ಸಿಪಿಎಂ ವಿರುದ್ಧ ಎಲ್ಲ ರಾಜ್ಯಗಳಲ್ಲೂ ಪಾದಯಾತ್ರೆ

ಭಾನುವಾರ, ಜೂನ್ 16, 2019
28 °C
ಜನರಕ್ಷಾ ಯಾತ್ರೆಗೆ ಚಾಲನೆ ನೀಡಿ ಬಿಜೆಪಿ ಅಧ್ಯಕ್ಷ ಷಾ ಘೋಷಣೆ

ಸಿಪಿಎಂ ವಿರುದ್ಧ ಎಲ್ಲ ರಾಜ್ಯಗಳಲ್ಲೂ ಪಾದಯಾತ್ರೆ

Published:
Updated:
ಸಿಪಿಎಂ ವಿರುದ್ಧ ಎಲ್ಲ ರಾಜ್ಯಗಳಲ್ಲೂ ಪಾದಯಾತ್ರೆ

ಕಣ್ಣೂರು, ಕೇರಳ: ಬಿಜೆಪಿ ಕಾರ್ಯಕರ್ತರ ಮೇಲೆ ಕೇರಳದಲ್ಲಿ ಸಿಪಿಎಂ ಹಲ್ಲೆ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ಇದರ ವಿರುದ್ಧ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಎರಡು ವಾರ ಪಾದಯಾತ್ರೆ ನಡೆಸಲಾಗುವುದು ಎಂದು ಹೇಳಿದರು.

ಸಿಪಿಎಂನ ಭದ್ರಕೋಟೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ತವರು ಕಣ್ಣೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಷಾ ಮಾತನಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ವಿಜಯನ್‌ ಅವರೇ ಹೊಣೆ. ಇಲ್ಲಿನ ರಾಜಕೀಯ ಹತ್ಯೆಗಳಿಗೆ ಬಿಜೆಪಿ ಕಾರ್ಯಕರ್ತರು ಬಲಿಪಶುಗಳಾಗಿದ್ದಾರೆ ಎಂದು ಷಾ ಹೇಳಿದರು.

ಎಡಪಕ್ಷಗಳ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿ ಹಮ್ಮಿಕೊಳ್ಳಲಾಗಿರುವ 15 ದಿನಗಳ ಜನರಕ್ಷಾ ಯಾತ್ರೆಗೆ ಷಾ ಅವರು ಚಾಲನೆ ನೀಡಿದರು. ಕೇರಳದ ಎಡಪಂಥೀಯ ಸರ್ಕಾರದ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

2001ರಿಂದ ಕೇರಳದಲ್ಲಿ ಬಿಜೆಪಿಯ 120 ಕಾರ್ಯಕರ್ತರ ಹತ್ಯೆ ಆಗಿದೆ. ಅದರಲ್ಲಿ 84 ಹತ್ಯೆಗಳು ಕಣ್ಣೂರಿನಲ್ಲಿಯೇ ನಡೆದಿವೆ. ಕಳೆದ ವರ್ಷ ಸಿಪಿಎಂ ಅಧಿಕಾರಕ್ಕೆ ಬಂದ ಬಳಿಕ ಕಣ್ಣೂರಿನಲ್ಲಿ 14 ಹತ್ಯೆ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ

ಕಾಸರಗೋಡು: ಬಿಜೆಪಿ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಪಯ್ಯನ್ನೂರಿನಿಂದ ತಿರುವನಂತಪುರಕ್ಕೆ ಹಮ್ಮಿಕೊಂಡಿದ್ದ ಜನರಕ್ಷಾ ಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಪಳ್ಳಿಕೆರೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶ್ರೀಕಾಂತ್ ಸ್ಥಳಕ್ಕೆ ಧಾವಿಸಿ ಕಾರ್ಯಕರ್ತರ ಜತೆ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಪೊಲೀಸರು ಬಂದು ನಾಯಕರ ಜತೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಘರ್ಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆದ್ದಾರಿಯ ಎರಡೂ ಕಡೆ ಭಾರೀ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಮೂವರಿಗೆ ಗಾಯ: ಪಾದಯಾತ್ರೆ ಅಂಗವಾಗಿ ನೀಲೇಶ್ವರ ಜಂಕ್ಷನ್‌ನಲ್ಲಿ ಸೋಮವಾರ ತಳಿರು ತೋರಣ ಕಟ್ಟುತ್ತಿದ್ದ ವೇಳೆ ಸಿಪಿಎಂ ಮತ್ತು ಡಿವೈಎಫ್ಐ ಕಾರ್ಯಕರ್ತರ ಗುಂಪು ದಾಳಿ ನಡೆಸಿ ಮೂವರನ್ನು ಗಾಯಗೊಳಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಪಕ್ಷದ ತ್ರಿಕರಿಪ್ಪುರ ಮಂಡಲ ಕಾರ್ಯದರ್ಶಿ ವಿಜಯಕುಮಾರ್, ಪಕ್ಷದ ನೀಲೇಶ್ವರ ನಗರ ಸಭಾ ಅಧ್ಯಕ್ಷ ಸುಕುಮಾರನ್, ಬಿಎಂಎಸ್ ವಲಯ ಅಧ್ಯಕ್ಷ ಪಿ. ಕೃಷ್ಣಕುಮಾರ್ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತೋರಣ ಕಟ್ಟುತ್ತಿದ್ದ ಕಾರ್ಯಕರ್ತರ ಮೇಲೆ ಸಿಪಿಎಂ, ಡಿವೈಎಫ್ಐ ಕಾರ್ಯಕರ್ತರು ಮುಗಿಬಿದ್ದು, ಒಂದು ಬೈಕ್‌ ಅನ್ನು ಹಾನಿಗೊಳಿಸಿದ್ದಾರೆ. ಭಯೋತ್ಪಾದನೆ ನಡೆಸುತ್ತಿರುವ ಸಿಪಿಎಂನಿಂದ ಜನರು ಭೀತರಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ.

(ಕಾಸರಗೋಡಿನ ನೀಲೇಶ್ವರದಲ್ಲಿ ಬಿಜೆಪಿ ಪಾದಯಾತ್ರೆಗೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟದಿಂದ ಹಾನಿಗೀಡಾದ ಬಸ್‌)

ಪಯ್ಯನ್ನೂರಿನಿಂದ ಆರಂಭಿಸಿದ ಜನ ರಕ್ಷಾ ಯಾತ್ರೆ ನೋಡಲು ಸಿಪಿಎಂ ಕಾರ್ಯಕರ್ತರು ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪಿಲಾತರ ತನಕ ಅಮಿತ್‌ ಷಾ ಕಾರ್ಯಕರ್ತರ ಜತೆಯಲ್ಲಿ ನಡೆದರು. ಅಮಿತ್‌ ಷಾ ಜತೆಯಲ್ಲಿ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಇದ್ದರು. ಬುಧವಾರ ಪಾದಯಾತ್ರೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ.

ಮಂಗಳೂರು ಕಾರ್ಯಕ್ರಮ ರದ್ದು

ಮಂಗಳೂರು: ದೆಹಲಿಯಲ್ಲಿ ತುರ್ತು ಸಭೆ ಕರೆದಿರುವುದರಿಂದ ಅಮಿತ್ ಷಾ ಮಂಗಳವಾರ ರಾತ್ರಿ ದೆಹಲಿಗೆ ತೆರಳಿದ್ದು, ಬುಧವಾರ (ಅ.4) ಮಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್‌ ಮಠಂದೂರು, ಬುಧವಾರ ಮಧ್ಯಾಹ್ನ ನಗರದ ಓಷಿಯನ್‌ ಪರ್ಲ್‌ನಲ್ಲಿ ಆಯೋಜಿಸಿದ್ದ ಪ್ರಮುಖರ ಸಭೆ ಹಾಗೂ ಸಂಜೆ ಟಿಎಂಎ ಪೈ ಹಾಲ್‌ನಲ್ಲಿ ನಡೆಯಬೇಕಿದ್ದ ಗಣ್ಯರ ಜತೆಗಿನ ಸಂವಾದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ನಾಯಕರ ಸೂಚನೆಯ ಮೇರೆಗೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಬರುವ ದಿನಗಳಲ್ಲಿ ಅಮಿತ್‌ ಷಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಷಾ ಅವರ ದಿನಾಂಕವನ್ನು ಪಡೆದು, ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಅಮಿತ್ ಷಾ ಅವರ ತುರ್ತು ನಿರ್ಗಮನದ ಕಾರಣ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಕೇರಳದ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು.

**

ಕೇರಳದಲ್ಲಿ ನಡೆದಿರುವ ಎಲ್ಲ ರಾಜಕೀಯ ಹತ್ಯೆಗಳಿಗೆ ಸಿಪಿಎಂ ಮುಖಂಡ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೇ ಹೊಣೆ.

–ಅಮಿತ್‌ ಷಾ, ಬಿಜೆಪಿ ಅಧ್ಯಕ್ಷ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry