ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವನಾತ್ಮಕ ಗಾಂಧಿ’ ದೇಶದ ಅಗತ್ಯ

ಪುತ್ತೂರು: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಡಾ. ನರೇಂದ್ರ ರೈ
Last Updated 3 ಅಕ್ಟೋಬರ್ 2017, 10:09 IST
ಅಕ್ಷರ ಗಾತ್ರ

ಪುತ್ತೂರು: ಅಹಿಂಸಾ ಮಾರ್ಗದ ಮೂಲಕ ಗಾಂಧಿ ಬಯಸಿದ್ದ ಸಾಮಾಜಿಕ ವ್ಯವಸ್ಥೆ ಇಂದು ರಾದ್ಧಾಂತದ ಸ್ಥಿತಿಗೆ ತಲುಪಿದೆ. ಈ ದೇಶದ ಜನತೆಗೆ ಬೇಕಾಗಿದ್ದ ‘ಭಾವನಾತ್ಮಕ ಗಾಂಧಿ’ ಮೊನ್ನೆ ಮೊನ್ನೆಯವರೆಗೂ ಬದುಕಿದ್ದರು. ನಮಗೆ ಬೇಕಾಗಿರುವುದು ಕೇವಲ ಬಾಯಿ ಗಾಂಧಿಯಲ್ಲ. ತತ್ವ ಆದರ್ಶ ಸಹಿತವಾದ ಗಾಂಧಿ. ಆದರೆ, ಇಂದು ನಾವು ಎಲ್ಲವೂ ಅಳಿದ ಮೇಲೆ ಉಳಿದ ಗಾಂಧಿ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.

ಪುತ್ತೂರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುರಭವನದಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಮತ್ತು ಜಾಗತಿಕ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕೇರಳದ ವೈಕಂ ಗಾಂಧಿ, ಶಾಂತಿನಿಕೇತನದ ಗಾಂಧಿ ಹಾಗೂ ಬನಾರಸ್‌ನ ಗಾಂಧಿ, ಈ ಮೂರು ಗಾಂಧಿಗಳ ದೃಷ್ಟಿಕೋನ ಈ ನಾಡಿಗೆ ಇಂದು ಅಗತ್ಯವಾಗಿದೆ. ಗಾಂಧೀಜಿ ಕಂಡ ಗ್ರಾಮ ಭಾರತವನ್ನು ಮತ್ತೆ ಕಟ್ಟುವ ಮೂಲಕ ಗಾಂಧಿ ಆದರ್ಶಗಳು ನಮ್ಮದಾಗಬೇಕಿದೆ. ಶಿಕ್ಷಣದ ಅರ್ಥ ರೈಫಲ್, ಬಂದೂಕು ಹಿಡಿಯುವ ಚಿಂತನೆ ಹುಟ್ಟುಹಾಕುವ ಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ಬದುಕಿದ್ದರೆ, ನಿಜಕ್ಕೂ ನೋವು ಅನುಭವಿಸುತ್ತಿದ್ದರು. ಅಂತಹ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ. ದೇಶಕ್ಕಾಗಿ ದುಡಿದ ಗಾಂಧಿ, ತಮ್ಮದೆಲ್ಲವನ್ನೂ ತ್ಯಾಗ ಮಾಡುವ ಮೂಲಕ ವಿಶ್ವಮಾನ್ಯರಾಗಿ ಉಳಿದರು. ಅವರ ಆದರ್ಶ ತತ್ವಗಳನ್ನು ನಾವು ಮರೆತು, ಇದೀಗ ಸಾಮಾಜಿಕ ದುರಂತಗಳಿಗೆ ಕಾರಣವಾಗುತ್ತಿದ್ದೇವೆ. ಗಾಂಧಿ ಕಂಡ ರಾಮರಾಜ್ಯದ ಕನಸು ಮತ್ತೆ ಜೀವಂತಿಕೆ ಪಡೆದುಕೊಳ್ಳಬೇಕಾದರೆ ಯುವಜನತೆ ಗಾಂಧಿ ಮಾರ್ಗ ಅನುಸರಿಸಿ ಹೆಜ್ಜೆ ಇಡಬೇಕಾಗಿದೆ ಎಂದರು.

ಉದ್ಘಾಟಿಸಿದ ಪುತ್ತೂರು ಉಪವಿಭಾಗಾಧಿಕಾರಿ ಡಾ.ರಘು ನಂದನ್ ಮೂರ್ತಿ ಮಾತನಾಡಿ, ಯುವಜನತೆ ತಮ್ಮ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಯುವ ಪೀಳಿಗೆಯಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚಾಗಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ನಗರಸಭಾ ಆಯುಕ್ತೆ ರೂಪಾ ಶೆಟ್ಟಿ ಭಾಗವಹಿಸಿದ್ದರು. ತಹಶೀಲ್ದಾರ್ ಅನಂತಶಂಕರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ವಂದಿಸಿದರು. ತಾಲ್ಲೂಕು ಕಚೇರಿ ಸಿಬ್ಬಂದಿ ನಾಗೇಶ್ ನಿರೂಪಿಸಿದರು. ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲು, ಸಿಬ್ಬಂದಿ ಬಾಬು ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT