ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಬೆಳೆಗೆ ಕರಿ ಕಂಬಳಿ ಹುಳು ಕಾಟ

ತುಮಕೂರು: ಗುಬ್ಬಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಮಸ್ಯೆ; ಆತಂಕದಲ್ಲಿ ರೈತರು
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚೇಳೂರು (ತುಮಕೂರು ಜಿಲ್ಲೆ): ಹೋಬಳಿಯ ಸುಮಾರು 3,050 ಹೆಕ್ಟೇರ್‌ನಲ್ಲಿ ಈ ವರ್ಷ ಬೆಳೆಯಲಾದ ರಾಗಿ ಬೆಳೆಯಲ್ಲಿ ಸುಮಾರು 2,000 ಸಾವಿರ ಹೆಕ್ಟೇರ್‌ನಲ್ಲಿನ ಬೆಳೆ ಕರಿ ಕಂಬಳಿ ಹುಳುಗಳ ಕಾಟಕ್ಕೆ ನಾಶವಾಗುತ್ತಿದೆ.

ರಾಗಿ ಬೆಳೆ ಬೆಳೆದ ರೈತರು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದರು. ಈಚೆಗೆ ಮಳೆಯೂ ಚೆನ್ನಾಗಿ ಸುರಿಯುತ್ತಿರುವುದರಿಂದ ಹೆಚ್ಚಿನ ಭರವಸೆ ಹೊಂದಿದ್ದರು. ಆದರೆ, ಇದ್ದಕ್ಕಿದ್ದಂತೆಯೇ ಕರಿ ಕಂಬಳಿ ಹುಳು ಕಾಟ ಹೆಚ್ಚಾಗಿ ದಿನದಿಂದ ದಿನಕ್ಕೆ ಬೆಳೆ ಹಾಳಾಗುತ್ತಿರುವುದು ರೈತರಿಗೆ ದಿಕ್ಕು ತೋಚದಂತೆ ಮಾಡಿದೆ.

ಹೋಬಳಿಯ ಮಾದೇನಹಳ್ಳಿ, ಕೊಡಿಯಾಲ, ತಾಳೆಕೊಪ್ಪ, ರಂಗನಹಳ್ಳಿ, ಸಾತೇನಹಳ್ಳಿ ಸೇರಿ ಇತರ ಕಡೆಗಳಲ್ಲಿ ಬೆಳೆದ ರಾಗಿ ಬೆಳೆ ಹುಳಕ್ಕೆ ತುತ್ತಾಗಿದೆ.

ಹೊಲಕ್ಕೆ ಕಾಲಿಟ್ಟರೆ ಬೆಳೆಯ ತುಂಬೆಲ್ಲ ಬರೀ ಕರಿ ಕಂಬಳಿ ಹುಳುಗಳು, ಕೀಟನಾಶಕ ಸಿಂಪರಣೆ ಮಾಡಿದರೂ ಹುಳುಗಳು ಕಡಿಮೆ ಆಗಿಲ್ಲ. ಬರೀ ಹಣ ಖರ್ಚಾಗುತ್ತಿದೆ ಎಂದು ರೈತರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹುಳುಗಳ ನಿಯಂತ್ರಣಕ್ಕೆ ಉಚಿತವಾಗಿ ಕೀಟ ನಾಶಕ ವಿತರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಹುಳು ನಿಯಂತ್ರಣ ಆಗುವವರೆಗೂ ಕೃಷಿ ಇಲಾಖೆ ಅಧಿಕಾರಿಗಳು, ತಜ್ಞರು ರೈತರಿಗೆ ಮಾರ್ಗದರ್ಶನ ಮಾಡಬೇಕು. ಬೇಗ ಹುಳು ನಿಯಂತ್ರಣವಾದರೆ ಒಂದಿಷ್ಟು ಬೆಳೆ ಉಳಿಸಿಕೊಳ್ಳಬಹುದು. ಇಲ್ಲವಾದರೆ ಹುಳುಗಳ ಕಾಟಕ್ಕೆ ಬೆಳೆ ಕಳೆದುಕೊಂಡು ಮತ್ತೆ ನಷ್ಟಕ್ಕೆ ತುತ್ತಾಗುತ್ತೇವೆ ಎಂದು ರೈತ ಚಿಕ್ಕಭೈರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಗಿ ಬೆಳೆ ಹಾಕಿದಾಗ ಕರಿ ಕಂಬಳಿ ಹುಳುಗಳು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಇರುತ್ತಿತ್ತು. ಆದರೆ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದೆ. ನಮ್ಮ ಜೀವಮಾನದಲ್ಲಿಯೇ ಇಷ್ಟು ಹೆಚ್ಚಿನ ಹುಳುಗಳನ್ನು ಕಂಡಿರಲಿಲ್ಲ ಎಂದು ಇನ್ನೊಬ್ಬ ರೈತರಾದ ರಂಗಸ್ವಾಮಿ ಸಮಸ್ಯೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT