಲ್ಲಿ ಮತ್ತೊಬ್ಬರಿಲ್ಲ. ಅಂತಹ ನಾಯಕರ ತಲೆಮಾರನ್ನು ಇಂದು ನೆನಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಆದರ್ಶ ವ್ಯಕ್ತಿಗಳನ್ನು ಕೇವಲ ಪ್ರತಿಮೆ ಮಾಡಿ ನಿಲ್ಲಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ, ಪುರಸಭೆ ಅಧ್ಯಕ್ಷೆ ತಾಯಮ್ಮ ಎ.ಅಣ್ಣಯ್ಯ,
ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಸೂಯಾ, ಶಾಂತಲಾ, ತಾ.ಪಂ. ಸದಸ್ಯರಾದ ಮಂಗಳಾ, ನಿಂಗೇಗೌಡ, ರಾಮೇಗೌಡ, ಅರಳಕುಪ್ಪೆ ನವೀನ್‌, ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT