ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ರಂಗಮಂದಿರ ಕಾಮಗಾರಿ

ಮಿನಿ ವಿಧಾನಸೌಧದ ಎದುರು ರಂಗಾಸಕ್ತರ ಪ್ರತಿಭಟನೆ
Last Updated 3 ಅಕ್ಟೋಬರ್ 2017, 10:15 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಸುಕಾಲಪೇಟೆ ರಸ್ತೆಯಲ್ಲಿ ನನೆಗುದಿಗೆ ಬಿದ್ದಿರುವ ರಂಗಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಬೇಕು ಎಂದು ಒತ್ತಾಯಿಸಿ  ಸೋಮವಾರ ಸಮುದಾಯ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಇಲ್ಲಿನ ಮಿನಿವಿಧಾನಸೌಧದ ಎದುರು ಬಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಆಗಸ್ಟ್ 15, 2011 ರಲ್ಲಿ ₹1.34 ಕೋಟಿ ವೆಚ್ಚದಲ್ಲಿ ರಂಗಮಂದಿರ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಾರಂಭದಲ್ಲಿ ಚುರುಕಾಗಿ ನಡೆದಿದ್ದ ಕಾಮಗಾರಿ ಆನಂತರ ಆಮೆಗತಿಗೆ ಬಂದು ಸ್ಥಗಿತಗೊಂಡು ಇಲ್ಲಿಗೆ ಐದಾರು ವರ್ಷಗಳು ಗತಿಸಿವೆ. ಈಗಾಗಲೇ ರಂಗಮಂದಿರ ಸ್ಥಳವು ಕೊಳಚೆ ಪ್ರದೇಶವಾಗಿ ಮಾರ್ಪಟ್ಟು ಹಂದಿ, ನಾಯಿ, ದನಗಳ ವಾಸಸ್ಥಾನವಾಗಿದೆ. ಈ ಬಗ್ಗೆ ಹಲವಾರು ಬಾರಿ ಬೀದಿಗಿಳಿದು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪೊಳ್ಳು ಭರವಸೆಗಳನ್ನು ನೀಡುತ್ತಾ ಬರುತ್ತಿದ್ದಾರೆ ವಿನಾ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಸಮುದಾಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಆರೋಪಿಸಿದರು.

ಪ್ರಸ್ತುತ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ನಿರ್ಮಿತಿ ಕೇಂದ್ರದಿಂದ ಬದಲಾಯಿಸಿ ಬೇರೆ ಗುತ್ತಿಗೆದಾರರಿಗೆ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಬೇಕು. ಶಾಸಕರ ಮತ್ತು ಮುಖ್ಯಮಂತ್ರಿ ಅನುದಾನದಿಂದ ಹಣ ಬಿಡುಗಡೆಗೊಳಿಸಿ ಉತ್ತಮ ರಂಗಮಂದಿರ ನಿರ್ಮಿಸಿ ರಂಗಾಸಕ್ತರ ಕನಸನ್ನು ನನಸು ಮಾಡಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಶಾಸಕ ಹಂಪನಗೌಡ ಬಾದರ್ಲಿ, ರಂಗಮಂದಿರ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದ ನಿರ್ಮಿತಿ ಕೇಂದ್ರದವರ ಮೇಲೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ರಂಗಮಂದಿರ ಹಾಗೂ ಸ್ತ್ರೀಶಕ್ತಿ ಭವನ ಪೂರ್ಣಗೊಳಿಸಬೇಕೆಂದು ಅನೇಕ ಬಾರಿ ಸರ್ಕಾರದ ಮೇಲೆ ಮೌಖಿಕ ಹಾಗೂ ಲಿಖಿತವಾಗಿ ಒತ್ತಾಯಿಸಲಾಗಿದೆ. ಆದರೆ ಅಧಿಕಾರಿಗಳು ತಮ್ಮ ಮನವಿಯನ್ನು ಪುರಸ್ಕರಿಸುತ್ತಿಲ್ಲ ಎಂದು ತಿಳಿಸಿದರು.

ಸ್ಥಳದಲ್ಲಿಯೇ ಜಿಲ್ಲಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಂಗಮಂದಿರ ಕುರಿತು ಚರ್ಚಿಸಲು ಸ್ಥಳೀಯ ರಂಗಾಸಕ್ತರು ತಮ್ಮ ಬಳಿ ನಿಯೋಗ ಬರುತ್ತಾರೆ. ಅವರಿಗೆ ಬೇಡಿಕೆಗೆ ಸ್ಪಂದಿಸುವಂತೆ ತಿಳಿಸಿದರು.

ಸಾಹಿತಿ ನರಸಿಂಹಪ್ಪ ಜನತಾಕಾಲೊನಿ, ಕವಿ ಪಂಪಯ್ಯಸ್ವಾಮಿ ಸಾಲಿಮಠ, ಕಲಾವಿದರಾದ ಬಸವರಾಜ ಮೋತಿ, ಧರ್ಮರಾಜ ಉಪ್ಪಾರ, ಮುಖಂಡ ಅಪ್ಪಣ್ಣ ಕಾಂಬಳೆ, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಕನಕಪ್ಪ, ಮಹಿಬೂಬ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ವೀರೇಶ ಬಾವಿಮನಿ, ಪತ್ರಕರ್ತ ಎಂ.ಎಸ್.ರಾಜಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT