ಮಂಗಳವಾರ, ಸೆಪ್ಟೆಂಬರ್ 17, 2019
21 °C

ಅಲಹಾಬಾದ್‌ನಲ್ಲಿ ಬಿಎಸ್‌ಪಿ ಮುಖಂಡನ ಹತ್ಯೆ: ಭುಗಿಲೆದ್ದ ಹಿಂಸಾಚಾರ

Published:
Updated:
ಅಲಹಾಬಾದ್‌ನಲ್ಲಿ ಬಿಎಸ್‌ಪಿ ಮುಖಂಡನ ಹತ್ಯೆ: ಭುಗಿಲೆದ್ದ ಹಿಂಸಾಚಾರ

ಲಖನೌ: ಹಿರಿಯ ಬಿಎಸ್‌ಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಿದ್ದು, ಆನಂತರ ಉತ್ತರ ಪ್ರದೇಶದ ಅಲಹಾಬಾದ್‌ ಪಟ್ಟಣದಲ್ಲಿ ಹಿಂಸಾಚಾರ ನಡೆದಿದೆ. ಈ ವೇಳೆ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ಮಿಶ್ರಾ ಎಂಬುವವರ ವಿರುದ್ಧ ಸ್ಪರ್ಧಿಸಿದ್ದ ರಾಜೇಶ್‌ ಯಾದವ್ ಅವರ ಮೇಲೆ ತಾರಾಚಂದ್‌ ಹಾಸ್ಟೆಲ್‌ ಸಮೀಪ ಮಂಗಳವಾರ ಮುಂಜಾನೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

’ಹತ್ಯೆ ನಡೆದ ವೇಳೆ ಯಾದವ್ ಅವರ ಜತೆ, ವೃತ್ತಿಯಲ್ಲಿ ವೈದ್ಯರಾಗಿರುವ ಹಾಗೂ ನರ್ಸಿಂಗ್ ಹೋಂ ನಡೆಸುತ್ತಿರುವ ಗೆಳೆಯ ಮುಕುಲ್ ಸಿಂಗ್ ಸಹ ಇದ್ದರು. ದಾಳಿ ನಡೆದ ಕೂಡಲೇ ಯಾದವ್ ಅವರನ್ನು ಮುಕುಲ್‌ ತಮ್ಮ ನರ್ಸಿಂಗ್ ಹೋಂಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಘಟನೆ ನಂತರ ಮುಕುಲ್‌ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯಾದವ್ ಮೃತಪಟ್ಟ ನಂತರ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು ಹಾಗೂ 12ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದರು.

ಕಲ್ಲು ತೂರಾಟದಲ್ಲಿ ಕೆಲವು ಪೊಲೀಸರು ಮತ್ತು ಮಾಧ್ಯಮ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಪತ್ರಕರ್ತರನ್ನೇ ಗುರಿಯಾಗಿಸಿಕೊಂಡು ಉದ್ರಿಕ್ತ ಗುಂಪು ದಾಳಿ ಮಾಡಿದೆ. ಕ್ಯಾಮೆರಾ ಹಾಗೂ ಇತರ ಉಪಕರಣಗಳಿಗೆ ಹಾನಿ ಮಾಡಿದೆ. ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹತ್ಯೆ ಹಿಂದೆ ಚುನಾವಣಾ ಹಗೆತನ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Post Comments (+)