ಭಾನುವಾರ, ಸೆಪ್ಟೆಂಬರ್ 15, 2019
23 °C

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ

Published:
Updated:
ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ

ಮೈಸೂರು: ‘ನನಗೆ ರಾಜಕೀಯ ಜನ್ಮ ಹಾಗೂ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಇದು ನನ್ನ ಪಾಲಿಗೆ ಕೊನೆ ಚುನಾವಣೆ‌’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಘೋಷಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

‘ನನಗೆ ಅಳು ಬರುವುದೇ ಇಲ್ಲ. ತಂದೆ, ತಾಯಿ ಸಾವನ್ನಪ್ಪಿದಾಗ ದುಃಖವಾಗಿತ್ತೇ ವಿನಾ ಕಣ್ಣೀರಿಟ್ಟಿರಲಿಲ್ಲ. ಆದರೆ, 2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ತೊರೆದು ವರುಣಾ ಕ್ಷೇತ್ರಕ್ಕೆ ಹೋಗಬೇಕಾದಾಗ ಗಳಗಳ ಕಣ್ಣೀರಿಟ್ಟಿದ್ದೆ. ರೇವಣ್ಣಸಿದ್ದಯ್ಯ ಅವರು ಬಿಜೆಪಿ ಸೇರಿದ ಪರಿಣಾಮ ವರುಣಾ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಇರಲಿಲ್ಲ. ಹೀಗಾಗಿ, ನಾನೇ ಸ್ಪರ್ಧಿಸಬೇಕಾಯಿತು’ ಎಂದರು.

‘1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಚಾಮುಂಡೇಶ್ವರಿ ಕ್ಷೇತ್ರದ ಜನ ಕೈಹಿಡಿದರು. 2006ರ ಉಪಚುನಾವಣೆಯಲ್ಲಿ ಗೆಲ್ಲಿಸಿದರು. ಇಲ್ಲಿ ಎರಡು ಬಾರಿ ಸೋತಿದ್ದೇನೆ. ಅದಕ್ಕೆ ನಾನೆಸಗಿದ ಕೆಲ ತಪ್ಪುಗಳು ಕಾರಣ. ಆದರೆ, ಈ ಬಾರಿ ಮತ್ತೆ ನನ್ನ ಕೈಹಿಡಿಯುತ್ತೀರಿ ಎಂಬ ವಿಶ್ವಾಸವಿದೆ. ನಾನು ಬದುಕಿರುವವರೆಗೆ ಈ ಕ್ಷೇತ್ರ ಮರೆಯಲ್ಲ’ ಎಂದು ಭಾವುಕರಾದರು.

‘2013ರ ಚುನಾವಣೆಯೇ ನನ್ನ ಪಾಲಿಗೆ ಕೊನೆಯದ್ದು ಎಂದು ಘೋಷಿಸಿದ್ದೆ. ಆದರೆ, ಹೈಕಮಾಂಡ್ ಸೂಚನೆ ಮೇರೆಗೆ ಮತ್ತೆ ಸ್ಪರ್ಧಿಸುತ್ತಿದ್ದೇನೆ. ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ. ಮುಂದೆ ಯಾರೂ ಕೇಳಿಕೊಂಡರೂ ಸ್ಪರ್ಧಿಸಲ್ಲ’ ಎಂದು ಹೇಳಿದರು.

‘ಯಡಿಯೂರಪ್ಪ ಅವರು ಖಾಲಿ ಬುಟ್ಟಿ ಇಟ್ಟುಕೊಂಡು ಹಾವಿದೆ, ಹಾವಿದೆ ಎಂದು ಬೆದರಿಸುತ್ತಿದ್ದಾರೆ. ಅವರು ಜೈಲಿಗೆ ಹೋಗಿ ಬಂದಿರುವ ಗಿರಾಕಿ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅವರ ಮನೆಯಲ್ಲಿ ಹೆಗ್ಗಣ ಸತ್ತಿದ್ದರೂ, ನೊಣ ಸತ್ತಿದೆ ಎಂದು ಕೂಗಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಜ. 1ರಿಂದ ಎಲ್ಲೆಡೆ ಇಂದಿರಾ ಕ್ಯಾಂಟಿನ್‌

ಮೈಸೂರು: ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜನವರಿ 1ರಿಂದ ಇಂದಿರಾ ಕ್ಯಾಂಟಿನ್‌ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

‘ಬೆಂಗಳೂರಿನಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟಿನ್‌ ಯೋಜನೆಗೆ ಎರಡು ತಿಂಗಳು ತುಂಬುತ್ತಿದೆ. ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ನೀಡುತ್ತಿರುವ ಈ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.ಡಿ. 15ರಿಂದ ರಾಜ್ಯ ಪ್ರವಾಸ

ಮೈಸೂರು: ಡಿಸೆಂಬರ್‌ 15ರಿಂದ ಒಂದು ತಿಂಗಳು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.‌

‘ಸಂಕ್ರಾಂತಿ ಹಬ್ಬದವರೆಗೆ ಪ್ರತಿ ಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸುತ್ತೇನೆ’ ಎಂದು ಹೇಳಿದರು.

ಶಿಷ್ಟಾಚಾರ ಉಲ್ಲಂಘಿಸಿಲ್ಲ–ಸಿ.ಎಂ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಸ್ಥಳೀಯ ಶಾಸಕರನ್ನು ಕಡೆಗಣಿಸುತ್ತಿಲ್ಲ. ಶಾಸಕ ಜಿ.ಟಿ.ದೇವೇಗೌಡ ಅವರೇ ನನ್ನನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಮಗಾರಿ ಚಾಲನೆಗೆ ರಮ್ಮನಹಳ್ಳಿಯಲ್ಲಿ ಮಂಗಳವಾರ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದ್ದೆ. ದೇವೇಗೌಡರು ಕ್ಷೇತ್ರದಲ್ಲಿ ಇರುವುದಿಲ್ಲ ಎಂಬುದು ಗೊತ್ತಾದ ಬಳಿಕ ಕಾರ್ಯಕ್ರಮ ಏರ್ಪಡಿಸಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ನಾನು ಬಿಡುಗಡೆ ಮಾಡಿದ ಅನುದಾನದಿಂದಲೇ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಬೇರೆ ಯಾರ ಶ್ರಮವೂ ಇದರಲ್ಲಿ ಇಲ್ಲ. ಮತ್ತೆ ಗೆದ್ದರೆ ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ‌‌’ ಎಂದು ಭರವಸೆ ನೀಡಿದರು.

₹ 300 ಕೋಟಿ ವೆಚ್ಚದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿದೆ. ಕುಡಿಯುವ ನೀರಿನ ಯೋಜನೆ ಆರಂಭಿಸಿದ್ದೇವೆ‌

-ಡಾ.ಎಚ್‌.ಸಿ.ಮಹದೇವಪ್ಪ

 

Post Comments (+)