ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಖಭೌತ ವಿಜ್ಞಾನಿಗಳಿಗೆ ನೊಬೆಲ್‌ ಭೌತವಿಜ್ಞಾನ ಪ್ರಶಸ್ತಿ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌ : ಗುರುತ್ವಾಕರ್ಷಣ ಅಲೆಗಳ ಸಂಶೋಧನೆಗಾಗಿ ಅಮೆರಿಕದ ಖಭೌತ ವಿಜ್ಞಾನಿಗಳಾದ ಬ್ಯಾರಿ ಬ್ಯಾರಿಶ್‌, ಕಿಪ್‌ ಥೋರ್ನ್‌ ಮತ್ತು ರೈನರ್‌ ವೈಸ್ಸ್‌ ಅವರು ನೊಬೆಲ್‌ ಭೌತವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬ್ರಹ್ಮಾಂಡದಲ್ಲಿನ ಕಪ್ಪು ರಂಧ್ರಗಳ ಪರಸ್ಪರ ಡಿಕ್ಕಿ ಅಥವಾ ಅವುಗಳ ಸ್ಫೋಟದಿಂದ ಉಂಟಾಗುವ ಗುರುತ್ವಾಕರ್ಷಣ ಅಲೆಗಳ ಕುರಿತ ಸಂಶೋಧನೆಗೆ ಮೂವರಿಗೂ ಈ ಗೌರವ ಸಂದಿದೆ.

ಆಲ್ಬರ್ಟ್‌ ಐನ್‌ಸ್ಟೀನ್‌ ಅವರು ಶತಮಾನದ ಹಿಂದೆಯೇ ತಮ್ಮ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಅಧ್ಯಯನದಲ್ಲಿ ಈ ಬಗ್ಗೆ ಊಹೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಅದು 2015ರಲ್ಲಿ ಪತ್ತೆಯಾಗಿತ್ತು. ಈ ವಿದ್ಯಮಾನವು ಬ್ರಹ್ಮಾಂಡದ ಬಗೆಗಿನ ಕುತೂಹಲವನ್ನು ಕೆರಳಿಸಿತ್ತು.

‘ಖಭೌತ ವಿಜ್ಞಾನಿಗಳ ಸಂಶೋಧನೆ ಜಗತ್ತನ್ನು ಚಕಿತಗೊಳಿಸಿದೆ’ ಎಂದು ನೊಬೆಲ್‌ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸ್ವೀಡಿಶ್‌ ರಾಯಲ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಮುಖ್ಯಸ್ಥ ಗೋರನ್‌ ಕೆ. ಹ್ಯಾನ್‌ಸ್ಸೊನ್‌ ಅಭಿಪ್ರಾಯಪಟ್ಟಿದ್ದಾರೆ.

ಖಭೌತ ವಿಜ್ಞಾನಿಗಳು ಗುರತ್ವಾಕರ್ಷಣ ಅಲೆಗಳ ಕುರಿತ ದಶಕಗಳ ಸಂಶೋಧನೆಯನ್ನು 2015ರಲ್ಲಿ ಪೂರ್ಣಗೊಳಿಸಿದ್ದರು. 2016ರಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಥೋರ್ನ್‌ ಮತ್ತು ವೈಸ್ಸ್‌ ಅವರು ಒಗ್ಗೂಡಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಗುರುತ್ವಾಕರ್ಷಣ ಅಲೆಗಳ ಸಂಶೋಧನೆಗಾಗಿ ವೀಕ್ಷಣಾಲಯವನ್ನು ಆರಂಭಿಸಿದ್ದರು. ಬ್ಯಾರಿಶ್‌ ಅವರು ಸಂಶೋಧನೆಯನ್ನು ಪೂರ್ಣಗೊಳಿಸಿದರು.

ನೊಬೆಲ್‌ ಭೌತವಿಜ್ಞಾನ ಪ್ರಶಸ್ತಿ ಮೊತ್ತ ₹ 7.19 ಕೋಟಿಯನ್ನು ಈ ಮೂವರೂ ವಿಜ್ಞಾನಿಗಳು ಹಂಚಿಕೊಳ್ಳಲಿದ್ದಾರೆ.

ಕಳೆದ ವರ್ಷ ಬ್ರಿಟನ್‌ ವಿಜ್ಞಾನಿ ಡೇವಿಡ್‌ ಥೌಲೆಸ್ಸ್‌, ಡಂಕನ್‌ ಹಲ್ದಾನ್ ಮತ್ತು ಮೈಕಲ್‌ ಕೊಸ್ಟರ್ಲಿಟ್ಜ್‌ ಅವರಿಗೆ ನೊಬೆಲ್‌ ಭೌತವಿಜ್ಞಾನಿ ಪ್ರಶಸ್ತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT