ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದುವೆ ಅಸಿಂಧು: ಹೈಕೋರ್ಟ್‌ಗೆ ಹಕ್ಕಿದೆಯೇ’

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗಮನ ಸೆಳೆದಿರುವ ಕೇರಳದ ವಿವಾದಿತ ಲವ್‌ ಜಿಹಾದ್‌ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ತಿರುವು ಪಡೆದಿದೆ.

ಹಿಂದೂ ಧರ್ಮದ ಅಖಿಲಾ (ಹಾದಿಯಾ) ಮತ್ತು ಮುಸ್ಲಿಂ ಧರ್ಮದ ಶಫಿನ್‌ ಜಹಾನ್‌ ಅವರ ಅಂತರ್‌ ಧರ್ಮೀಯ ವಿವಾಹ ಅಸಿಂಧು ಎಂದು ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪುನ್ನೇ ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ. ಈ ಪ್ರಕರಣ ‘ಲವ್‌ ಜಿಹಾದ್‌’ ಬಣ್ಣ ಪಡೆದ ಕಾರಣಕ್ಕೆ ನ್ಯಾಯಾಲಯ ಮೆಟ್ಟಿಲೇರಿತ್ತು.

ಲವ್‌ ಜಿಹಾದ್‌ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ಸಂವಿಧಾನದ 226ನೇ ವಿಧಿಯ ಅಡಿ ಈ ವಿವಾಹ ಹೇಗೆ ಅಸಿಂಧುವಾಗುತ್ತದೆ ಎಂದು ಪರಿಶೀಲಿಸುವುದಾಗಿ ಹೇಳಿತು.

24 ವರ್ಷದ ಯುವತಿಯೊಬ್ಬಳನ್ನು ಪಾಲಕರ ವಶಕ್ಕೆ ಒಪ್ಪಿಸಿದ ಕೇರಳ ಹೈಕೋರ್ಟ್‌ ನಿರ್ಧಾರದ ಬಗ್ಗೆಯೂ ನ್ಯಾಯಮೂರ್ತಿಗಳು ಆಶ್ಚರ್ಯ ವ್ಯಕ್ತಪಡಿಸಿದರು. ಪ್ರೌಢಾವಸ್ಥೆಗೆ ತಲುಪಿದ ಯುವತಿಯೊಬ್ಬಳ ಜೀವನವನ್ನು ಆಕೆಯ ತಂದೆ ಹೇಗೆ ನಿರ್ದೇಶಿಸಲು ಸಾಧ್ಯ ಎಂದರು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 9ಕ್ಕೆ ಮುಂದೂಡಿದರು.

ಹಾದಿಯಾ ಮತ್ತು ಶಫಿನ್‌ ಜಹಾನ್‌ ಅಂತರ್‌ ಧರ್ಮೀಯ ವಿವಾಹವನ್ನು ಅಸಿಂಧುಗೊಳಿಸಿ ಕೇರಳ ಹೈಕೋರ್ಟ್ ಇದೇ ಮೇ 25ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಶಫಿನ್‌ ಮೇಲ್ಮನವಿ ಸಲ್ಲಿಸಿದ್ದರು.


ಎನ್‌ಐಎ ತನಿಖೆ ಬೇಡ:

ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸುತ್ತಿರುವ ತನಿಖೆಯನ್ನು ಸ್ಥಗಿತಗೊಳಿಸುವಂತೆ ಶಫಿನ್ ಪರ ವಕೀಲ ದುಷ್ಯಂತ್ ದವೆ ಮನವಿ ಮಾಡಿದರು.

ಯುವತಿ ಅಖಿಲಾ (ಹಾದಿಯಾ) ತಂದೆ ಸಲ್ಲಿಸಿದ ಹೇಬಿಯಸ್‌ ಕಾರ್ಪಸ್‌ ಅರ್ಜಿಯಲ್ಲಾಗಲಿ ಇಲ್ಲವೇ ಹೈಕೋರ್ಟ್‌ ತೀರ್ಪಿನಲ್ಲಾಗಲಿ ಎನ್‌ಐಎ ತನಿಖೆಯ ಬಗ್ಗೆ ಪ್ರಸ್ತಾಪ ಇಲ್ಲ. ಹೀಗಾಗಿ ಎನ್‌ಐಎ ತನಿಖೆ ನಿಲ್ಲಿಸಲು ನಿರ್ದೇಶನ ನೀಡಬೇಕು ಎಂದು ಅವರು ಕೋರಿದರು.

ಇದಕ್ಕೆ ತೀವ್ರ ಆಕ್ಷೇ‍ಪ ವ್ಯಕ್ತಪಡಿಸಿದ ಎನ್‌ಐಎ ಪರ ವಕೀಲ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ಆರಂಭಿಸಲಾಗಿದೆ. ಇದಕ್ಕೆ ಅರ್ಜಿದಾರರ ಪರ ವಕೀಲ ಕಪಿಲ್‌ ಸಿಬಲ್ ಸಹ ಸಮ್ಮತಿ ಸೂಚಿಸಿದ್ದರು ಎಂದರು.

‘ಕೇರಳದಲ್ಲಿ ಎಡ ಪಕ್ಷ ಅಧಿಕಾರದಲ್ಲಿದೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದೆ’ ಎಂದು ಅರ್ಜಿದಾರರ ಪರ ವಕೀಲ ದವೆ ಆರೋಪಿಸಿದರು.

ಕೇರಳ ಹೈಕೋರ್ಟ್ ಆದೇಶದಂತೆ ಪಾಲಕರ ವಶದಲ್ಲಿರುವ ಹಾದಿಯಾಳನ್ನು (ಅಖಿಲಾ) ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಯುವತಿಯನ್ನು ಆಕೆಯ ಪೋಷಕರು ಮನೆಯಲ್ಲಿ ಕೂಡಿ ಹಾಕಿದ್ದು, ಪತಿ ಶಫಿನ್‌ ಸೇರಿದಂತೆ ಯಾರಿಗೂ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಆಕೆಯ ಸ್ಥಿತಿ ಹೇಗಿದೆಯೋ ಗೊತ್ತಿಲ್ಲ ಎಂದು ದವೆ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT