ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸುಳಿದ ಉಗ್ರರ ದಮನ

ಶ್ರೀನಗರ; ಒಬ್ಬ ಯೋಧನ ಸಾವು * ಪ್ರತಿದಾಳಿಯಲ್ಲಿ ಮೂವರು ಉಗ್ರರ ಹತ್ಯೆ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಶ್ರೀನಗರ: ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಶಿಬಿರದ ಮೇಲೆ ಉಗ್ರರು ಮಂಗಳವಾರ ಬೆಳಗಿನ ಜಾವ ಗುಂಡು ಮತ್ತು ಗ್ರೆನೇಡ್ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರು ಸತ್ತಿದ್ದಾರೆ.

‘ವಿಮಾನ ನಿಲ್ದಾಣದ ಮುಖ್ಯದ್ವಾರದ ಎದುರೇ ಬಿಎಸ್‌ಎಫ್‌ನ 182ನೇ ತುಕಡಿಯ ಶಿಬಿರವಿದೆ. ಈ ತುಕಡಿ ವಿಮಾನ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುತ್ತದೆ. ಬೆಳಗಿನ ಜಾವ 4.15ರ ಸುಮಾರಿಗೆ ಉಗ್ರರು ಶಿಬಿರದೊಳಗೆ ನುಗ್ಗಿದ್ದಾರೆ. ಉಗ್ರರು ಸೇನಾ ಸಮವಸ್ತ್ರದಲ್ಲಿ ಇದ್ದುದ್ದರಿಂದ ಯೋಧರು ಅವರನ್ನು ನಿರ್ಲಕ್ಷಿಸಿದ್ದಾರೆ. ಆಗ ತಮ್ಮ ಎದುರಿಗೆ ಬಂದ ಸಿಆರ್‌ಪಿಎಫ್‌ನ ಇನ್ಸ್‌ಪೆಕ್ಟರ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಮುನೀರ್ ಖಾನ್ ಮಾಹಿತಿ ನೀಡಿದ್ದಾರೆ.

‘ನಂತರ ಉಗ್ರರು ಯೋಧರತ್ತ ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಗ್ರೆನೇಡ್‌ಗಳ ಸ್ಫೋಟಕ್ಕೆ ಮೂವರು ಯೋಧರು ಗಾಯಗೊಂಡರು. ತಕ್ಷಣವೇ  ಪ್ರತಿದಾಳಿ ಆರಂಭಿಸಲಾಯಿತು. ಇನ್ನೂ ಕತ್ತಲು ಇದ್ದ ಕಾರಣ ಕಾರ್ಯಾಚರಣೆ ಕಷ್ಟವಾಯಿತು. ಬೆಳಿಗ್ಗೆ 6ರ ಹೊತ್ತಿಗೆ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಯಿತು. ಆಗ ಉಳಿದ ಇಬ್ಬರು ಉಗ್ರರೂ ಬೇರೆ–ಬೇರೆ ದಿಕ್ಕುಗಳತ್ತ ಪರಾರಿಯಾದರು. ಆನಂತರ ಇಬ್ಬರೂ ಬೇರೆ ಬೇರೆ ಕಟ್ಟಡಗಳಲ್ಲಿ ಅವಿತುಕೊಂಡು ದಾಳಿ ಮುಂದುವರಿಸಿದರು. ಮಧ್ಯಾಹ್ನದ ವೇಳೆಗೆ ಇಬ್ಬರನ್ನೂ ಹೊಡೆದುರುಳಿಸಲಾಯಿತು’ ಎಂದು ಅವರು ಕಾರ್ಯಾಚರಣೆಯನ್ನು ವಿವರಿಸಿದರು.

‘ಕಟ್ಟಡಗಳ ಒಳಗೆ ಅವಿತುಕೊಳ್ಳುವ ಮುನ್ನ ಉಗ್ರರು ಶಿಬಿರದ ಆವರಣದಲ್ಲಿದ್ದ ಪೊದೆಗಳಲ್ಲಿ ಬಹುಕಾಲ ಅಡಗಿಕೊಂಡಿದ್ದರು. ಆಗ ಅವರ ವಿರುದ್ಧ ವಾಯುದಾಳಿ ನಡೆಸಲು ಅವಕಾಶವಿತ್ತು. ಆದರೆ ಶಿಬಿರಕ್ಕೆ ಹೊಂದಿಕೊಂಡಂತೆ ಜನವಸತಿ ಪ್ರದೇಶವಿದೆ. ಹೀಗಾಗಿ ವಾಯುದಾಳಿಯ ಯೋಚನೆಯನ್ನು ಕೈಬಿಡಲಾಯಿತು. ಹೀಗಾಗಿಯೇ ಕಾರ್ಯಾಚರಣೆ ಮಧ್ಯಾಹ್ನದವರೆಗೂ ನಡೆಯಿತು. ಸಾರ್ವಜನಿಕರ ಜೀವ ಮತ್ತು ಆಸ್ತಿ–ಪಾಸ್ತಿಗೆ ಹಾನಿಯಾಗದಂತೆ ಕಾರ್ಯಾಚರಣೆ ಮುಗಿಸಿದ್ದೇವೆ’ ಎಂದು ಮುನೀರ್ ಖಾನ್ ಮಾಹಿತಿ ನೀಡಿದ್ದಾರೆ.

‘ಶಿಬಿರಕ್ಕೆ ಹೊಂದಿಕೊಂಡಿರುವ ವಸತಿಪ್ರದೇಶದಿಂದ, ಬೇಲಿಯನ್ನು ಕತ್ತರಿಸಿಕೊಂಡು ಉಗ್ರರು ಒಳಬಂದಿದ್ದಾರೆ. ಈ ಶಿಬಿರವನ್ನು ಪ್ರವೇಶಿಸಲು ನಾಲ್ಕು ಹಂತದ ಭದ್ರತೆಯನ್ನು ಭೇದಿಸಬೇಕು. ಸ್ಥಳೀಯರ ನೆರವಿಲ್ಲದೆ ಉಗ್ರರು ಇಲ್ಲಿಯವರೆಗೂ ಬರಲು ಸಾಧ್ಯವಿಲ್ಲ. ಜೆಇಎಂ ಬಗ್ಗೆ ಒಲವಿರುವ ವ್ಯಕ್ತಿಯೊಬ್ಬ ಈ ಉಗ್ರರನ್ನು ಶಿಬಿರದ ಬೇಲಿಯವರೆಗೂ ಕರೆದುಕೊಂಡು ಬಂದಿರುವುದು ದೃಢಪಟ್ಟಿದೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಉಗ್ರರು ಶಿಬಿರದ ಆವರಣದಲ್ಲಿ ಬಾಂಬ್‌ಗಳನ್ನು ಅಳವಡಿಸಿರುವ ಸಾಧ್ಯತೆ ಇದೆ. ಹೀಗಾಗಿ ಬಾಂಬ್‌ಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

₹1 ಕೋಟಿ ಪರಿಹಾರ: ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಗೃಹಸಚಿವ ರಾಜನಾಥ ಸಿಂಗ್ ಯೋಧರಿಗೆ ಅಭಿನಂದನೆ ಹೇಳಿದ್ದಾರೆ. ಜತೆಗೆ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಬ್ರಿಜು ಕಿಶೋರ್ ಯಾದವ್ ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ.

**

‘ಸರ್ಕಾರದ ವೈಫಲ್ಯ’

ನವದೆಹಲಿ: ‘ದೇಶದ ಭದ್ರತೆ ವಿಚಾರದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಈ ದಾಳಿ ಸಾಬೀತು ಮಾಡಿದೆ. ಈ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ಹೇಗೆ ರಾಜಿಯಾಗಿದೆ ಎಂಬುದನ್ನೂ ಇದು ತೋರಿಸಿದೆ. ಮೋದಿ ಮತ್ತು ಅವರ ಸರ್ಕಾರ ಏನು ಮಾಡುತ್ತಿದೆ ಎಂಬುದೇ ಈಗಿನ ಪ್ರಶ್ನೆ. ನಾವೀಗ 56 ಇಂಚಿನ ಎದೆಯನ್ನು ನೋಡಬಹುದೇ?’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ ಮಾಡಿದ್ದಾರೆ.

**

‘ಇನ್ನೂ 6–7 ಉಗ್ರರು..., ಕಟ್ಟೆಚ್ಚರ’

ಪಾಕಿಸ್ತಾನದ ಉಗ್ರ ಸಂಘಟನೆ ಜೈಷ್‌ ಎ ಮೊಹಮ್ಮದ್ (ಜೆಇಎಂ) ಈ ದಾಳಿಯ ಹೊಣೆಯ ಹೊತ್ತುಕೊಂಡಿದೆ. ಮುನೀರ್ ಖಾನ್ ಸಹ ಇದನ್ನೇ ದೃಢಪಡಿಸಿದ್ದಾರೆ. ‘ಜೆಇಎಂ ಉಗ್ರರು ಮಾತ್ರ ಇಂತಹ ದಾಳಿ ನಡೆಸುತ್ತಾರೆ’ ಎಂದು ಅವರು ಹೇಳಿದ್ದಾರೆ.

‘ಜೆಇಎಂನಿಂದ ತರಬೇತಿ ಪಡೆದಿರುವ 16–17 ಉಗ್ರರು ಕಳೆದ ತಿಂಗಳೇ ಕಾಶ್ಮೀರಕ್ಕೆ ನುಸುಳಿಸಿದ್ದಾರೆ. ವಿವಿಧ ಕಾರ್ಯಾಚರಣೆಯಲ್ಲಿ ಈಗಾಗಲೇ ಇವರಲ್ಲಿ ಹತ್ತು ಉಗ್ರರನ್ನು ಕೊಂದಿದ್ದೇವೆ. ಉಳಿದವರು ಯಾವುದೇ ಸಮಯದಲ್ಲಿ ದಾಳಿ ನಡೆಸುವ ಅಪಾಯವಿದೆ. ಹೀಗಾಗಿ ಕಟ್ಟೆಚ್ಚರ ವಹಿಸಿದ್ದೇವೆ’ ಎಂದು ಮುನೀರ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT