ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್‌ಲಾ ಗೇಟ್ ಬಳಿ ದುರ್ಘಟನೆ: ಪ್ರಾಣ ತೆಗೆದ ‘ಸೆಲ್ಫಿ’

ವಂಡರ್‌ಲಾ ಗೇಟ್ ಬಳಿ ಹಳಿಗಳ ಮೇಲೆ ಸೆಲ್ಫಿ ತೆಗೆಯುವ ವೇಳೆ ದುರ್ಘಟನೆ
Last Updated 3 ಅಕ್ಟೋಬರ್ 2017, 19:51 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಇಲ್ಲಿನ ವಂಡರ್‌ಲಾ ಗೇಟ್‌ ಸೇತುವೆ ಬಳಿ ರೈಲು ಹಳಿಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮೈಮರೆತ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದರು.

ಬೆಂಗಳೂರಿನ ಹುಳಿಮಾವು ನಿವಾಸಿ ರೋಹಿತ್ (18), ಕೋರಮಂಗಲದ ಅಂಬೇಡ್ಕರ್ ನಗರದ ಪ್ರಭು ಆನಂದ್ (18) ಮತ್ತು ಬನಶಂಕರಿ ಎರಡನೇ ಹಂತದ ಪ್ರತೀಕ್ ರಾಯ್ಕರ್ (20) ಮೃತರು. ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆಯಿತು.

ಬೆಂಗಳೂರಿನ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳಾದ ಈ ಮೂವರು ಸ್ನೇಹಿತನ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರ ಬೆಳಿಗ್ಗೆ ವಂಡರ್‌ಲಾಗೆ ಪ್ರವಾಸಕ್ಕೆ ಬಂದಿದ್ದರು. ಉಳಿದ ಸ್ನೇಹಿತರು ಬರುವುದು ತಡವಾದ ಕಾರಣ ಬೈಕುಗಳನ್ನು ರೈಲು ಸೇತುವೆ ಸಮೀಪದ ಅಂಗಡಿಯೊಂದರ ಬಳಿ ನಿಲ್ಲಿಸಿ ರೈಲು ಹಳಿಗಳ ಬಳಿ ತೆರಳಿದ್ದರು. ಈ ವೇಳೆ ಹಳಿ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮೈಮರೆತಿದ್ದಾಗ ಬೆಂಗಳೂರು ಕಡೆಯಿಂದ ಬರುತ್ತಿದ್ದ ಗೋಲ್‌ಗುಂಬಜ್‌ ರೈಲಿಗೆ ಸಿಲುಕಿದರು ಎಂದು ರೈಲ್ವೆ ಪೊಲೀಸರು ವಿವರಿಸಿದರು.

ಮೂವರ ದೇಹಗಳು ಗುರುತು ಸಿಗದಷ್ಟು ಛಿದ್ರವಾಗಿದ್ದು, ಸ್ಥಳದಲ್ಲಿ ದೊರೆತ ಬ್ಯಾಗ್‌, ಗುರುತಿನ ಚೀಟಿಗಳ ಆಧಾರದಲ್ಲಿ ಅವರನ್ನು ಪತ್ತೆ ಮಾಡಲಾಯಿತು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್, ರಾಮನಗರ ಉಪವಿಭಾಗದ ಡಿವೈಎಸ್‍ಪಿ ಎಂ.ಕೆ.ತಮ್ಮಯ್ಯ, ರೈಲ್ವೆ ಡಿವೈಎಸ್‍ಪಿ ಟಿ.ಎನ್.ರಾಮಣ್ಣ ಭೇಟಿ ನೀಡಿದ್ದರು. ಬೆಂಗಳೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಕರ ಆಕ್ರಂದನ: ವಿಷಯ ತಿಳಿಯುತ್ತಲೇ ಮೂವರು ವಿದ್ಯಾರ್ಥಿಗಳ ಸಂಬಂಧಿಕರು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಹಳಿಗಳ ಮೇಲೆ ಮಾಂಸದ ಮುದ್ದೆಗಳಾಗಿ ಬಿದ್ದಿದ್ದ ಶವಗಳನ್ನು ಕಂಡು ತೀವ್ರ ಆಘಾತಗೊಂಡರು. ಅವರು ತೊಟ್ಟಿದ್ದ ಬಟ್ಟೆಗಳ ಆಧಾರದ ಮೇಲೆ ಗುರುತು ಹಿಡಿದರು.

‘ಕುಟುಂಬದವರಿಗೆ ಒಬ್ಬನೇ ಮಗ. ಹೊರಗೆ ಹೋಗಬೇಡ ಎಂದು ಹೇಳಿದ್ದೆವು. ಸ್ನೇಹಿತನ ಜನ್ಮದಿನದ ಆಚರಣೆಗೆ ಬಂದು ಇಲ್ಲಿ ತಾನೇ ಶವವಾಗಿದ್ದಾನೆ’ ಎಂದು ಮೃತ ರೋಹಿತ್‌ ಸಂಬಂಧಿ ಮದನ್‌ಕುಮಾರ್ ಎಂಬುವರು ಬೇಸರ ವ್ಯಕ್ತಪಡಿಸಿದರು.

**

ವಿದ್ಯಾರ್ಥಿಗಳು ಯಾವ ಕಾರಣಕ್ಕೆ ರೈಲ್ವೆ ಹಳಿ ಮೇಲೆ ಇಳಿದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಮೂರು ದೇಹಗಳು ಗುರುತು ಹಿಡಿಯಲು ಆಗದಷ್ಟು ಛಿದ್ರವಾಗಿವೆ

-ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT