ಸೋಮವಾರ, ಜೂಲೈ 6, 2020
23 °C
ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

‘ಪ್ರಭುತ್ವದ ವಿರುದ್ಧ ಮಾತನಾಡಿದರೆ ಜೀವ ಭಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಭುತ್ವದ ವಿರುದ್ಧ ಮಾತನಾಡಿದರೆ ಜೀವ ಭಯ’

ಬೆಂಗಳೂರು: ‘ವೇದಿಕೆಯಲ್ಲಿ ನಿಂತು ಭಾರತೀಯಳಾಗಿ ನನ್ನ ಮನಸ್ಸಿನ ಭಾವನೆ ಹೇಳಿದರೆ, ಮನೆಗೆ ಜೀವಂತವಾಗಿ ಹೋಗುವುದಿಲ್ಲ ಎನ್ನುವ ಭಯ ಆವರಿಸಿದೆ’ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಆತಂಕ ವ್ಯಕ್ತಪಡಿಸಿದರು.

‘ಪ್ರಭುತ್ವದ ವಿರುದ್ಧ ಮಾತನಾಡಿ ಬದುಕಲು ಸಾಧ್ಯವಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಮೂರು ವರ್ಷಗಳಿಂದ ಈ ಪರಿಸ್ಥಿತಿ ಇದೆ. ಹಿಟ್ಲರ್‌ ಸಂಸ್ಕೃತಿ ಇಲ್ಲೂ ಜೀವ ತಳೆಯುತ್ತಿದೆ’ ಎಂದು ಟೀಕಿಸಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ ‘ಮಹಾಕವಿ ಪಂಪ ನಿನ್ನೆ–ಇಂದು–ನಾಳೆ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ, ‘ಪಂಪನ ಕಾಲದಲ್ಲಿ ರಾಜಪ್ರಭುತ್ವ ಇದ್ದರೂ, ಧೈರ್ಯವಾಗಿ ರಾಜನ ವಿರುದ್ಧ ಮಾತನಾಡಬಹುದಿತ್ತು. ಈಗ 21ನೇ ಶತಮಾನದಲ್ಲಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕವಿ ಸಿದ್ಧಲಿಂಗಯ್ಯ, ‘ಪ್ರಗತಿಪರ ಚಿಂತನೆ ಪಂಪನಿಂದಲೇ ಪ್ರಾರಂಭವಾಗಿದೆ. ಮನುಷ್ಯ ಜಾತಿ ತಾನೊಂದೇ ವಲಂ ಎನ್ನುವ ಮೂಲಕ ಜಗತ್ತಿಗೆ ಮೊದಲ ಮಾನವತಾ ಸಂದೇಶ ಸಾರಿದ ಕವಿ ಆತ. ಮನುಷ್ಯ–ಮನುಷ್ಯರ ನಡುವೆ ನಿರ್ಮಾಣವಾಗಿರುವ ಗೋಡೆಗಳನ್ನು ಒಡೆಯಲು, ಪಂಪ ಇಂದಿಗೂ ಪ್ರಸ್ತುತ’ ಎಂದರು.

‘ಯುದ್ಧ ವಿರೋಧಿ ನಿಲುವು, ಜ್ಯಾತ್ಯತೀತ ಧೋರಣೆಗಳನ್ನು ಪಂಪ ಆಗಲೇ ಪ್ರತಿಪಾದಿಸಿದ್ದ. ಇತ್ತೀಚೆಗೆ, ಜಾತಿ ಬಿಟ್ಟರೆ ಅಗೌರವಕ್ಕೆ ಒಳಗಾಗುತ್ತೀವೆ ಎಂಬ ಭ್ರಮೆಯಲ್ಲಿ ಬದುಕುವವರು ಹೆಚ್ಚಾಗಿದ್ದಾರೆ. ಇದರಿಂದ ಜಾತಿಗಳ ಟೌನ್‌ಶಿಪ್‌ಗಳು ನಿರ್ಮಾಣವಾಗುತ್ತಿವೆ. ಇದು ಅಪಾಯಕಾರಿ ಸೂಚನೆ’ ಎಂದು ಹೇಳಿದರು.

**

‘ಒಂದೂವರೆ ನಿಮಿಷದಲ್ಲಿ ನಾಡಗೀತೆ’

‘ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಾಡಗೀತೆ ಹಾಡುತ್ತಾರೆ. ಅದು ಸರಿಯಲ್ಲ. ನಾಡಗೀತೆಯನ್ನು ಒಂದೂವರೆ ನಿಮಿಷದೊಳಗೆ ಹಾಡಬೇಕು. ಮೊದಲ ಮತ್ತು ಕೊನೆಯ ಪ್ಯಾರಾಗಳನ್ನಷ್ಟೇ ಹಾಡುವಂತೆ ಸರ್ಕಾರ ನಿಯಮ ರೂಪಿಸಬೇಕು’ ಎಂದು ಕಮಲಾ ಹಂಪನಾ ಒತ್ತಾಯಿಸಿದರು.

**

ರಮ್‌ ಕುಡಿಯಲು ದಲಿತರು ಸೇನೆಗೆ ಸೇರಿದರೆ, ಅಮಲಿನಲ್ಲಿ ವಿರೋಧಿಗಳ ಬದಲು ನಮ್ಮವರನ್ನೇ ಕೊಲ್ಲಬಹುದು. ಇದರಿಂದ ರಮ್‌ ಹಾಗೂ ಮಾನವ ಸಂಪನ್ಮೂಲ ಎರಡೂ ವ್ಯರ್ಥ.

–ಸಿದ್ಧಲಿಂಗಯ್ಯ, ಕವಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.