ಕುಂಚ ತಾಕದ ವರ್ಣಚಿತ್ರ

ಭಾನುವಾರ, ಮೇ 26, 2019
25 °C

ಕುಂಚ ತಾಕದ ವರ್ಣಚಿತ್ರ

Published:
Updated:
ಕುಂಚ ತಾಕದ ವರ್ಣಚಿತ್ರ

ನೋಡುಗರಿಗೆ ಅದೊಂದು ಉದ್ದುದ್ದವಾಗಿ, ಶಿಸ್ತುಬದ್ಧವಾಗಿ ಎಳೆದ ಗೆರೆ. ಆದರೆ, ಅದರೊಳಗೆ ನಿಸರ್ಗ, ಶಾಸ್ತ್ರೀಯ ಮತ್ತು ಸೂಫಿ ಸಂಗೀತಗಳನ್ನು ಪ್ರತಿಬಿಂಬಿಸುವ ವರ್ಣಚಿತ್ರಗಳಿವೆ. ಚಿತ್ರಕಲೆಯ ದೃಷ್ಟಿಯಿಂದ ನೋಡಿದಾಗ ಮಾತ್ರ ಅದು ಕಾಣಿಸುತ್ತದೆ.

ಇದನ್ನು  ರಚಿಸಿದವರು ಸತೀಶ್ ಭೈಸೇರ್. ಪ್ರಕೃತಿ ಮತ್ತು ಸಂಗೀತದಿಂದ ಸ್ಫೂರ್ತಿ ಪಡೆದು ‘ಅಬಸ್ಟ್ರಾಕ್ಟ್‌’ ಶೈಲಿಯಲ್ಲಿ ಅವರು ಚಿತ್ರಗಳನ್ನು ಬಿಡಿಸಿದ್ದಾರೆ.

ಇಂತಹ ಅಪರೂಪ ವರ್ಣಚಿತ್ರಗಳನ್ನು ನಗರದ ಯುಬಿ ಸಿಟಿಯಲ್ಲಿರುವ ಸಬ್‌ಲೈಮ್ ಗ್ಯಾಲರಿಯಾದ ‘ಸಾಲೆನ್ಸ್ ಆಫ್ ಸೈಲೆನ್ಸ್’ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಚಿತ್ರಗಳ ತುಂಬ ಉದ್ದದ್ದ ಗೆರೆಗಳೇ ಕಾಣುತ್ತವೆ. ಕ್ಯಾನ್ವಾಸ್‌ಗೆ ಕುಂಚವನ್ನು ತಾಕಿಸದೇ ಗೆರೆಗಳನ್ನು ಮೂಡಿಸುವುದು ವಿಶೇಷ. ‘ಇಲ್ಲಿಯತನಕ ಉದ್ದ ಗೆರೆಗಳಲ್ಲಿ ಚಿತ್ರ ರಚಿಸಿದ್ದು, ಅಡ್ಡಗೆರೆಗಳಲ್ಲಿ ಚಿತ್ರ ರಚಿಸಲು ಪ್ರಯತ್ನಿಸುತ್ತಿದ್ದೇನೆ. ಲಲಿತ ಕಲೆಯಲ್ಲಿ ಪದವಿ ಪಡೆದು 2007ರಿಂದಲೇ ಈ ಶೈಲಿಯಲ್ಲಿ ಚಿತ್ರ ರಚಿಸುತ್ತಾ ಬಂದಿದ್ದೇನೆ’ ಎನ್ನುತ್ತಾರೆ ಭೈಸೇರ್.

ಅವರು, ಆರಂಭಿಕ ದಿನಗಳಲ್ಲಿ, ತಮ್ಮದೇ ಆದ ಶೈಲಿಯನ್ನು ಕಂಡುಕೊಳ್ಳಲು ಪ್ರಯೋಗಗಳನ್ನು ಮಾಡಿದರು. ಪ್ರಸಿದ್ಧ ವರ್ಣಚಿತ್ರಕಾರ ಜಾಕ್ಸನ್ ಪೊಲಾಕ್‌, ಮಾರ್ಕ್ ರಾಥ್ಕೊ ಮತ್ತು ಬ್ರೈಸ್ ಮಾರ್ಡೆನ್‌ ಅವರಂತೆ ಅಮೂರ್ತ ಅಭಿವ್ಯಕ್ತಿವಾದದ ಸ್ಫೂರ್ತಿಯನ್ನು ಪಡೆದು ಚಿತ್ರ ರಚಿಸಿದ್ದಾರೆ.

ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಅದರ ಬಗೆಗೆ ತಿಳುವಳಿಕೆ ನೀಡುವ ಚಿತ್ರಗಳಿವು. ಮಧ್ಯಪ್ರದೇಶದ ಹರ್ದಾದಲ್ಲಿನ ಪ್ರಶಾಂತ ಗ್ರಾಮೀಣ ವಾತಾವರಣವನ್ನು ನೋಡುತ್ತಾ, ಅನುಭವಗಳು ಮತ್ತು ಅವಲೋಕನಗಳಿಂದ ಅವರ ಕಲೆ ವಿಕಸನಗೊಂಡಿತು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾ, ತಮ್ಮ ಚಿತ್ರಗಳಲ್ಲಿ ಕಲೆ ಮತ್ತು ಸಂಗೀತದ ನಡುವಿನ ಆಧ್ಯಾತ್ಮಿಕ ಸಂಪರ್ಕವನ್ನು ಜತೆಗೂಡಿಸಿದ್ದಾರೆ.

ಇವರ ವರ್ಣಚಿತ್ರಗಳು ಈಗಾಗಲೇ ದಕ್ಷಿಣ ಕೊರಿಯಾ, ಚೆನ್ನೈ, ದೆಹಲಿಯಲ್ಲಿ ಪ್ರದರ್ಶನಗೊಂಡಿವೆ. ಇದು ದೇಶದಲ್ಲಿ ಆಯೋಜಿಸುತ್ತಿರುವ ಇವರ ಏಳನೇ ಪ್ರದರ್ಶನ. ‘ನಮ್ಮ ಸಿದ್ಧಾಂತ ‘ಸಾಲೆನ್ಸ್ ಆಫ್ ಸೈಲೆನ್ಸ್’. ಇದು ನಮ್ಮ ಭಾವನೆ ಮತ್ತು ಮನಸ್ಸುಗಳ ನಡುವಿನ ಸಂಪರ್ಕವನ್ನು ಹುಡುಕಲು ನೆರವಾಗುತ್ತದೆ. ಅಮೂರ್ತ ವರ್ಣಚಿತ್ರಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಮತ್ತು ಪ್ರೋತ್ಸಾಹ ಸಿಗುತ್ತವೆ. ಆದರೆ, ನಮ್ಮಲ್ಲಿ ಅಂತಹ ವಾತಾವರಣವಿಲ್ಲ.

ಮುಂದಿನ ದಿನಗಳಲ್ಲಿ ಎಲ್ಲರೂ ಇವನ್ನು ಗುರುತಿಸುತ್ತಾರೆ ಎಂಬ ನಂಬಿಕೆ ಇದೆ. ನನ್ನ ದೇಹ ಮತ್ತು ಆತ್ಮ ಸಂಪರ್ಕಗೊಂಡಾಗ ಕಲೆಯ ಕಡೆಗಿನ ಅನುಭವವನ್ನು ಸವಿಯುತ್ತೇನೆ. ನನ್ನ ಕೆಲಸವು ಪ್ರೇಕ್ಷಕರಿಗೆ ಖುಷಿ ನೀಡುತ್ತದೆ ಎಂಬುದು ನನ್ನ ನಂಬಿಕೆ’ ಎಂದರು ಸತೀಶ್‌.

ನೋಡುಗರಾಗಿ ನಾವು, ನಮ್ಮ ಕಲ್ಪನಾ ಶಕ್ತಿಯನ್ನು ವಿಸ್ತರಿಸಿಕೊಂಡರೆ ಇವರ ಕಲಾಕೃತಿಗಳು ನಮ್ಮನ್ನು ಅದರೊಳಗೆ ಎಳೆದುಕೊಳ್ಳುತ್ತವೆ. ಈ ವರ್ಣಚಿತ್ರಗಳ ಮಾರಾಟದ ಒಂದು ಭಾಗ ಹಣವನ್ನು ವಲಸಿಗ ಕಾರ್ಮಿಕ ಮಕ್ಕಳಿಗಾಗಿ ಇರುವ 'ಆನಂದ ಸಾಗರ ನಿಲಯ'ಕ್ಕೆ ನೀಡಲಾಗುತ್ತದೆ. ಈ ವರ್ಣಚಿತ್ರಗಳ ಸಂಗ್ರಹವು ಅಕ್ಟೋಬರ್ 10, 2017ರವರೆಗೆ ಪ್ರದರ್ಶನಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry