ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷೆ ಬೇಡಿ ಮಕ್ಕಳಿಗೆ ಊಟ ಹಾಕುತ್ತೇವೆ, ಸರ್ಕಾರದ ನೆರವಿಗೆ ಕೈಯೊಡ್ಡೆವು

ಕಾರ್ಯಕರ್ತರ ಸಮಾವೇಶ: ಡಾ. ಕಲ್ಲಡ್ಕ ಪ್ರಭಾಕರ ಭಟ್
Last Updated 3 ಅಕ್ಟೋಬರ್ 2017, 11:07 IST
ಅಕ್ಷರ ಗಾತ್ರ

ಬೈಂದೂರು: ‘ಹಿಂದೂಗಳ ತಾಯ್ನೆಲ ವಾದ ಭಾರತ ಹಿಂದೂ ರಾಷ್ಟ್ರ ಎಂದರೆ ವಿವಾದವೆಬ್ಬಿಸುವುದು ಒಂದು ದುರಂತ. ಹಿಂದೂಗಳಲ್ಲಿ ಧಾರ್ಮಿಕ ಭಕ್ತಿ, ಸಾಮಾಜಿಕ ಶಕ್ತಿ ಜಾಗೃತವಾಗದಿದ್ದರೆ ಇದಕ್ಕೆ ಪರಿಹಾರ ಸಿಗದು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಭಾನುವಾರ ಇಲ್ಲಿ ನಡೆದ ವಿಶ್ವ ಹಿಂದೂ ಪರಿಷತ್- ಮತ್ತು ಬಜರಂಗದಳ ಪ್ರಖಂಡದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಭಾರತ ಗೋವನ್ನು ತಾಯಿ ಎಂದು ಪೂಜಿಸುವ, ನದಿ ನೀರಿನ ಮೂಲವನ್ನು ತೀರ್ಥ ಎಂದು ಸೇವಿಸುವ, ಭೂಮಿಯನ್ನು ಪವಿತ್ರ ಎಂದು ಗೌರವಿಸುವ ದೇಶ. ಇಲ್ಲಿನ ಸಂಪ್ರದಾಯಗಳಲ್ಲಿ ವೈರುಧ್ಯವಿದ್ದರೂ ಸಂಸ್ಕೃತಿ ಮಾತ್ರ ಒಂದೇ’ ಎಂದು ಹೇಳಿದರು.

‘ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ಕಟ್ಟಲು ಇನ್ನೂ ಸಾಧ್ಯವಾಗಿಲ್ಲ. ಈಗ ಅದರ ನಿರ್ಮಾಣಕ್ಕೆ ಅನುಕೂಲ ವಾತಾವರಣ ನಿರ್ಮಾಣವಾಗಿದ್ದು, ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್‌ ಮೂಲಕ ರಾಮಮಂದಿರ ಯಾವಾಗ ನಿರ್ಮಾಣ ಮಾಡಬೇಕು ಎಂಬುದು ನಿರ್ಣಯವಾಗಲಿದೆ’ ಎಂದರು.

‘ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಗೆ ಬರುತ್ತಿದ್ದ ಅನ್ನಪ್ರಸಾದವನ್ನು ನಿಲ್ಲಿಸುವ ಮೂಲಕ ರಾಜ್ಯ ಸರ್ಕಾರ ಊಟದಲ್ಲಿಯೂ ರಾಜಕೀಯ ಮಾಡಿದೆ. ಮಕ್ಕಳ ಅನ್ನವನ್ನು ಕಸಿದುಕೊಂಡು ಈಗ ಬಿಸಿಯೂಟಕ್ಕೆ ಮನವಿ ಸಲ್ಲಿಸುವಂತೆ ಕೇಳಿಕೊಳ್ಳುತ್ತಿದೆ. ಆದರೆ ಇದು ನಮ್ಮ ಸ್ವಾಭಿಮಾನದ ಪ್ರಶ್ನೆ. ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕುತ್ತೇವೆಯೇ ಹೊರತು ಸರ್ಕಾರದ ನೆರವಿಗೆ ಕೈಯೊಡ್ಡೆವು’ ಎಂದರು.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಗೋಪಾಲಕೃಷ್ಣ ಶಿರೂರು, ಬಜರಂಗದಳದ ಪ್ರಮುಖರಾದ ಶರಣ್‌ ಪಂಪ್‌ವೆಲ್, ಸುನಿಲ್ ಕೆ.ಆರ್, ಮರವಂತೆ ಶ್ರೀರಾಮ ಮಂದಿರದ ಅಧ್ಯಕ್ಷ ವೆಂಕಟರಮಣ ಖಾರ್ವಿ, ವಿಶ್ವ ಹಿಂದು ಪರಿಷತ್ ಪ್ರಖಂಡ ಸಂಚಾಲಕ ನಿತ್ಯಾನಂದ ಉಪ್ಪುಂದ ಇದ್ದರು.

ವಿವಿಧ ಘಟಕಗಳಿಗೆ ಧ್ವಜ ನೀಡಲಾಯಿತು. ಪರಿಷತ್‌ನ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಸ್ವಾಗತಿಸಿದರು. ವಿಜಯ್ ಕಂಚಿಕಾನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT