ಪ್ರಸಾದದಿಂದ ಪ್ರಸನ್ನತೆ

ಸೋಮವಾರ, ಜೂನ್ 17, 2019
25 °C

ಪ್ರಸಾದದಿಂದ ಪ್ರಸನ್ನತೆ

Published:
Updated:
ಪ್ರಸಾದದಿಂದ ಪ್ರಸನ್ನತೆ

ಪ್ರಸಾದವೆಂದರೆ ಸಾಮಾನ್ಯಾರ್ಥದಲ್ಲಿ ಭಗವಂತನಿಂದ, ಗುರು ಹಿರಿಯರಿಂದ ಪ್ರಾಪ್ತವಾದ ಪದಾರ್ಥ. ಆದರೆ ವಿಶಾಲಾರ್ಥದಲ್ಲಿ ಸಮಸ್ತ ಸೃಷ್ಟಿಯೆಲ್ಲವೂ ಭಗವಂತನ ಪ್ರಸಾದವಾಗಿದೆ. ಉಪನಿಷತ್ತು ’ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ತೇನ ತ್ಯಕ್ತೇನ ಭುಂಜೀಥಾ’ ಚರಾಚರವೆಲ್ಲವೂ ಭಗವಂತನಿಂದ ಪ್ರಾಪ್ತವಾಗಿದ್ದು, ಅದನ್ನು ತ್ಯಾಗ ಭಾವದಿಂದ ಭೋಗಿಸು ಎಂದು ಆದೇಶಿಸಿದೆ. ಈ ದೃಷ್ಟಿಯಲ್ಲಿ ಮಾನವ ದೇಹವೂ ಕೂಡ ಭಗವಂತನ ಪ್ರಸಾದವೇ ಆಗಿದ್ದು, ಅದನ್ನು ಕೆಡಿಸದೆ ಭಗವಂತನ ಒಲುಮೆಗೆ ಸಾಧನವಾಗಿಸಿಕೊಳ್ಳಬೇಕೆನ್ನುತ್ತಾರೆ ಬಸವಣ್ಣನವರು. ಇಲ್ಲಿ ಮಾನವ ದೇಹವನ್ನು ಕೆಡಿಸಬಾರದು ಎಂಬುದರ ಅರ್ಥವೆಂದರೆ ಶರೀರವನ್ನು ವ್ಯಸನಗಳಿಗೆ ಬಲಿಯಾಗಿಸದೇ ತನ್ನನ್ನು ತಾನು ಭಗವಂತನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು. ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವುದು.

‘ಒಳಹೊರಗೆ ತೆರೆಹಿಲ್ಲದ ಲಿಂಗಕ್ಕೆ ಅಂಗವನರ್ಪಿಸಿ ಪ್ರಸಾದವ ಗ್ರಹಿಸಿ ಘನಲಿಂಗಿಯಾಗಿರ್ಪನು ಮಹಾಪ್ರಸಾದಿ’ ಭಗವಂತನಿಗೆ ತನ್ನನ್ನು ಸಮರ್ಪಿಸಿಕೊಳ್ಳುವ ಮೂಲಕ ತಾನೇ ಮಹಾಪ್ರಸಾದಿಯಾಗಿ ನಿಲ್ಲುವುದು.

ಪದಾರ್ಥಗಳನ್ನು ದೇಹಸುಖಕ್ಕಾಗಿ ಅಥವಾ ನಾಲಗೆಯ ಚಪಲಕ್ಕಾಗಿ ತಿನ್ನುವುದು ಪ್ರಸಾದವೆನಿಸುವುದಿಲ್ಲ. ಆಹಾರವು ಕೇವಲ ದೇಹದ ಪೋಷಣೆಗಾಗಿ ಅಲ್ಲ. ಅದು ದೇಹವನ್ನು ಪರಿಶುದ್ಧಗೊಳಿಸಬೇಕು ಮತ್ತು ಮನಸ್ಸಿನ ಪಾವಿತ್ರ್ಯವನ್ನು ಹೆಚ್ಚಿಸುವುದಾಗಬೇಕು. ಆದ್ದರಿಂದ ತಾನು ಸ್ವೀಕರಿಸುವ ಆಹಾರ ಅಥವಾ ಪದಾರ್ಥವನ್ನು ಭಗವಂತನಿಗೆ ಭಾವದಲ್ಲಿ ಸಮರ್ಪಿಸಿ ಸ್ವೀಕರಿಸಿದಾಗ ಅದು ಪ್ರಸಾದವೆನಿಸಿ ದೇಹ ಮತ್ತು ಮನಸ್ಸಿನ ಪರಿಶುದ್ಧಿಗೆ ಕಾರಣವಾಗುತ್ತದೆ. ಆಹಾರವು ಪ್ರಸಾದವೆಂಬ ಭಾವ ಬಲಿತಾಗ ಅದರ ಬಗ್ಗೆ ಪೂಜ್ಯ ಭಾವ ಉಂಟಾಗುತ್ತದೆ. ಆಹಾರದಲ್ಲಿ ಜೀವಕ್ಕೆ ಚೈತನ್ಯವನ್ನು ತುಂಬುವ ಶಕ್ತಿ ಇರುವುದರಿಂದ ಅದನ್ನು ವ್ಯರ್ಥವಾಗಿಸಬಾರದು ಎಂಬ ಎಚ್ಚರವೂ ಉಂಟಾಗುತ್ತದೆ.

ಪ್ರಸಾದದಲ್ಲಿರುವುದು ಮುಖ್ಯವಾಗಿ ಅರ್ಪಣೆಯ ಭಾವ. ನಮಗೆ ಪ್ರಾಪ್ತವಾದುದೆಲ್ಲವನ್ನೂ ಭಗವಂತನಿಗೆ ಸಮರ್ಪಿಸುವುದು. ಮನಮುಟ್ಟಿ ಅರ್ಪಿತವಾದುದೆಲ್ಲವೂ ಪ್ರಸಾದ. ನಾವು ಮಾಡುವ ಕರ್ಮಗಳೆಲ್ಲವನ್ನೂ ಭಗವಂತನಿಗೆ ಅರ್ಪಿಸಿ ಪ್ರಸಾದವಾಗಿಸಿಕೊಳ್ಳಬೇಕು. ಅದರಿಂದ ನಮ್ಮ ಅಹಂಕಾರವು ನಿರಸನಗೊಳ್ಳುವುದು. ಭಕ್ತಿ, ನಿಷ್ಠೆಯಿಂದ, ಭೃತ್ಯಭಾವದಿಂದ ಅರ್ಪಿಸಿದುದೆಲ್ಲವೂ ಪ್ರಸಾದವಾಗುವುದು. ’ಭೃತ್ಯಭಾವದಿಂದ ಅರ್ಪಿಸದವರಿಗೆ ಪ್ರಸಾದವಿಲ್ಲ’ ಎಂದು ಅಲ್ಲಮ ಪ್ರಭುಗಳು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ವಿಶ್ವದ ಎಲ್ಲ ವಸ್ತುಗಳೂ ಭಗವಂತನ ಸೊಮ್ಮು-ಯಾವುದೂ ನನ್ನದಲ್ಲ; ನಾನು ಭಗವಂತನ ಸೇವಕ; ಮಾಡುವುದೆಲ್ಲವೂ ಭಗವಂತನಿಗಾಗಿ; ಅನುಭವಿಸುವುದೆಲ್ಲವೂ ಅವನ ಪ್ರಸಾದವೆಂಬ ಭಾವವು ಗಟ್ಟಿಗೊಳ್ಳಬೇಕು. ಆಗ ಮಾತ್ರ ವ್ಯಕ್ತಿಯು ಪ್ರಸಾದಿ ಎನಿಸಿ ನಿರಂತರ ಪ್ರಸನ್ನತೆಯನ್ನು ನಿರಂತರ ಅನುಭವಿಸುವನು.

ಶಿವಶರಣರು ಪ್ರಸಾದ ತತ್ವಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಅವರ ದೃಷ್ಟಿಯಲ್ಲಿ ಅಧ್ಯಾತ್ಮ ಸಾಧಕನು ಯಾವುದನ್ನೂ ಬಯಸಬಾರದು. ’ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ, ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ ಎಂದು ಹೇಳುವ ಅವರು ಸ್ವೀಕರಿಸುವ ಪದಾರ್ಥವೆಲ್ಲವನ್ನೂ ಭಗವಂತನಿಗೆ ಸಮರ್ಪಿಸಿಯೇ ಸ್ವೀಕರಿಸಬೇಕು ಎನ್ನುತ್ತಾರೆ. ಬಸವಣ್ಣನವರು- ’ಅಧರ ತಾಗುವ ರುಚಿಯ, ಉದರ ತಾಗುವ ಸುಖವ ಲಿಂಗಾರ್ಪಿತವಿಲ್ಲದೆ ಕೊಂಡರೆ ಕಿಲ್ಬಿಷ ನೋಡಾ. ನೇತ್ರ, ಶ್ರೋತ್ರ, ಜಿಹ್ವೆ ಮುಂತಾದ ಸರ್ವೇಂದ್ರಿಯಗಳಲ್ಲಿ ಮುಟ್ಟಿದ ಸಕಲ ಪದಾರ್ಥಗಳನ್ನು ಲಿಂಗಕ್ಕೆ ಕೊಟ್ಟು ಕೊಂಡರೆ ಅದು ಮಹಾಪ್ರಸಾದವಯ್ಯಾ ಕೂಡಲಸಂಗಮದೇವಾ’ ಎನ್ನುತ್ತಾರೆ.

ಸತ್ಯ ಶುದ್ಧ ಕಾಯಕದಿಂದ ಬಂದುದನ್ನು, ನನ್ನದು ಎಂಬ ಭಾವವನ್ನು ಭಗವಂತನಿಗೆ, ಭಗವತ್ಸ್ವರೂಪಿಯಾದ ದೈವ ಅಥವಾ ಸಮಾಜಕ್ಕೆ ಅರ್ಪಿಸುವವನು ಸದಾ ಪ್ರಸನ್ನಪ್ರಸಾದಿ ಎನಿಸುವನು. ಪ್ರಸಾದವೇ ಪರಮ ಜ್ಞಾನ, ಪ್ರಸಾದವೇ ಪರಾಪರ, ಪ್ರಸಾದವೇ ಪರಬ್ರಹ್ಮ, ಪ್ರಸಾದವೇ ಪರಮಾನಂದ, ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಿಪೂರ್ಣ ಸೌರಾಷ್ಟ್ರ ಸೋಮೇಶ್ವರ ಲಿಂಗದ ಪ್ರಸನ್ನತೆಯೇ ಪ್ರಸಾದ. ಇಂತಪ್ಪ ಪ್ರಸಾದದ ಮಹಾತ್ಮೆಗೆ ನಮೋ ನಮೋ ಎನಿತಿರ್ದೆನು ಎಂಬ ಸಕಳೇಶ ಮಾದರಸನ ಮಾತು ಪ್ರಸಾದದಿಂದ ಪ್ರಸನ್ನತೆ ಎಂಬುದನ್ನು ನಮ್ಮ ಅನುಭವಕ್ಕೆ ತಂದುಕೊಡುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry