ಶನಿವಾರ, ಸೆಪ್ಟೆಂಬರ್ 21, 2019
24 °C

ಸಾಮಾನ್ಯರು ಮಹಾತ್ಮರಾಗುವುದು ಸುಲಭವಲ್ಲ: ಸುಧಾರಾಣಿ

Published:
Updated:

ಮಂಗಳೂರು: ಸಾಮಾನ್ಯರಾಗಿದ್ದವರು ಮಹಾತ್ಮರಾಗುವುದು ಸುಲಭವಲ್ಲ. ಮನುಷ್ಯ ಮತ್ತು ದೇವರ ವೈಯುಕ್ತಿಕ ಸಂಬಂಧವನ್ನೇ ಧರ್ಮ ಎಂದು ಮಹಾತ್ಮ ಗಾಂಧಿ ಹೇಳಿದವರು. ಆದರೆ ಇಂದು ನಡೆಯುತ್ತಿರುವ ಅಧಃ ಪತನ, ಸಂಕುಚಿತ ಮನಸ್ಸುಗಳಿಗೆ ಇದು ಅರ್ಥವಾಗುವುದಿಲ್ಲ ಎಂದು ಆಳ್ವಾಸ್‌ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಹೇಳಿದರು.

ಮಹಾತ್ಮಗಾಂಧಿ ಪ್ರತಿಷ್ಠಾನ ವತಿಯಿಂದ ನಗರದ ಟಾಗೋರ್‌ ಪಾರ್ಕ್‌ನಲ್ಲಿ ನಡೆದ ಮಹಾತ್ಮಗಾಂಧಿ 150ರ ಪೂರ್ವಭಾವಿ ಸಂಭ್ರಮದಲ್ಲಿ 147ನೇ ಜನ್ಮದಿನಾಚರಣೆ ಹಾಗೂ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವ 2017ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾರ್ಟಿನ್‌ ಲೂಥರ್‌ ಕಿಂಗ್‌ ಗಾಂಧಿಯ ತತ್ವಾದರ್ಶವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರು ಆದರೆ ಭಾರತೀಯ ಮನಸುಗಳಾದ ನಮಗೆ ಅದನ್ನು ಅಳವಡಿಸಿಕೊಳ್ಳಲಾಗಲಿಲ್ಲ. ಇಂದಿನ ಹೊಡಿಬಡಿ ಸಂಸ್ಕೃತಿ, ಕ್ರೌರ್ಯದ ದಿನಗಳಲ್ಲಿ ಅಹಿಂಸೆ ಎಲ್ಲಿದೆ? ಅಂದಿನ ರಕ್ತಪಾತದ ಸಮಯದಲ್ಲೇ ಗಾಂಧೀಜಿ ಅಹಿಂಸೆಯನ್ನೇ ಉಪ ಯೋಗಿಸಿಕೊಂಡು ಪ್ರತಿಭಟನೆ ನಡೆಸಿದರು. ತನ್ನ ಎರಡು ತುಂಡು ಉಡುಗೆಯಲ್ಲಿ ಇಡೀ ಭಾರತವನ್ನು ಗೆದ್ದು ಬಿಟ್ಟರು.

ಗಾಂಧೀಜಿ ಯಾವಾಗಲೂ ಸ್ಪೋಟ ಸ್ವರೂಪಿಯಲ್ಲ, ಬದಲಿಗೆ ಸಂತ ಸ್ವರೂಪಿಯಾಗಿದ್ದರು. ಇಂದಿನ ಮನ್‌ ಕೀ ಬಾತ್‌, ವಾಂಗೀ ಬಾತ್‌ ನಡುವೆ ಗಾಂಧೀ ಮಾತು ನಮಗೆ ನೆನಪಿಗೆ ಬರುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸತ್ಯ, ಅಹಿಂಸಾ ಹೋರಾಟವನ್ನು ನಮ್ಮ ಮುಂದಿನ ತಲೆಮಾರಿಗೆ ತಲುಪಿಸುವುದು ನಮ್ಮ ಆದ್ಯ ಕರ್ತವ್ಯ. ಗಾಂಧೀಜಿಗೆ ದೇಶ ಮತ್ತು ಮಕ್ಕಳು ಅತ್ಯಂತ ಪ್ರಿಯವಾದ ವಿಷಯಗಳಾಗಿದ್ದವು. ಅವುಗಳನ್ನು ಅವರು ಪ್ರೀತಿಸುತ್ತಿದ್ದರು. ಇಂದು ಗಾಂಧೀಜಿಯನ್ನು ನೋಡುವ ನಮ್ಮ ಮನಸ್ಸುಗಳಿಗೆ ಬಹು ಅಂಗಾಂಗ ವೈಫಲ್ಯವಾಗಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ‘ಗಾಂಧೀಜಿ ಅಹಿಂಸೆ, ಅಸಹಕಾರ ಚಳುವಳಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರು ಆಸೆ ಪಟ್ಟಿದ್ದರೆ ದೇಶದ ರಾಷ್ಟ್ರಾಧ್ಯಕ್ಷ ಅಥವಾ ಪ್ರಧಾನಿಯಾಗಬಹುದಿತ್ತು. ಆದರೆ ಸ್ವಾತಂತ್ರ್ಯ ಸಿಕ್ಕ ದಿನದಂದು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರುತ್ತಿದ್ದರೆ ಇವರು ದೂರದ ಪಶ್ಚಿಮ ಬಂಗಾಳದಲ್ಲಿದ್ದರು’ ಎಂದು ನೆನಪಿಸಿಕೊಂಡರು.

ವಾರ್ಷಿಕ ಗೌರವ: ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವವನ್ನು ಕಳೆದ 12 ವರ್ಷಗಳಿಂದ ಪ್ಲಾಸ್ಟಿಕ್‌ ತ್ಯಾಜ್ಯದ ಅಪಾಯ ಮತ್ತು ಗ್ರಾಮೀಣ ಬದುಕಿಗೆ ಪ್ರೇರಕಿಯಾಗಿ ತನ್ನ ಯಶೋಗಾಥೆಯ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಗಮನ ಸೆಳೆದ ಪ್ರೇಮಾ ಅವರಿಗೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಮೂಡುಶೆಡ್ಡೆಯಲ್ಲಿರುವ ಕ್ಷಯ ರೋಗ ನಿವಾರಣಾ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳಿಗೆ ಫಲಾಹಾರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆಯ ಸ್ಥಳೀಯ ಸದಸ್ಯ ಎ.ಸಿ ವಿನಯರಾಜ್‌, ಪ್ರತಿಷ್ಠಾನದ ಉಪಾಧ್ಯಕ್ಷರುಗಳಾದ ಎಂ. ಸೀತಾರಾಮ ಶೆಟ್ಟಿ, ಬಿ.ಪ್ರಭಾಕರ ಶ್ರೀಯಾನ್‌, ಕಾರ್ಯದರ್ಶಿ ಇಸ್ಮಾಯಿಲ್‌, ಕೋಶಾಧಿಕಾರಿ ಪಿ.ಸದಾನಂದ, ಹೆರಾಲ್ಡ್‌ ಡಿ’ಸೋಜ ಹಾಗೂ ಪ್ರೇಮ್‌ಚಂದ್‌ ಇದ್ದರು.

Post Comments (+)