ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ಸಿಕ್ಕಿಬಿದ್ದ ಆದಿಕೇಶವಲು ಮೊಮ್ಮಗ

ಅಪಘಾತ, ಎನ್‌ಡಿಪಿಎಸ್ ಪ್ರಕರಣದ ಆರೋಪಿ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಉದ್ಯಮಿ ದಿ.ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು (27), ಮಡಿಕೇರಿಯಲ್ಲಿರುವ ತನ್ನ ಅತಿಥಿಗೃಹದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ತನ್ನ ವಕೀಲರ ಮೂಲಕ ನಗರದ 33ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಬುಧವಾರಕ್ಕೆ ಮುಂದೂಡಿದ್ದರು.

ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಸ್ನೇಹಿತನ ಮೂಲಕ ಪೊಲೀಸರಿಗೆ ಕರೆ ಮಾಡಿಸಿದ್ದ ಆತ, ತಾನು ಮಡಿಕೇರಿಯಲ್ಲಿರುವುದಾಗಿ ಹಾಗೂ ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಕೂಡಲೇ ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ನೇತೃತ್ವದ ತಂಡ ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದೆ.

ಸೆ.27ರ ರಾತ್ರಿ 12.30ರ ಸುಮಾರಿಗೆ ಪಾನಮತ್ತನಾಗಿ ಬೆನ್ಜ್‌ ಎಸ್‌ಯುವಿ ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್‌ ಎಂಡ್‌ ವೃತ್ತದಲ್ಲಿ ಓಮ್ನಿ ವ್ಯಾನ್‌ಗೆ ಡಿಕ್ಕಿ ಮಾಡಿದ್ದ. ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದರು. ಎಸ್‌ಯುವಿಯಲ್ಲಿ 110 ಗ್ರಾಂ ಗಾಂಜಾ ಸಹ ಪತ್ತೆಯಾಗಿತ್ತು.

ಅಪಘಾತ ಮಾಡಿ ಸ್ಥಳೀಯರಿಂದ ಹಲ್ಲೆಗೊಳಗಾಗಿದ್ದ ಗೀತಾವಿಷ್ಣು, ತನ್ನ ಕುಟುಂಬದ ಮಾಲೀಕತ್ವದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ, ಸೆ.29ರ ಬೆಳಗಿನ ಜಾವ ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದಿಂದ ಪರಾರಿಯಾಗಿದ್ದ.

ಇಷ್ಟು ದಿನ ಹೈದರಾಬಾದ್, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಈತ, ಸೋಮವಾರ ರಾತ್ರಿ ಮಡಿಕೇರಿಗೆ ವಾಪಸಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT